ಬಾಟಂ.. ಕಾಮನ್‌ ಪುಟಕ್ಕೆಆನೆ ಮೇಲೆ ''''''''ಅಂಬಾರಿ'''''''' ಕಟ್ಟುವುದೇ ಒಂದು ಕಲೆಗಾರಿಕೆ

| Published : Oct 03 2025, 01:07 AM IST

ಬಾಟಂ.. ಕಾಮನ್‌ ಪುಟಕ್ಕೆಆನೆ ಮೇಲೆ ''''''''ಅಂಬಾರಿ'''''''' ಕಟ್ಟುವುದೇ ಒಂದು ಕಲೆಗಾರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ವರ್ಷ ಅಂಬಾರಿ ಕಟ್ಟುವ ಕೈಂಕರ್ಯ, ಅರಣ್ಯ ಇಲಾಖೆ

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ವಿಜಯದಶಮಿ ಮೆರವಣಿಗೆಯ ಕೇಂದ್ರ ಬಿಂದು ಚಿನ್ನದ ಅಂಬಾರಿ ಹಾಗೂ ಅಂಬಾರಿಯನ್ನು ಹೊರುವ ಆನೆ. ಅಂತಹ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಆನೆಯ ಮೇಲೆ ಸೊಗಸಾಗಿ ಕಟ್ಟುವುದೇ ಒಂದು ಕಲೆಗಾರಿಕೆ ಆಗಿದೆ.

ಪ್ರತಿ ವರ್ಷ ಅಂಬಾರಿ ಕಟ್ಟುವ ಕೈಂಕರ್ಯವನ್ನು ಅರಣ್ಯ ಇಲಾಖೆಯ ನುರಿತ ಸಿಬ್ಬಂದಿಯ ತಂಡವು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ, ಸೊಗಸಾಗಿ ಹಾಗೂ ಭದ್ರವಾಗಿ ಅಂಬಾರಿ ಕಟ್ಟುತ್ತಾರೆ.

ಜಂಬೂಸವಾರಿ ಆರಂಭಕ್ಕೂ ಮುನ್ನವೇ ಮೈಸೂರು ಅರಮನೆಯ ಆನೆ ಬಿಡಾರದಲ್ಲಿ ಅಭಿಮನ್ಯು ಆನೆಗೆ ಕಲಾವಿದರು ಬಿಳಿ, ಹಳದಿ, ಹಸಿರು, ಕೆಂಪು, ಕೇಸರಿ ಸೇರಿದಂತೆ ವಿವಿಧ ಬಣ್ಣಗಳಿಂದ ಕಿವಿಯ ಮೇಲೆ ಶಂಖ, ಚಕ್ರ, ಸೊಂಡಲಿನ ಮೇಲೆ ಗಂಡುಭೇರುಂಡ, ಹೂವು, ಎಲೆ, ಬಳ್ಳಿ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ, ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ, ಕಣ್ಣಿನ ಸುತ್ತಾ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ತಾರ ಬಿಡಿಸಿ ಸಜ್ಜುಗೊಳಿಸಿದರು.

ನಂತರ ಅಭಿಮನ್ಯು ಮೈಮೇಲೆ ಗಾದಿ, ಚಾಪ್ ಹಾಕಿ ಹಗ್ಗದಿಂದ ಬೀಗಿಯಾಗಿ ಕಟ್ಟಲಾಯಿತು. ನಂತರ ರಂಗು ರಂಗಿನ ಜುಲಾ ಹೊದಿಸಲಾಯಿತು. ಕೊಂಬಿಗೆ ಸಿಂಗೋಟಿ ಬಳೆ, ಹಣೆಪಟ್ಟಿ, ಕಾಲಿಗೆ ಡುಬ್ಬ, ಕಿವಿಗೆ ಚಾಮರ ತೊಡಿಸಿ ಅಲಂಕರಿಸಲಾಯಿತು. ಬಳಿಕ ಮೆರವಣಿಗೆ ಆರಂಭವಾದ ಮೇಲೆ ಕಾವೇರಿ ಮತ್ತು ರೂಪಾ ಆನೆಗಳೊಂದಿಗೆ ಅಭಿಮನ್ಯು ಆನೆಯು ಆನೆ ಬಿಡಾರದಿಂದ ಖಾಸ್ ಅರಮನೆ ಬಳಿಗೆ ಆಗಮಿಸಿತು.

ಒಂದು ಕಡೆ ದಸರಾ ಮೆರವಣಿಗೆಯು ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳೊಂದಿಗೆ ಸಾಗುತ್ತಿದ್ದರೇ, ಮತ್ತೊಂಡೆದೆ ಅಭಿಮನ್ಯು ಆನೆ ಮೇಲೆ ಅಂಬಾರಿ ಕಟ್ಟುವ ಕಾರ್ಯವೂ ಸಂಪ್ರದಾಯದಂತೆ ಆರಂಭವಾಯಿತು.

ಚಿನ್ನದ ಅಂಬಾರಿಯನ್ನು ಅರಮನೆಯವರು ಅರಣ್ಯ ಇಲಾಖೆಯವರಿಗೆ ನೀಡುತ್ತಿದ್ದಂತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಚಿನ್ನದ ಅಂಬಾರಿಯೊಳಗೆ ಇರಿಸಿ ಸಿದ್ಧಗೊಳಿಸಲಾಯಿತು. ನಂತರ ಚಿನ್ನದ ಅಂಬಾರಿಯನ್ನು ಕ್ರೇನ್ ಸಹಾಯದಿಂದ ಅಭಿಮನ್ಯು ಆನೆಯ ಮೈಮೇಲೆ ಇರಿಸಿದ ಬಿಗಿಯಾಗಿ ಕಟ್ಟಲಾಯಿತು.

ಅರಣ್ಯ ಇಲಾಖೆಯ ಸಿಬ್ಬಂದಿ ಅಕ್ರಂ, ಮಾವುತರು, ಕಾವಾಡಿಗಳು ಅಂಬಾರಿಯನ್ನು ಕಟ್ಟುವ ಕೈಂಕರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಖಾಸ್ ಅರಮನೆ ಬಳಿ ಅಂಬಾರಿ ಹೊತ್ತ ಅಭಿಮನ್ಯು ಜೊತೆಗೆ ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ ಬಂದು ನಿಂತವು. ಅಂಬಾರಿ ಆನೆಯನ್ನು ಅಶ್ವರೋಹಿದಳ ಸಮ್ಮುಖದಲ್ಲಿ ಖಾಸ್ ಅರಮನೆಯಿಂದ ಕರೆ ತರಲಾಯಿತು. ಅಂಬಾರಿ ಆನೆಯು ಜಯಮಾರ್ತಾಂಡ ದ್ವಾರದ ಬಳಿಯಿಂದ ಬಳಸಿಕೊಂಡು ಮೈಸೂರು ಅರಮನೆ ಮುಂಭಾಗಕ್ಕೆ ಆಗಮಿಸಿತು.

ಅಂಬಾರಿ ಆನೆಯು ಮೆರವಣಿಗೆ ಮಾರ್ಗಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದವರು ಜೈ ಚಾಮುಂಡೇಶ್ವರಿ ಘೋಷಣೆ ಕೂಗಿ ನಮಿಸಿದರು.

ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಮನ್ಯು ಮೈಮೇಲಿದ್ದ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿದರು. ಕೋಟೆ ಮಾರಮ್ಮ ದೇವಸ್ಥಾನದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿದ್ದ ಸಿಎಆರ್ ಪಿರಂಗಿ ದಳದ ಸಿಬ್ಬಂದಿ 7 ಪಿರಂಗಿಗಳ್ನು ಬಳಸಿ 21 ಸುತ್ತು ಕುಶಾಲತೋಪನ್ನು 1 ನಿಮಿಷದಲ್ಲಿ ಸಿಡಿಸಿದರು.

ಕುಶಾಲತೋಪಿನ ಬಾರಿ ಶಬ್ದಕ್ಕೆ ಆನೆಗಳು ಜಗ್ಗದೇ ನಿಲ್ಲುವ ಮೂಲಕ ಅತಿಥಿಗಳಿಗೆ ನಮಸ್ಕರಿಸಿದ ನಂತರ ವಿಜಯದಶಮಿ ಮೆರವಣಿಗೆಯಲ್ಲಿ ಸಾಗಿದವು.