ನುಡಿದಂತೆ ನಡೆದ ಸಂತನಿಗೆ ಗುರುನಮನ

| Published : Jan 01 2025, 12:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಡೆದಾಡುವ ದೇವರು, ಶತಮಾನದ ಸಂತ, ಜ್ಞಾನಯೋಗಿ, ನುಡಿದಂತೆ ನಡೆದ ಆಧ್ಯಾತ್ಮಿ ಎಂದೆಲ್ಲ ಕರೆಯಿಸಿಕೊಂಡವರು ಇವರು. ಕಾವಿ ಹಾಕದೆ, ಕಿಸೆ (ಜೇಬು) ಇಲ್ಲದ ಅಂಗಿ ಧರಿಸಿ, ಪ್ರಶಸ್ತಿ, ಪುರಸ್ಕಾರ, ಹಣಕ್ಕಿಂತ ಜ್ಞಾನ ಮುಖ್ಯ ಎಂದು ಸಾರಿದಾತ. ನನಗೆ ಸ್ಮಾರಕ ಬೇಡ, ಪೂಜೆ ಬೇಡ, ನನ್ನನ್ನು ಪುಸ್ತಕದಲ್ಲಿ, ಪ್ರಕೃತಿಯಲ್ಲಿ ಕಾಣಿ ಎಂದವರು. ಇಂತಹ ಜ್ಞಾನದಾಸೋಹಿ ತಮ್ಮ 82ನೇ ವರ್ಷಕ್ಕೆ ಪ್ರಕೃತಿಯಲ್ಲಿ ಲೀನವಾಗಿ ಎರಡು ವರ್ಷಗಳು ಕಳೆಯುತ್ತಿವೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ನಡೆದಾಡುವ ದೇವರು, ಶತಮಾನದ ಸಂತ, ಜ್ಞಾನಯೋಗಿ, ನುಡಿದಂತೆ ನಡೆದ ಆಧ್ಯಾತ್ಮಿ ಎಂದೆಲ್ಲ ಕರೆಯಿಸಿಕೊಂಡವರು ಇವರು. ಕಾವಿ ಹಾಕದೆ, ಕಿಸೆ (ಜೇಬು) ಇಲ್ಲದ ಅಂಗಿ ಧರಿಸಿ, ಪ್ರಶಸ್ತಿ, ಪುರಸ್ಕಾರ, ಹಣಕ್ಕಿಂತ ಜ್ಞಾನ ಮುಖ್ಯ ಎಂದು ಸಾರಿದಾತ. ನನಗೆ ಸ್ಮಾರಕ ಬೇಡ, ಪೂಜೆ ಬೇಡ, ನನ್ನನ್ನು ಪುಸ್ತಕದಲ್ಲಿ, ಪ್ರಕೃತಿಯಲ್ಲಿ ಕಾಣಿ ಎಂದವರು. ಇಂತಹ ಜ್ಞಾನದಾಸೋಹಿ ತಮ್ಮ 82ನೇ ವರ್ಷಕ್ಕೆ ಪ್ರಕೃತಿಯಲ್ಲಿ ಲೀನವಾಗಿ ಎರಡು ವರ್ಷಗಳು ಕಳೆಯುತ್ತಿವೆ.

ನೋಡಲು ಅತ್ಯಂತ ಸರಳವಾಗಿ ಜೀವಿಸುತ್ತಿದ್ದ ಇವರ ಜ್ಞಾನ ಎಂತಹ ಮೇಧಾವಿಗಳಿಗಿಂತಲೂ, ತತ್ವಜ್ಞಾನಿಗಿಂತಲೂ ಬೊಗಸೆ ಹೆಚ್ಚೇ ಇತ್ತು. ಹೀಗಾಗಿಯೇ 2ನೇ ಸ್ವಾಮಿ ವಿವೇಕಾನಂದ ಎನಿಸಿಕೊಂಡ ಸಿದ್ದೇಶ್ವರ ಸ್ವಾಮೀಜಿಗಳು ಬಯಲಲ್ಲಿ ಬಯಲಾಗಿದ್ದನ್ನು ನೆನೆದರೆ ಲಕ್ಷಾಂತರ ಭಕ್ತರ ಕಣ್ಣಾಲಿಗಳಲ್ಲಿ ತನ್ನಿಂದ ತಾನೇ ನೀರು ಜಿನುಗುತ್ತದೆ. ಕೋಟಿ ಕೋಟಿ ಭಕ್ತರ ಮನದಲ್ಲಿ ಹಚ್ಚಹಸಿರಾಗಿ ಉಳಿದ ಸಂತನಿಗೆ ಜ್ಞಾನಯೋಗಾಶ್ರಮದಲ್ಲಿ ಗುರು ನಮನ ನಡೆಯುತ್ತಿದೆ.

ಅದೆಷ್ಟೋ ಭಕ್ತರಿಗೆ ಜ್ಞಾನಭಿಕ್ಷೆಯನ್ನು ನೀಡಿದ್ದ ಎಲ್ಲರ ನೆಚ್ಚಿನ ಸಂತ, ಕೋಟಿ ಕೋಟಿ ಭಕ್ತರ ಆರಾಧ್ಯ ದೈವ ಸಿದ್ಧೇಶ್ವರ ಶ್ರೀಗಳು ತಮ್ಮ ಇಚ್ಛೆಯಂತೆಯೇ 2023 ಜ.2ರಂದು ಲೀನವಾಗಿದ್ದಾರೆ. ಆ ವೇಳೆ ಕೋಟ್ಯಾಂತರ ಭಕ್ತರು ಸಾಲು ಸಾಲಾಗಿ ಬಂದು ಶ್ರೀಗಳ ಅಂತಿಮ ದರ್ಶನ ಪಡೆದರು. ಆದರೆ ಇಂದಿಗೂ ಅವರು ನಮ್ಮೊಂದಿಗಿಲ್ಲ ಎಂಬ ಭಾವನೆ ಅದೆಷ್ಟೋ ಜನರಲ್ಲಿದೆ. ಶ್ರೀಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ ಎನ್ನುವವರ ಮಧ್ಯೆಯೇ ಅವರನ್ನು ನೆನೆದು ಇದೇ ಜ್ಞಾನಯೋಗಾಶ್ರಮದಲ್ಲಿನ ಮರಗಳ ಮಧ್ಯೆ ಕಣ್ಣೀರು ಸುರಿಸಿದವರ ಲೆಕ್ಕವೇ ಇಲ್ಲ. ಇಂತಹ ಮಹಾನ್ ಚೇತನಕ್ಕೆ ಇದೀಗ 2ನೇ ವರ್ಷದ ಗುರುನಮನದ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ನಮ್ಮೊಂದಿಗೆ ಇಲ್ಲದವರಿಗೆ ವಾರ್ಷಿಕವಾಗಿ ಆಚರಿಸುವ ಕಾರ್ಯಕ್ರಮದ ಹೆಸರು ಬೇರೆಯೇ ಇದೆ. ಆದರೆ ಜಗತ್ತಿಗೆ ಜ್ಞಾನದಿವಿಗೆಯನ್ನು ನೀಡಿದ ಸಂತ ನಮ್ಮೊಂದಿಗೆ ಇದ್ದಾರೆ ಎಂಬ ಭರವಸೆಯಲ್ಲೇ ಅವರಿಗಾಗಿ ಡಿ.25ರಿಂದ ಜನೇವರಿ 2ರ ವರೆಗೆ 2ನೇ ವರ್ಷದ ಗುರುನಮನ ವಿನೂತನ ಕಾರ್ಯಕ್ರಮ ನಡೆಸಲಾಗುತ್ತಿದೆ.

ಜ್ಞಾನಯೋಗಾಶ್ರಮ ಕಟ್ಟಿದವರು

ಆಸ್ತಿಗಳ ಮೇಲೆ ಆಸ್ತಿಗಳನ್ನು, ಕಟ್ಟಡಗಳ ಮೇಲೆ ಕಟ್ಟಡ ಕಟ್ಟುವವರ ಮಧ್ಯೆಯೇ ಸರಳವಾಗಿ ಜೀವಿಸಿ, ಜ್ಞಾನಯೋಗಾಶ್ರಮವನ್ನು ಕಟ್ಟಿದರು. ಈ ವಾತಾವರಣದಲ್ಲಿ ಅವರ ಪ್ರವಚನದ ಮಾತುಗಳು ಇಂದಿಗೂ ಪಿಸುಗುಡುತ್ತಿವೆ. ಇದೇ ಆಶ್ರಮದಲ್ಲಿ ಜ್ಞಾನ ಪಡೆದ ನೂರಾರು ವಟುಗಳು ಶ್ರೀಗಳಾಗಿ ನಾಡಿಗೆ ಉತ್ತಮ ಸಂದೇಶ ಕೊಡುತ್ತಿದ್ದಾರೆ.

ಸ್ಮಾರಕ ಬೇಡ ಎಂದವರು:

ತಮ್ಮ ಕಾಲಾ ನಂತರದಲ್ಲಿ ಜನರು ಒಂದು ಕಟ್ಟಡ ಕಟ್ಟಿಸಿ, ಒಂದೆಡೆ ಸೀಮಿತ ಮಾಡುತ್ತಾರೆ. ಜೊತೆಗೆ ತಾವು ಸಾರಿದ ಸಂದೇಶದ ಬದಲಾಗಿ ತಮ್ಮನ್ನೇ ದೇವರೆಂದು ಪೂಜಿಸುತ್ತಾರೆ ಎಂದು ಮೊದಲೇ ಅರಿತಿದ್ದ ಶ್ರೀಗಳು ತಮ್ಮ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಯನ್ನೇ ಪೂಜಿಸಿ ಸಾಕು. ದೇಹವನ್ನು ಅಗ್ನಿಯಲ್ಲಿ ಅರ್ಪಿಸುವುದು, ಶ್ರಾದ್ಧಿಕ ವಿಧಿವಿಧಾನಗಳು ಅನಗತ್ಯ. ಚಿತಾಭಸ್ಮ ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು. ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು ಎಂದಿದ್ದ ಅವರು, ನನ್ನನ್ನು ಒಳ್ಳೆಯ ಪುಸ್ತಕದಲ್ಲಿ, ಪ್ರಾಣಿ-ಪಕ್ಷಿಗಳಲ್ಲಿ, ಗಿಡ-ಮರಗಳಲ್ಲಿ ಸೇರಿದಂತೆ ಪ್ರಕೃತಿಯಲ್ಲಿ ನನ್ನನ್ನು ಕಾಣಿ ಎಂದು ಸಂದೇಶ ನೀಡಿದ್ದರು.

ಅಂತಿಮ ಅಭಿವಂದನ ಪತ್ರ

ಅಂತಿಮವಾಗಿ ಶ್ರೀಗಳು ಬರೆದಿಟ್ಟಿದ್ದ ಅಭಿವಂದನ ಪತ್ರದಲ್ಲಿ ಜೀವನದ ಸಾರಾಂಶವನ್ನೇ ತಿಳಿಸಿಬಿಟ್ಟಿದ್ದರು. ಬದುಕು ಅನುಭವಗಳ ಪ್ರವಾಹ. ನನ್ನದು ಆವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು ಎನ್ನುವ ಮೂಲಕ ಅಂತಿಮ ನೆನಹು ತಿಳಿಸಿದ್ದರು. ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ. ಇಲ್ಲ, ಇಲ್ಲ ಎಂಬುದು ತಾನಿಲ್ಲ. ಗುಹೇಶ್ವರನೆಂಬುದು ತಾ ಬಯಲು. ಅಂತ್ಯಃ ಪ್ರಣಾಮಾಂಜಲಿ ಸ್ವಾಮಿ ಸಿದ್ಧೇಶ್ವರ ಎಂದಿದ್ದರು.

ಪ್ರಶಸ್ತಿಗಳ ನಿರಾಕರಣೆ

ಕರ್ನಾಟಕ ವಿಶ್ವವಿದ್ಯಾಲಯ ಶ್ರೀಗಳಿಗೆ ಗೌರವಾರ್ಥವಾಗಿ ಡಾಕ್ಟರೇಟ್ ಪ್ರಕಟಿಸಿದಾಗ ಅದನ್ನು ಸ್ವೀಕರಿಸಲಿಲ್ಲ. ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಅತ್ಯಂತ ವಿನಮ್ರತೆಯಿಂದಲೇ ನಿರಾಕರಿಸಿದ್ದರು. ಶ್ರೀಗಳಿಗೆ ಸಂದ ಸಾಲು ಸಾಲು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ನಯವಾಗಿಯೇ ನಿರಾಕರಿಸಿದ್ದರು.

ಜೇಬು ಇರಲಿಲ್ಲ

ಯಾವ ಮೂಲದಲ್ಲಿ ಆದಾಯ ಬರುತ್ತದೆ, ಹೇಗೆ ಹಣ ಮಾಡಬೇಕು, ಹೇಗೆ ಶ್ರೀಮಂತರಾಗಬೇಕು ಎಂದುಕೊಳ್ಳುವವರ ಮಧ್ಯೆ ಪಾಠ ಎಂಬಂತೆ ಶ್ರೀಗಳು ಮೊದಲಿನಿಂದಲೂ ಕಾವಿಯನ್ನು ಧರಿಸದೆ, ಕಿಸೆಯಿಲ್ಲದ ಅಂಗಿಯನ್ನು ಧರಿಸಿ ಬದುಕಿದರು. ಅಂಗಿಗೆ ಜೇಬು ಇದ್ದರೆ ಹಣದಾಸೆ ಶುರುವಾಗುತ್ತದೆ ಎಂದು ನೀತಿ ಪಾಠ ಹೇಳುತ್ತಿದ್ದರು.------------

ಕೋಟ್‌....

ಶ್ರೀಗಳು ನಮ್ಮೊಂದಿಗೆ ಇದ್ದಾರೆ, ಯಾವುದೋ ಪ್ರವಚನಕ್ಕೆ ಹೋಗಿದ್ದು, ವಾಪಸ್ಸು ಬರುತ್ತಿದ್ಧಾರೆ ಎಂಬ ನಂಬಿಕೆಯಲ್ಲಿದ್ದೇವೆ. ಅವರು ಬರುವವರೆಗೂ ಅವರ ಚಿಂತನೆ, ತತ್ವ, ಆದರ್ಶ, ವಿಚಾರಧಾರೆಗಳನ್ನು ನಾಡಿನ ಜನತೆಗೆ ತಿಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಜೊತೆಗೆ ಗುರುವಿಗೆ ನಮನ ಸಲ್ಲಿಸುವ ಕಾರ್ಯವನ್ನು ನೆರವೇರಿಸುತ್ತಿದ್ದೇವೆ.

ಶ್ರೀ ಬಸವಲಿಂಗ ಶ್ರೀಗಳು, ಅಧ್ಯಕ್ಷ ಗುರುಗಳು ಜ್ಞಾನಯೋಗಾಶ್ರಮ