ಸಾರಾಂಶ
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ವತಿಯಿಂದ ಪೋಷಣ್ ಅಭಿಯಾನ ಮಾಸಾಚರಣೆ ಅಂಗವಾಗಿ ಸಂಪಾಜೆ ಫಸ್ಟ್ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ವತಿಯಿಂದ ಪೋಷಣ್ ಅಭಿಯಾನ ಮಾಸಾಚರಣೆ ಅಂಗವಾಗಿ ಸಂಪಾಜೆ ಫಸ್ಟ್ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು.ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಕಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಹೊರಬರಲು ಪೌಷ್ಟಿಕ ಆಹಾರವನ್ನು ಸೇವಿಸುವಂತೆ ಕರೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಮಾತನಾಡಿ, ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.ಸಂಪಾಜೆ ವರ್ತುಲದ ಮೇಲ್ವಿಚಾರಕಿ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಅಪೌಷ್ಟಿಕತೆ ಮಟ್ಟವನ್ನು ಗುರುತಿಸಲು ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ತಿಂಗಳು ತೂಕ ಮಾಡಿ ಕಡಿಮೆ ತೂಕ ಇರುವ ಮಕ್ಕಳನ್ನು ಎನ್‌ಆರ್‌ಸಿ ಕೇಂದ್ರಕ್ಕೆ ದಾಖಲಿಸುವಂತೆ ತಿಳಿಸಿದರು.
ಆರೋಗ್ಯ ಇಲಾಖೆಯ ಮಡಿಕೇರಿ ತಾಲೂಕು ಎಲ್.ಎಚ್.ವಿ. ಸುಮತಿ, ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ನೀಡುವ ಚುಚ್ಚುಮದ್ದಿನ ಬಗ್ಗೆ ಮಾಹಿತಿ ನೀಡಿದರು.ತಾಲೂಕು ಆರೋಗ್ಯ ಕಾರ್ಯಕ್ರಮದ ಅಧಿಕಾರಿ ನೀಲಿಂ, ಎಲ್ಲ ಫಲಾನುಭವಿಗಳು ಆಧಾರ್ ಕಾರ್ಡ್‌ಗೆ ಫೋನ್ ನಂಬರನ್ನು ಲಿಂಕ್ ಮಾಡಿಸುವ ಮೂಲಕ ಇಲಾಖೆಯ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಸಂಪಾಜೆ ವರ್ತುಲದ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ತಾಯಂದಿರು, ಪೋಷಕರು, ಆರೋಗ್ಯ ಇಲಾಖೆಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.