ದೀಪಾವಳಿಗೆ 87 ಮೈದಾನಗಳಲ್ಲಿಪಟಾಕಿ ಮಾರಾಟಕ್ಕೆ ಅವಕಾಶ

| Published : Oct 08 2025, 02:03 AM IST

ದೀಪಾವಳಿಗೆ 87 ಮೈದಾನಗಳಲ್ಲಿಪಟಾಕಿ ಮಾರಾಟಕ್ಕೆ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ದೀಪಾವಳಿ ಹಬ್ಬದ ನಿಮಿತ್ತ ನಗರ ವ್ಯಾಪ್ತಿ 87 ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ 411 ಮಳಿಗೆಗಳಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೀಪಾವಳಿ ಹಬ್ಬದ ನಿಮಿತ್ತ ನಗರ ವ್ಯಾಪ್ತಿ 87 ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ 411 ಮಳಿಗೆಗಳಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೀಪಾವಳಿ ವೇಳೆ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುಂಜಾಗ್ರತೆ ವಹಿಸಲಾಗಿದೆ. ದೀಪಾವಳಿ ಹಬ್ಬ ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೈದಾನಗಳಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆಗಳಿಗೆ ಪರವಾನಿಗೆ ನೀಡುವ ಬಗ್ಗೆ ಅಗ್ನಿಶಾಮಕ ದಳ, ಜೆಬಿಎ, ಪರಿಸರ ಮಾಲಿನ್ಯ ಇಲಾಖೆ ಹಾಗೂ ಜಿಎಸ್‌ಐಟಿ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

ಎರಡು ವರ್ಷಗಳ ಹಿಂದೆ ಅತ್ತಿಬೆಲೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 14 ಜನರು ಮೃತಪಟ್ಟಿದ್ದರು. ಈ ರೀತಿಯ ದುರಂತಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ. ನಗರ ವ್ಯಾಪ್ತಿ ಪ್ರಸ್ತಕ ವರ್ಷ 87 ಮೈದಾನಗಳಲ್ಲಿ 411 ಮಳಿಗೆಗಳಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು. ಸೇವಾ ಸಿಂಧು ಮೂಲಕ ಅರ್ಜಿ

ಪಟಾಕಿ ಮಳಿಗೆಗೆ ತೆರೆಯುವ ಮಾಲಿಕರು ಕಡ್ಡಾಯವಾಗಿ ಪೊಲೀಸರ ಮಾರ್ಗಸೂಚಿ ಪಾಲಿಸಬೇಕು. ಅಲ್ಲದೆ ಮೈದಾನದ ವಿವರಗಳನ್ನು ಆಯುಕ್ತರ ಕಚೇರಿ ಹಾಗೂ ವೆಬ್‌ ಸೈಟ್ https://bcp.karnataka.gov.in ನಲ್ಲಿ ಪಡೆಯಬಹುದು. ಅ.18 ರಿಂದ ರಿಂದ 22 ರವರೆಗೆ 5 ದಿನಗಳು ತಾತ್ಕಾಲಿಕ ಪಟಾಕಿ ಮಳಿಗೆಗಳಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶವಿರುತ್ತದೆ. ಬೆಂಗಳೂರು ನಗರಾದ್ಯಂತ ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ಇಲ್ಲಿ ಅರ್ಜಿ ಶುಲ್ಕ 5 ಸಾವಿರ ರು ಮರು ಪಾವತಿ ಇರುವುದಿಲ್ಲ. ಆದರೆ ಮುಂಗಡವಾಗಿ ಪಡೆಯುವ 25 ಸಾವಿರ ರು ಹಣವನ್ನು ಮರಳಿ ಕೊಡಲಾಗುತ್ತದೆ. ಬೆಂಗಳೂರು ನಗರದ ಡಿಸಿಪಿ (ಆಡಳಿತ)ಹೆಸರಿನಲ್ಲಿ ಡಿಡಿ ಪಡೆದು ಆನ್‌ಲೈನ್‌ ಪೋರ್ಟಲ್‌ನಲ್ಲಿ ಅರ್ಜಿ ಜತೆ ಲಗತ್ತಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.