ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಈ ಬಾರಿಯ ಸಕಲೇಶ್ವರಸ್ವಾಮಿ ದನಗಳ ಜಾತ್ರೆ- ವಸ್ತುಪ್ರದರ್ಶನ ನಡೆಸುವುದೆಲ್ಲಿ ಎಂಬ ಜಿಜ್ಞಾಸೆ ಪುರಸಭೆ ಪುರಪಿತೃಗಳನ್ನು ಕಾಡುತ್ತಿದೆ.ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ ನಡೆಯುವ ಸಕಲೇಶ್ವರಸ್ವಾಮಿ ರಥೋತ್ಸವದ ನಂತರ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನ ಹಮ್ಮಿಕೊಳ್ಳುವುದು ವಾಡಿಕೆಯಾಗಿದೆ. ಕಳೆದ ನಾಲ್ಕು ದಶಕಗಳಿಂದ ಪಟ್ಟಣದ ಸುಭಾಷ್ ಮೈದಾನ ಸಮೀಪದ ಹಳೇ ಸಂತೆ ಮೈದಾನದಲ್ಲಿ ದನಗಳ ಜಾತ್ರೆ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ೨೦೨೨ರಲ್ಲಿ ಹಳೇ ಸಂತೆ ಮೈದಾನ ಖಾಸಗಿ ಸ್ವತ್ತು ಎಂದು ನ್ಯಾಯಾಲಯ ಘೋಷಿಸಿರುವುದರಿಂದ ಇಲ್ಲಿ ಜಾತ್ರೆ ನಡೆಸಲು ಖಾಸಗಿ ವ್ಯಕ್ತಿ ಅವಕಾಶ ನೀಡುತ್ತಿಲ್ಲ. ಪರಿಣಾಮ ೨೦೨೩ರಲ್ಲಿ ಜಾತ್ರೆ ನಡೆಸುವುದೆಲ್ಲಿ ಎಂಬ ಸಮಸ್ಯೆ ತಲೆದೂರಿದ ವೇಳೆ ಅಂದಿನ ಪುರಸಭೆ ಆಡಳಿತಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಶೃತಿ, ಸಂಘಸಂಸ್ಥೆಗಳ ಮುಖಂಡರ ಸೂಚನೆಯಂತೆ ಟಾ.ಟಾ ಸಂಸ್ಥೆಗೆ ಸೇರಿದ ಜಮೀನಿನಲ್ಲಿ ಜಾತ್ರೆ ನಡೆಸಲು ಅಲ್ಲಿನ ಮಾಲೀಕರ ಮನವೊಲಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು. ಪಟ್ಟಣದ ಹೃದಯ ಭಾಗದ ಎತ್ತರದ ಸ್ಥಳದಲ್ಲಿ ಜಾತ್ರೆ ವಸ್ತು ಪ್ರದರ್ಶನ ನಡೆದಿದ್ದರಿಂದ ಜಾತ್ರೆಗೆ ಅತಿಹೆಚ್ಚಿನ ಜನರು ಸೇರುವ ಮೂಲಕ ಪುರಸಭೆಗೆ ಇತಿಹಾಸದಲ್ಲೆ ಹೆಚ್ಚಿನ ಅಂದರೆ ಸುಮಾರು ೨೦ ಲಕ್ಷಕ್ಕೂ ಅಧಿಕ ಆದಾಯ ಲಭಿಸಿತ್ತು. ಆದರೆ, ಈ ಬಾರಿ ಪುರಸಭೆ ಸದಸ್ಯರ ನಡುವೆ ಒಮ್ಮತವಿಲ್ಲದ ಕಾರಣ ಈ ಮೈದಾನ ಜಾತ್ರೆಗೆ ಲಭಿಸುವುದು ಅನುಮಾನವಾಗಿದ್ದು ಪರ್ಯಾಯ ಜಾಗಕ್ಕಾಗಿ ಪುರಸಭೆ ಆಡಳಿತ ತಲೆಕೆಡಿಸಿಕೊಂಡಿದೆ.
ಸಾಲು-ಸಾಲು ಸಭೆ: ಜಾತ್ರೆ ನಡೆಸುವ ಸ್ಥಳ ಅಂತಿಮಗೊಳಿಸುವ ಹಂತವಾಗಿ ಪುರಸಭೆ ಸದಸ್ಯರು ಮೂರು ಸುತ್ತಿನ ಸಭೆ ನಡೆಸಿದ್ದರೂ ಸ್ಥಳದ ಬಗ್ಗೆ ಅಂತಿಮ ನಿರ್ಣಯಕ್ಕೆ ಬರಲಾಗಿಲ್ಲ. ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಜಾತ್ರೆ ನಡೆಸಲು ಕೆಲವರು ಸೂಚಿಸಿದರೆ ಇದಕ್ಕೆ ಕೆಲವರು ಅಪಸ್ವರ ಎತ್ತುತ್ತಿದ್ದಾರೆ. ಇನ್ನೂ ಕೆಲವು ಪುರಸಭೆ ಸದಸ್ಯರು ಕಳೆದ ಬಾರಿ ಜಾತ್ರೆ ನಡೆದ ಟಾ.ಟಾ ಮೈದಾನದಲ್ಲಿ ಜಾತ್ರೆ ನಡೆಸಲು ಸಲಹೆ ನೀಡಿದರೆ ಬೇಡ ಎಂಬ ಧ್ವನಿಗಳು ಸಾಕಷ್ಟಿವೆ. ಸುಭಾಷ್ ಮೈದಾನದಲ್ಲಿ ಜಾತ್ರೆ ನಡೆಸುವ ಪ್ರಸ್ತಾವನೆಗೆ ಕ್ರೀಡಾಪಟುಗಳ ಭಾರಿ ವಿರೋಧವಿದೆ. ಅಲ್ಲದೆ ಇದಕ್ಕೆ ಕ್ರೀಡಾ ಇಲಾಖೆ ಅನುಮತಿ ನೀಡುವುದು ಅನುಮಾನದ ಕಾರಣ ಇಲ್ಲಿ ಜಾತ್ರೆ ನಡೆಸುವ ಬಗ್ಗೆ ಹೆಚ್ಚಿನ ಆಸಕ್ತಿ ಯಾರಿಗೂ ಇಲ್ಲ. ಆದರೆ, ಸಾಕಷ್ಟು ಪುರಸಭೆ ಸದಸ್ಯರು ಜಾತ್ರೆಯನ್ನು ಮಳಲಿ ಭತ್ತದ ಗದ್ದೆಯಲ್ಲಿ ವ್ಯಕ್ತಿಯೊಬ್ಬರು ನಿರ್ಮಾಣ ಮಾಡುತ್ತಿರುವ ಲೇಔಟ್‌ನಲ್ಲಿ ನಡೆಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪುರಸಭೆ ಸದಸ್ಯರ ಈ ಅಭಿಪ್ರಾಯಕ್ಕೆ ಪಟ್ಟಣದ ಸಾಕಷ್ಟು ಸಂಘಸಂಸ್ಥೆಗಳ ಮುಖಂಡರು ಅಪಸ್ವರ ಎತ್ತಿದ್ದು ಇಲ್ಲಿ ಜಾತ್ರೆ ನಡೆಸುವುದು ಸೂಕ್ತವಲ್ಲ ಸಮೀಪದಲ್ಲೆ ಹೇಮಾವತಿ ನದಿ ಇದೆ. ಅಲ್ಲದೆ ಊರ ಹೊರಭಾಗದಲ್ಲಿ ನಡೆಯುವ ಜಾತ್ರೆಗೆ ಜನರು ಸೇರುವುದು ಅನುಮಾನ ಹಾಗೂ ಲೇಔಟ್ ಮಾಡಲು ಭತ್ತದ ಗದ್ದೆಗೆ ಮಣ್ಣು ಹಾಕಲಾಗಿದ್ದು ಜಾಯಿಂಟ್ ವ್ಹೀಲ್‌ನಂತಹ ಭಾರಿ ಗಾತ್ರದ ಮನರಂಜನಾ ಸಲಕರಣೆ ಇಲ್ಲಿ ಅಳವಡಿಸುವುದು ಕಷ್ಟು. ಒಂದು ವೇಳೆ ಅಳವಡಿಸಿದರೂ ಭಾರೀ ಪ್ರಮಾಣದ ಅನುಹುತ ನಡೆಯುವುದು ಕಟ್ಟಿಟ್ಟ ಬುತ್ತಿ ಎಂಬ ಮಾತುಗಳು ಕೇಳಿ ಬರುತ್ತಿದೆ.ವಸ್ತುಪ್ರದರ್ಶನ ನಡೆಸುವ ಮುನ್ನ ಸಂಬಂದಿತ ಎಂಜಿನಿಯರ್‌ಗಳು ಜಾತ್ರೆ ನಡೆಯುವ ಪ್ರದೇಶದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡಬೇಕಿದ್ದು, ಮಣ್ಣು ತುಂಬಿರುವ ಪ್ರದೇಶದಲ್ಲಿ ಜಾತ್ರೆ ನಡಸುವ ಬಗ್ಗೆ ಎಂಜಿನಿಯರ್‌ಗಳು ಯಾವ ವರದಿ ನೀಡುತ್ತಾರೆ ಎಂಬ ಕುತೂಹಲವೆದ್ದಿದೆ. ಈ ಮಧ್ಯೆ ಜಾತ್ರೆ ವಸ್ತುಪ್ರದರ್ಶನ ನಡೆಸಲು ಟೆಂಡರ್ ಕರೆಯಲಾಗಿದ್ದು ಜನವರಿ ೨೮ಕ್ಕೆ ಟೆಂಡರ್ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಆದರೆ, ಟೆಂಡರ್‌ನಲ್ಲಿ ಜಾತ್ರೆ ನಡೆಯುವ ಬಗ್ಗೆ ಸ್ವಷ್ಟಪಡಿಸಿಲ್ಲ ಬದಲಾಗಿ ಪುರಸಬೆ ಸೂಚಿಸಿದ ಸ್ಥಳದಲ್ಲಿ ಜಾತ್ರೆ ನಡೆಸಲು ಟೆಂಡರ್‌ದಾರರು ಸಿದ್ಧರಿರಬೇಕಾಗಿದೆ.
ಭ್ರಷ್ಟಾಚಾರಕ್ಕೆ ಅವಕಾಶ ನೀಡದಿರಿ: ಸಕಲೇಶ್ವರಸ್ವಾಮಿ ಜಾತ್ರೆ ವಸ್ತುಪ್ರದರ್ಶನ ಪುರಸಭೆ ಕೆಲವು ಪುರಪಿತ್ರುಗಳಿಗೆ ಹಣಮಾಡುವ ಹಾದಿ ಎಂಬ ಪ್ರತೀತಿ ಮನೆಮಾಡಿತ್ತು. ಹಲವು ವರ್ಷ ಅನ್ಯರ ಹೆಸರಿನಲ್ಲಿ ಪುರಸಭೆ ಸದಸ್ಯರೆ ಜಾತ್ರೆ ವಸ್ತುಪ್ರದರ್ಶನ ನಡೆಸಿದರೆ ಮತ್ತೆ ಕೆಲವು ವರ್ಷಗಳ ಕಾಲ ಕ್ರೀಡೆ, ಮನರಂಜನೆ ನಡೆಸುವ ಗುತ್ತಿಗೆ ಪಡೆದು ಸಾಕಷ್ಟು ಹಣವನ್ನು ಲೋಟಿಮಾಡಿರುವುದು ಬಹಿರಂಗವಾಗಿ ಗೋಚರಿಸಿತ್ತು. ಆದರೆ, ಪುರಪಿತ್ರುಗಳ ಈ ಕಳ್ಳಾಟಕ್ಕೆ ಕಳೆದ ಬಾರಿ ಪುರಸಭೆ ಅಡಳಿತಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ತಡೆಒಡ್ಡಿದ್ದು, ಸಾಕಷ್ಟು ಕಟ್ಟುನಿಟ್ಟಿನ ಕ್ರಮದ ಕಾರಣ ಭ್ರಷ್ಟಚಾರಕ್ಕೂ ಅವಕಾಶ ದೊರೆಯಲಿಲ್ಲ. ಪರಿಣಾಮ ಪುರಸಭೆಗೆ ಸಾಕಷ್ಟು ಆದಾಯಗಳಿಸುವಂತಾಗಿತ್ತು. ಈ ಬಾರಿಯು ಕಳೆದ ಬಾರಿಯಂತೆ ಜಾತ್ರೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.----
‘ಜಾತ್ರೆ ನಡೆಸುವ ಸ್ಥಳದ ಬಗ್ಗೆ ಮೂರು ಸಭೆ ನಡೆಸಿದರೂ ಅಂತಿಮಗೊಳಿಸಲಾಗಿಲ್ಲ. ಮಳಲಿ ಗದ್ದೆಬಯಲಿನಲ್ಲಿ ಜಾತ್ರೆ ನಡೆಸಲು ಸಾಕಷ್ಟು ಸದಸ್ಯರು ಸೂಚಿಸಿದ್ದಾರೆ. ಈ ಸ್ಥಳದ ತಾಂತ್ರಿಕ ವರದಿ ಪಡೆದ ನಂತರ ಅಂತಿಮ ನಿರ್ಧಾರಕ್ಕೆ ಬರಲಾಗುವುದು.‘- ಮಹೇಶ್ವರಪ್ಪ, ಪುರಸಭೆ ಮುಖ್ಯಾಧಿಕಾರಿ -----
‘ಜಾತ್ರೆ ನಡೆಸುವ ಜಾಗದ ಬಗ್ಗೆ ಇನ್ನೂ ಅಂತಿಮಗೊಂಡಿಲ್ಲ. ಮಾತುಕತೆ ನಡೆಯುತ್ತಿದ್ದು ಶೀಘ್ರದಲ್ಲೇ ಸ್ಥಳದ ಬಗ್ಗೆ ಅಂತಿಮ ತಿರ್ಮಾನ ಹೊರಬೀಳಲಿದೆ.’- ಜ್ಯೋತಿರಾಜ್‌ಕುಮಾರ್ ಪುರಸಭೆ ಅಧ್ಯಕ್ಷರು
-----