ಸಾರಾಂಶ
ಅಪಘಾತ ಪ್ರಕರಣದಲ್ಲಿ ಚಾಲಕನ ನಿರ್ಲಕ್ಷ್ಯ ಬಗ್ಗೆ 2 ಪ್ರತ್ಯೇಕ ವಿಚಾರಣಾ ಪ್ರಕ್ರಿಯೆಯಲ್ಲಿ ತದ್ವಿರುದ್ಧ ನಿಲುವು ತೆಗೆದುಕೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಯವೈಖರಿಯನ್ನು ಆಕ್ಷೇಪಿಸಿರುವ ಹೈಕೋರ್ಟ್, ನಿಗಮವು ಏಕರೂಪ ನಿಲುವು ತೆಗೆದುಕೊಳ್ಳಬೇಕು ಎಂದು ತೀಕ್ಷ್ಣವಾಗಿ ಸೂಚಿಸಿದೆ.
ಬೆಂಗಳೂರು : ರಸ್ತೆ ಅಪಘಾತ ಪ್ರಕರಣದಲ್ಲಿ ಚಾಲಕನ ನಿರ್ಲಕ್ಷ್ಯ ಬಗ್ಗೆ ಎರಡು ಪ್ರತ್ಯೇಕ ವಿಚಾರಣಾ ಪ್ರಕ್ರಿಯೆಯಲ್ಲಿ ತದ್ವಿರುದ್ಧ ನಿಲುವು ತೆಗೆದುಕೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯುಕೆಆರ್‌ಟಿಸಿ) ಕಾರ್ಯವೈಖರಿಯನ್ನು ಆಕ್ಷೇಪಿಸಿರುವ ಹೈಕೋರ್ಟ್, ಸಾರಿಗೆ ನಿಗಮವು ಏಕರೂಪ ನಿಲುವು ತೆಗೆದುಕೊಳ್ಳಬೇಕು ಎಂದು ತೀಕ್ಷ್ಣವಾಗಿ ಸೂಚಿಸಿದೆ.
ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಉಂಟು ಮಾಡಿದ ಆರೋಪ ಮೇಲೆ ಸೇವೆಯಿಂದ ವಜಾಗೊಳಿಸಿದ ಬಸ್ ಚಾಲಕನಾದ ಹುಬ್ಬಳ್ಳಿಯ ಹುಸೇನ್ ಸಾಬ್ ರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವಂತೆ ಆದೇಶಿಸಿದ್ದ ಕಾರ್ಮಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಎನ್‌ಡಬ್ಲ್ಯುಕೆಆರ್‌ಟಿಸಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಕಾರ್ಮಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದಿರುವ ನ್ಯಾಯಪೀಠ, ಹುಸೇನ್ ಸಾಬ್ ರನ್ನು ಸೇವೆಗೆ ಮರು ನಿಯೋಜಿಸುವಂತೆ ಸೂಚಿಸಿದೆ.
ಪ್ರಕರಣದ ವಿವರ: ಹುಸೇನ್ ಸಾಬ್ ಹುಬ್ಬಳ್ಳಿಯ 2013ರ ಮಾ.24ರಂದು ಬೆಳಗಾವಿ ಮತ್ತು ಹುಬ್ಬಳ್ಳಿ ನಡುವೆ ಬಸ್ ಚಾಲನೆ ಮಾಡುತ್ತಿದ್ದಾಗ ಬಸ್ ಅಪಘಾತಕ್ಕೀಡಾಗಿ ಮೋಟಾರ್ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ. ಆ ಕುರಿತು ಕ್ರಿಮಿನಲ್ ಕೇಸು ದಾಖಲಾಗಿತ್ತು. ಇತ್ತ ನಿಗಮ ಕೂಡ ಚಾಲಕನ ವಿರುದ್ಧ ಶಿಸ್ತು ಕ್ರಮ ಆರಂಭಿಸಿತ್ತು. ಜತೆಗೆ ಷೋಕಾಸ್ ನೋಟಿಸ್ ನೀಡಿ ವಿಚಾರಣೆ ನಡೆಸಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಆ ಕ್ರಮವನ್ನು ಪ್ರಶ್ನಿಸಿ ಚಾಲಕ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಕಾರ್ಮಿಕರನ್ನು ಸೇವೆಗೆ ಮರು ನಿಯೋಜಿಸಬೇಕು ಎಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸಾರಿಗೆ ನಿಮಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ವೇಳೆ ಹೈಕೋರ್ಟ್, ಈ ಅಪಘಾತದಲ್ಲಿ ಮೃತನ ಕುಟುಂಬದವರು ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯಲ್ಲಿ ಸಾರಿಗೆ ನಿಗಮ ಯಾವ ನಿಲುವು ತೆಗೆದುಕೊಂಡಿತ್ತು ಎಂಬ ಬಗ್ಗೆ ತಿಳಿಯಲು ಬಯಸಿತು. ಕೋರ್ಟ್ ನಿರ್ದೇಶನದಂತೆ ಕ್ಲೇಮು ಅರ್ಜಿ ವಿಚಾರಣೆ ಪ್ರಕ್ರಿಯೆ ವಿವರಗಳನ್ನು ಸಲ್ಲಿಸಲಾಗಿತ್ತು.
ಮೃತನ ಕುಟುಂಬದವರು ಪರಿಹಾರ ಕೋರಿದ ಕ್ಲೇಮು ಅರ್ಜಿಯಲ್ಲಿ, ಸಾರಿಗೆ ನಿಗಮ ತನ್ನ ಚಾಲಕನ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಚಾಲಕ ವಾಹನವನ್ನು ಸರಿಯಾಗಿಯೇ ಚಲಾಯಿಸುತ್ತಿದ್ದ. ಅಪಘಾತದಲ್ಲಿ ಆತನ ನಿರ್ಲಕ್ಷ್ಯವಿರಲಿಲ್ಲ. ಮೃತನ ನಿರ್ಲಕ್ಷ್ಯದಿಂದ ಅಪಘಾತ ನಡೆದಿದೆ ಎಂದು ಹೇಳಿತ್ತು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್, ಕ್ಲೇಮು ಅರ್ಜಿಯಲ್ಲಿ ಚಾಲಕನ ನಿರ್ಲಕ್ಷ್ಯವಿಲ್ಲ ಎಂದು ಸಮರ್ಥಿಸಿಕೊಂಡರೂ ತಾನೇ ಆತನನ್ನು ಸೇವೆಯಿಂದ ವಜಾ ಮಾಡಿರುವ ಸಾರಿಗೆ ನಿಗಮದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತು.
ಒಂದೆಡೆ ಅಪಘಾತದಲ್ಲಿ ಆತನ ನಿರ್ಲಕ್ಷ್ಯವಿಲ್ಲ ಎಂದು ಚಾಲಕನ ಕ್ರಮ ಸಮರ್ಥಿಸಿಕೊಂಡ ನಿಗಮ, ಮತ್ತೊಂದು ಕಡೆ ವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂದು ಚಾಲಕನ ದುರ್ನಡತೆ ವಿರುದ್ಧ ಶಿಸ್ತು ಕ್ರಮ ಆರಂಭಿಸಿದೆ. ಇದು ಹೇಗೆ ಸಾಧ್ಯ? ಒಂದೇ ನಿಗಮ ಒಂದೇ ಘಟನೆ ಬಗ್ಗೆ ಎರಡು ನಿಲುವು ಕೈಗೊಳ್ಳುವುದು ಸರಿಯೇ ಎಂದು ಖಾರವಾಗಿ ಪ್ರಶ್ನಿಸಿದೆ.
ನಿಗಮ ಸರ್ಕಾರದ ಅಧೀನ ಸಂಸ್ಥೆ ಮತ್ತು ಅದು ಇತರೆ ಸಂಸ್ಥೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಬೇಕು. ಸಾರಿಗೆ ನಿಗಮ ತೆಗೆದುಕೊಳ್ಳಬೇಕಾದ ನಿಲುವು ಏಕರೂಪವಾಗಿರಬೇಕು. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿಗಮಕ್ಕೆ ಯಾವಾಗಲೂ ಮುಕ್ತವಾಗಿರುತ್ತದೆ. ಆದರೆ ಅದೇ ಸಮಯದಲ್ಲಿ ನಿಗಮವು ಮೋಟಾರು ವಾಹನ ಕ್ಲೈಮ್ ಅರ್ಜಿಯಲ್ಲಿ ನ್ಯಾಯಯುತವಾಗಿ ಮತ್ತು ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೇ ಅದೇ ಸಂಸ್ಥೆ ವ್ಯತಿರಿಕ್ತ ನಿಲುವು ಕೈಗೊಂಡರೆ ಏನು ಮಾಡುವುದು. ಇಂಥ ನಿರ್ಧಾರ ಕೈಗೊಳ್ಳುವ ನಿಗಮದ ಉದ್ದೇಶದ ದುರುದ್ದೇಶದಿಂದ ಕೂಡಿದೆ ಎನಿಸಲಿದ್ದು, ಚಾಲಕನ ವಿರುದ್ಧ ಶಿಸ್ತು ಕ್ರಮ ಜರುಗಿಸಿರುವುದನ್ನು ಒಪ್ಪಲಾಗದು. ಹಾಗಾಗಿ ಕಾರ್ಮಿಕ ನ್ಯಾಯಾಲಯದ ಆದೇಶ ಸರಿಯಾಗಿಯೇ ಇದೆ ಎಂದು ತಿಳಿಸಿದ ಹೈಕೋರ್ಟ್, ನಿಗಮದ ಮೇಲ್ಮನವಿ ವಜಾಗೊಳಿಸಿದೆ.