ಸಾರಾಂಶ
ಸಕ್ರೆಬೈಲು ಆನೆ ಬಿಡಾರದ 4 ಆನೆಗಳಿಗೆ ಗಾಯವಾಗಿರುವುದು ಹಾಗೂ ಬಾಲಣ್ಣ ಎಂಬುವ ಆನೆ ಸೋಂಕಿನಿಂದ ಬಳಲುತ್ತಿರುವ ಬಗ್ಗೆ ಸುದ್ದಿ ಪ್ರಕಟಗೊಂಡ ಬೆನ್ನಲ್ಲೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ವಾರದೊಳಗೆ ಸಮಗ್ರ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರದ 4 ಆನೆಗಳಿಗೆ ಗಾಯವಾಗಿರುವುದು ಹಾಗೂ ಬಾಲಣ್ಣ ಎಂಬುವ ಆನೆ ಸೋಂಕಿನಿಂದ ಬಳಲುತ್ತಿರುವ ಬಗ್ಗೆ ಸುದ್ದಿ ಪ್ರಕಟಗೊಂಡ ಬೆನ್ನಲ್ಲೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರು ಬಾಲಣ್ಣ ಆನೆಯ ಸ್ಥಿತಿಗೆ ಕಾರಣರಾದ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶಿಸ್ತು ಕ್ರಮದ ಶಿಫಾರಸ್ಸಿನೊಂದಿಗೆ ವಾರದೊಳಗೆ ಸಮಗ್ರ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಸಕ್ರೆಬೈಲು ಬಿಡಾರದ ಬಾಲಣ್ಣ (35) ಎಂಬ ಆನೆಗೆ ಕಾಲಿನ ನೋವಿಗೆ ಕೊಟ್ಟ ಇಂಜೆಕ್ಷನ್ ಓವರ್ ಡೋಸ್ ಆಗಿ ಕಿವಿ ಕೊಳೆತು ಸೋಂಕಿನಿಂದ ನರಳುತ್ತಿದೆ. ಅಲ್ಲದೇ, ಸಾಗರ ಸೇರಿದಂತೆ ಒಟ್ಟು 4 ಆನೆಗಳು ಗಾಯದಿಂದ ಬಳಲುತ್ತಿವೆ. ಈ ಬಗ್ಗೆ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಪತ್ರ ಬರೆದಿದ್ದು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿ ಇರಬೇಕು. ಸದ್ಯ ಪಶುವೈದ್ಯರ ಕೊರತೆ ಬಗ್ಗೆ ವರದಿಯಾಗಿದ್ದು, ಕೂಡಲೇ ಗುತ್ತಿಗೆ ಆಧಾರದ ಮೇಲೆ ಅಥವಾ ನಿಯೋಜನೆಯ ಮೂಲಕ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.