17ರಿಂದ ಮೂರು ದಿನ ಗೋವಾದಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ

| Published : May 11 2025, 01:23 AM IST

17ರಿಂದ ಮೂರು ದಿನ ಗೋವಾದಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ಸವದಲ್ಲಿ 3 ದಿನಗಳ ಕಾಲ 1000 ವರ್ಷಗಳ ಹಿಂದಿನ ಪವಿತ್ರ ಸೋಮನಾಥ ಜ್ಯೋತಿರ್ಲಿಂಗವನ್ನು ನೋಡುವ ಅಪರೂಪದ ಅವಕಾಶ ಕಲ್ಪಿಸಲಾಗಿದೆ.‘ಆರ್ಟ್ ಆಫ್ ಲಿವಿಂಗ್’ನ ಸಂಸ್ಥಾಪಕ ಗುರುದೇವ ಶ್ರೀ ರವಿಶಂಕರ ಗುರೂಜಿ, ಪತಂಜಲಿ ಯೋಗ ಪೀಠದ ಸಂಸ್ಥಾಪಕ ಯೋಗಋಷಿ ಸ್ವಾಮಿ ರಾಮದೇವಜಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಹುಬ್ಬಳ್ಳಿ: ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ 83ನೇ ಜನ್ಮೋತ್ಸವ ಮತ್ತು ಸಂಸ್ಥೆಯ ರಜತ ಮಹೋತ್ಸವ ನಿಮಿತ್ತ ಗೋವಾದಲ್ಲಿ ಮೇ 17ರಿಂದ 19ರ ವರೆಗೆ ಐತಿಹಾಸಿಕ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಆಯೋಜನೆ ಮಾಡಲಾಗಿದೆ ಎಂದು ಸನಾತನ ಸಂಸ್ಥೆಯ ವಿದುಲಾ ಹಳದೀಪುರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪೋಂಡಾದ ಫಾರ್ಮಾ ಗುಡ್‌ವೆಲ್‌ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಒಂದು ಕೋಟಿ ರಾಮನಾಮ ಜಪಯಜ್ಞ ಮತ್ತು ಸಂತ ಸಭೆ,‘ಹಿಂದೂ ರಾಷ್ಟ್ರ ರತ್ನ’ಮತ್ತು ‘ಸನಾತನ ಧರ್ಮಶ್ರೀ’ಪುರಸ್ಕಾರ ವಿತರಿಸಲಾಗುವುದು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಸನಾತನ ಧರ್ಮಶ್ರೀ ಪ್ರಶಸ್ತಿ ವಿತರಿಸಲಾಗುವುದು.

ಪಾರಂಪರಿಕ ಕಲೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಪ್ರಾಚೀನ ಶಸ್ತ್ರಾಸ್ತ್ರಗಳು ಹಾಗೂ ಸನಾತನ ಸಂಸ್ಕೃತಿ, ರಾಷ್ಟ್ರ, ಕಲೆ, ಆಯುರ್ವೇದ, ಆಧ್ಯಾತ್ಮಿಕ ವಸ್ತುಗಳ ಭವ್ಯ ಪ್ರದರ್ಶನ ಆಯೋಜಿಸಲಾಗಿದೆ. ಇದೇ ವೇಳೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಗುರು ಭಕ್ತಾರಾಜ ಮಹಾರಾಜರು, ಸಮರ್ಥ ರಾಮದಾಸ ಸ್ವಾಮೀಜಿ, ಸಜ್ಜನಗಡದ ಶ್ರೀಧರ ಸ್ವಾಮೀಜಿ, ಸಮರ್ಥರ ಶಿಷ್ಯ ಶ್ರೀ ಕಲ್ಯಾಣ ಸ್ವಾಮಿ, ಶ್ರೀ ಸಾಯಿಬಾಬಾ, ಶ್ರೀ ಸಿದ್ದಾರೂಢ ಸ್ವಾಮೀಜಿ, ಗಗನಗಿರಿ ಮಹಾರಾಜ, ಗೋಂದವಲೇಕರ ಮಹಾರಾಜರು ಸೇರಿ 10ಕ್ಕಿಂತಲೂ ಹೆಚ್ಚಿನ ಸಂತರ ಪಾದುಕೆಗಳ ದರ್ಶನ ವ್ಯವಸ್ಥೆ ಮಾಡಲಾಗಿದೆ. ಮೇ 19ರಂದು ವಿಶ್ವ ಕಲ್ಯಾಣಕ್ಕಾಗಿ ಹಾಗೂ ಸನಾತನ ಧರ್ಮದವರ ಆರೋಗ್ಯಕ್ಕಾಗಿ ಮಹಾ ಧನ್ವಂತರಿ ಯಜ್ಞ ನಡೆಯಲಿದೆ.

1000 ವರ್ಷಗಳ ಜ್ಯೋತಿ ದರ್ಶನ: ಉತ್ಸವದಲ್ಲಿ 3 ದಿನಗಳ ಕಾಲ 1000 ವರ್ಷಗಳ ಹಿಂದಿನ ಪವಿತ್ರ ಸೋಮನಾಥ ಜ್ಯೋತಿರ್ಲಿಂಗವನ್ನು ನೋಡುವ ಅಪರೂಪದ ಅವಕಾಶ ಕಲ್ಪಿಸಲಾಗಿದೆ.‘ಆರ್ಟ್ ಆಫ್ ಲಿವಿಂಗ್’ನ ಸಂಸ್ಥಾಪಕ ಗುರುದೇವ ಶ್ರೀ ರವಿಶಂಕರ ಗುರೂಜಿ, ಪತಂಜಲಿ ಯೋಗ ಪೀಠದ ಸಂಸ್ಥಾಪಕ ಯೋಗಋಷಿ ಸ್ವಾಮಿ ರಾಮದೇವಜಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಶಾಧ್ಯಕ್ಷ ಸ್ವಾಮಿ ಗೋವಿಂದದೇವ ಗಿರಿಜಿ, ಕೇಂದ್ರದ ವಿದ್ಯುತ್ ರಾಜ್ಯ ಸಚಿವ ಶ್ರೀಪಾದ ನಾಯಿಕ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ ಶಿಂಧೆ, ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಛತ್ತೀಸ್ಗಡದ ಮುಖ್ಯಮಂತ್ರಿ ವಿಷ್ಣುದೇವ ಸಾಯಿ, ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಹಾಗೂ ಕಾಶಿ ಮತ್ತು ಮಥುರಾದ ಪ್ರಕರಣ ನಡೆಸುತ್ತಿರುವ ನ್ಯಾಯವಾದಿ ವಿಷ್ಣುಶಂಕರ ಜೈನ್, ಶಾಸಕ ಅರವಿಂದ ಬೆಲ್ಲದ, ಚಿಂತರ ಚಕ್ರವರ್ತಿ ಸೂಲಿಬೆಲೆ, ಸಂಸದ ಯದುವೀರ ಶ್ರೀಕೃಷ್ಣದತ್ತ ಒಡೆಯರ್, ರಾಜಣ್ಣ ಕೊರವಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಸುಮಾರು 25 ಸಾವಿರಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ದಯಾನಂದ ರಾವ್, ಶಾಂತಣ್ಣ ಕಡಿವಾಳ, ಮಹಾದೇವ ಸಾಗರೇಕರ್, ಗುರುಪ್ರಸಾದ ಗೌಡ ಉಪಸ್ಥಿತರಿದ್ದರು.