ಸನಾತನ ಧರ್ಮವೇ ಅಲಿಖಿತ ಸಂವಿಧಾನ: ಬ್ರಹ್ಮಾನಂದ ಸರಸ್ವತಿ ಶ್ರೀ

| Published : May 04 2025, 01:31 AM IST

ಸನಾತನ ಧರ್ಮವೇ ಅಲಿಖಿತ ಸಂವಿಧಾನ: ಬ್ರಹ್ಮಾನಂದ ಸರಸ್ವತಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟ್ಯಂತರ ವರ್ಷಗಳಿಂದ ಸ್ವೀಕಾರಾರ್ಹವಾದ ಸಂಗತಿಗಳನ್ನು ಒಳಗೊಂಡ ಸನಾತನ ಧರ್ಮವೇ ಅಲಿಖಿತ ಸಂವಿಧಾನವಾಗಿ ನಮ್ಮನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ.

ಕುಮಟಾ: ಮೂಲಭೂತವಾಗಿ ಮನುಷ್ಯರಲ್ಲಿ ಮೌಲ್ಯಗಳು ಬೆಳೆಯಬೇಕು. ಕೋಟ್ಯಂತರ ವರ್ಷಗಳಿಂದ ಸ್ವೀಕಾರಾರ್ಹವಾದ ಸಂಗತಿಗಳನ್ನು ಒಳಗೊಂಡ ಸನಾತನ ಧರ್ಮವೇ ಅಲಿಖಿತ ಸಂವಿಧಾನವಾಗಿ ನಮ್ಮನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ ಎಂದು ಕನ್ಯಾಡಿ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.ಶನಿವಾರ ಪಟ್ಟಣದ ನಾಮಧಾರಿ ಸಭಾಭವನದ ಮೇಲಂತಸ್ತಿನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆಧ್ಯಾತ್ಮಿಕ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಂಡರೆ ಸಂಘರ್ಷಗಳು, ಅಪರಾಧಿಕ ಪ್ರವೃತ್ತಿಗಳು ಕಡಿಮೆಯಾಗಿ ದೇಶದ ಲಿಖಿತ ಸಂವಿಧಾನ ಅನುಸರಿಸಲು ಸಾಧ್ಯವಾಗುತ್ತದೆ ಎಂದರು.

ಕಾಲೋಚಿತ ವ್ಯವಹಾರದಲ್ಲಿ ಲೌಕಿಕ ಬದುಕಿನಲ್ಲಿ ನಮ್ಮ ಇಂದಿನ ಸಂವಿಧಾನವನ್ನು ಎಲ್ಲರೂ ಒಪ್ಪಲೇಬೇಕು. ಆಧ್ಯಾತ್ಮಿಕ ಜಗತ್ತಿಗೆ ಸಂಬಂಧಿಸಿ ಗುರುಹಿರಿಯರು ಹೇಳಿದ ಸಂಸ್ಕಾರವನ್ನು ಉಳಿಸಿಕೊಂಡಾಗ ಸಂವಿಧಾನದಂತೆ ಬದುಕಲು ಸಾಧ್ಯವಾಗುತ್ತದೆ. ಸಂವಿಧಾನದ ಆಶಯದಂತೆ ಹಿಂದುಳಿದ, ಶೋಷಿತ ಸಮಾಜಗಳು ಬಲಗೊಳ್ಳಬೇಕಿದೆ. ಸಾಮಾಜಿಕ ವ್ಯವಸ್ಥೆಯನ್ನು ಗಟ್ಟಿ ಮಾಡಲು ಭಗವಂತ ಎಲ್ಲರಿಗೂ ಶಕ್ತಿ ಕೊಡಲಿ ಎಂದು ಆಶೀರ್ವದಿಸಿದರು.

ಕುಮಟಾದ ಕೋನಳ್ಳಿಯಲ್ಲೇ ಚಾತುರ್ಮಾಸ್ಯ ಕೈಗೊಳ್ಳಲಿದ್ದೇನೆ. ಆ ಮೂಲಕ ಸಂಘಟನೆ, ಆಧ್ಯಾತ್ಮಿಕ ಸಂಪನ್ನತೆ ಹೆಚ್ಚಬೇಕು. ಆಧ್ಯಾತ್ಮಿಕ ಕ್ಷೇತ್ರಗಳ ಸಂದರ್ಶನವನ್ನು ಸಮಾಜದವರು ಮಾಡಬೇಕು. ಅದಕ್ಕೆ ಪೂರಕವಾಗಿ ಅಯೋಧ್ಯೆಯಲ್ಲಿ ೧ ಎಕರೆ ಜಾಗ ಖರೀದಿಸಿ ಮೇ ೧೮-೧೯ ರಂದು ಭೂಮಿಪೂಜೆ ಸಂಕಲ್ಪಿಸಿದ್ದೇವೆ. ಅಲ್ಲಿ ರಾಜ್ಯದ ಹಲವಾರು ನಾಯಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಭವಿಷ್ಯದಲ್ಲಿ ನಮ್ಮ ವ್ಯಾಪ್ತಿಗೆ ನಿಲುಕದ, ನಮ್ಮ ಜ್ಞಾನದ ಆಚೆಗೆ ಇರುವಂಥ ಅಲೌಕಿಕ ಶಕ್ತಿ ಸಂಪನ್ನತೆಗಾಗಿ, ಶಾಂತಿ, ನೆಮ್ಮದಿಗಾಗಿ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ನಮ್ಮ ತಂದೆ ದಿ. ಬಂಗಾರಪ್ಪನವರನ್ನು ನಾಯಕರನ್ನಾಗಿ ಮಾಡಿದ್ದು ಅಭಿಮಾನಿಗಳ ಶಕ್ತಿ. ಆ ಶಕ್ತಿಯ ಬಲದಲ್ಲೇ ಇಂದು ನಾನು ಶಾಸಕನಾಗಿ ಶಿಕ್ಷಣ ಸಚಿವನಾಗಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ಮಾಡಿದ್ದೇನೆ. ಶಿಕ್ಷಣ ಸಚಿವನಾಗಿರುವುದಕ್ಕೆ ಹೆಮ್ಮೆ ಮತ್ತು ಸಂತಸ ಇದೆ. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಪ್ರಜೆಯಾಗಲು ಬೇಕಾದ ಶೈಕ್ಷಣಿಕ ಶಕ್ತಿಯನ್ನು ಕೊಡುವದಕ್ಕೆ ನಿರಂತರ ಪ್ರಯತ್ನ ಮಾಡಿದ್ದೇವೆ. ಶಿಕ್ಷಣ ಸಚಿವನಾಗಿ ಈವರೆಗೆ ಉತ್ತಮ ಕೆಲಸ ಮಾಡಿದ್ದು ಮುಂದೆಯೂ ಮಾಡಲಿದ್ದೇನೆ. ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದೇವೆ. ಶಿಕ್ಷಣ ಎಲ್ಲರಿಗೂ ಸಮಾನವಾಗಿ ಸಿಗಬೇಕು ಅಂದಾಗ ಮಾತ್ರ ಭವಿಷ್ಯ ಸುಲಭವೂ ಶ್ರೇಷ್ಠವೂ ಆಗಿರುತ್ತದೆ. ಸಮಾಜದ ಉದ್ದೇಶಕ್ಕಾಗಿ ನಮ್ಮನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಮಾಜ ಸಂಘಟನೆಗಳು ಮುಂಚೂಣಿಯಲ್ಲಿರಬೇಕು. ಅಧಿಕಾರ ಇದ್ದಾಗ ಅದರ ಲಾಭವನ್ನು ಸಮುದಾಯಕ್ಕೆ, ಈ ಭಾಗಕ್ಕೆ ಸಿಗುವುದಕ್ಕೆ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಶಾಸಕ ದಿನಕರ ಶೆಟ್ಟಿಯವರು ತಮ್ಮ ಅಧಿಕಾರಾವಧಿಯುದ್ದಕ್ಕೂ ನಾಮಧಾರಿ ಸಮಾಜಕ್ಕಾಗಿ ನೀಡಿರುವ ಸಹಕಾರ, ಅನುದಾನಗಳು, ಬೆಂಬಲಕ್ಕಾಗಿ ಸಮಾಜದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಸಮಾಜಕ್ಕಾಗಿ ನಾವು ಮಾಡಿದ ಒಳ್ಳೆಯ ಕೆಲಸಗಳು ನಮ್ಮ ಹೆಸರನ್ನು ಸದಾ ಜೀವಂತವಾಗಿರಿಸುತ್ತದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಅಭಿವೃದ್ಧಿಗೆ ಶಿಕ್ಷಣ ಅಗತ್ಯ. ಶಿಕ್ಷಣ, ಕೌಶಲ್ಯವಿದ್ದರೂ ಅವಕಾಶವಿಲ್ಲದ ವ್ಯಕ್ತಿಯನ್ನು ಗುರುತಿಸುವ, ಮಾರ್ಗದರ್ಶನ ನೀಡುವ ಕೆಲಸವನ್ನು ಸಮಾಜ ಮಾಡಬೇಕು. ಅದಾಗಲೇ ಸಮಾಜ ಅಭಿವೃದ್ಧಿ ಸಾಧ್ಯ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾಮಧಾರಿ ಸಭಾಭವನಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲೇ ಲಕ್ಷಾಂತರ ಅನುದಾನ ಮಂಜೂರಿ ಮಾಡಿಸಲಾಗಿತ್ತು. ಹಣ ಇನ್ನೂ ಬಿಡುಗಡೆಯಾಗಬೇಕಿದೆ. ನಾಮಧಾರಿ ಸಮಾಜದ ಯಾವುದೇ ಕಾರ್ಯಕ್ರಮ, ಬೇಡಿಕೆಗಳಿಗೆ ಯಾವತ್ತೂ ಸ್ಪಂದಿಸಿದ್ದೇನೆ ಎಂದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು. ನಾಮಧಾರಿ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ ಇನ್ನಿತರ ಗಣ್ಯರು ಇದ್ದರು. ಸಮಾಜ ಪ್ರಮುಖರು ಶ್ರೀಗಳ ಪಾದಪೂಜೆ ನೆರವೇರಿಸಿ ಗೌರವ ಸಮರ್ಪಿಸಿದರು.