ಸಾಲು ಮರದ ತಿಮ್ಮಕ್ಕನ ಭಾವಚಿತ್ರಕ್ಕೆ ಪುಷ್ಪನಮನ, ಶ್ರದ್ದಾಂಜಲಿ ಅರ್ಪಣೆ

| Published : Nov 15 2025, 01:30 AM IST

ಸಾಲು ಮರದ ತಿಮ್ಮಕ್ಕನ ಭಾವಚಿತ್ರಕ್ಕೆ ಪುಷ್ಪನಮನ, ಶ್ರದ್ದಾಂಜಲಿ ಅರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ತಿಮ್ಮಕ್ಕರ ಸಾಧನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನ ಮನ್ನಣೆ ಪಡೆದು ರಾಷ್ಟ್ರ ಮಟ್ಟ, ರಾಜ್ಯಮಟ್ಟದಲ್ಲಿ ಒಟ್ಟು 22 ಪ್ರಶಸ್ತಿಗಳು ಲಭಿಸಿವೆ. ದೇಶದ ಪದ್ಮಭೂಷಣ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ. ಅವರಷ್ಟು ಆಯಸ್ಸು, ಹೆಸರು ಪ್ರತಿಯೊಬ್ಬರಿಗೂ ಸಿಗಲಿ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಯುವಜನ ಕ್ರೀಡಾ ಇಲಾಖೆ ಕಚೇರಿ ಆವರಣದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಸಾಲು ಮರದ ತಿಮ್ಮಕ್ಕನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, ಸಾಲು ಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಗಾಗಿ ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟಿದ್ದರು. ಮರಗಳನ್ನೇ ಮಕ್ಕಳಂತೆ ಸಾಕಿ ಸಲುಹಿದ ವೃಕ್ಷಮಾತೆಯಾಗಿದ್ದರು. ಅವರು ಇಂದಿನ ಪೀಳಿಗೆಗೆ ಮಾದರಿ ಮತ್ತು ಪ್ರೇರಣೆಯಾಗಿದ್ದಾರೆ. ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ ಎಂದು ಭಾವುಕರಾದರು.

ಕರವೇ ಸ್ವಾಮೀಗೌಡ ಮಾತನಾಡಿ, ಸಾವಿರಾರು ಮರಗಳ ನೆಟ್ಟು ನೀರುಣಿಸಿ ಆಶ್ರಯದಾತರಾಗಿದ್ದ 114 ವರ್ಷ ತುಂಬಿದ್ದ ಸಾಲು ಮರದ ತಿಮ್ಮಕ್ಕರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅವರ ಮಾರ್ಗದರ್ಶನದಂತೆ ಗಿಡನೆಟ್ಟು ನೆರಳು ಮಾಡಿ ಪರಿಸರ ಉಳಿಸುವ ಕ್ರಮ ಕೈಗೊಳ್ಳಬೇಕಿದೆ ಎಂದರು.

ತಿಮ್ಮಕ್ಕರ ಸಾಧನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನ ಮನ್ನಣೆ ಪಡೆದು ರಾಷ್ಟ್ರ ಮಟ್ಟ, ರಾಜ್ಯಮಟ್ಟದಲ್ಲಿ ಒಟ್ಟು 22 ಪ್ರಶಸ್ತಿಗಳು ಲಭಿಸಿವೆ. ದೇಶದ ಪದ್ಮಭೂಷಣ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ. ಅವರಷ್ಟು ಆಯಸ್ಸು, ಹೆಸರು ಪ್ರತಿಯೊಬ್ಬರಿಗೂ ಸಿಗಲಿ ಎಂದು ತಿಳಿಸಿದರು.

ಈ ವೇಳೆ ಗ್ರಾಪಂ ಸದಸ್ಯ ಅಪ್ಪಾಜಿ, ಇತರರು ಸಾಲು ಮರದ ತಿಮ್ಮಕ್ಕನ ಕುರಿತು ಮಾತನಾಡಿದರು. ಪೀಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರಾಣೇಶ್, ಕರವೇ ಬಸವರಾಜು, ಚಲುವೇಗೌಡ, ಶಿವಯ್ಯ, ಮಹದೇವು, ಆರ್.ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಾಲು ಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸ್ಮರಿಸಿದರು.