ಮರಳು ಮಾಫಿಯಾ, ಡಿಜೆ ಹಾವಳಿಗೆ ಪೂರ್ಣ ಕಡಿವಾಣ: ಹಿರಿಯ ಪೊಲೀಸ್‌ ಅಧಿಕಾರಿಗಳ ಭರವಸೆ

| Published : Jul 29 2025, 01:14 AM IST / Updated: Jul 29 2025, 01:17 AM IST

ಮರಳು ಮಾಫಿಯಾ, ಡಿಜೆ ಹಾವಳಿಗೆ ಪೂರ್ಣ ಕಡಿವಾಣ: ಹಿರಿಯ ಪೊಲೀಸ್‌ ಅಧಿಕಾರಿಗಳ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಗ್ರಾಮಾಂತರ ಹಾಗೂ ಮಂಗಳೂರು ನಗರ ವ್ಯಾಪ್ತಿಯ ಎಸ್‌ಸಿ ಎಸ್‌ಟಿ ಕುಂದುಕೊರತೆ ಜಂಟಿ ಸಭೆ ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಲ್ಲಿ ಮರಳು ಮಾಫಿಯಾ ಹಾಗೂ ಡಿಜೆ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾ ಎಸ್ಪಿ ಡಾ. ಅರುಣ್‌ ಹಾಗೂ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ.

ಮಂಗಳೂರಿನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಗ್ರಾಮಾಂತರ ಹಾಗೂ ಮಂಗಳೂರು ನಗರ ವ್ಯಾಪ್ತಿಯ ಎಸ್‌ಸಿ ಎಸ್‌ಟಿ ಕುಂದುಕೊರತೆ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.

ಕೆಂಪುಕಲ್ಲು, ಮರಳು ಕೊರತೆಯಿಂದ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ದಲಿತ ಮುಖಂಡರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಡಾ. ಅರುಣ್‌, ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಎರಡು ಪಟ್ಟು ಹೆಚ್ಚು ನಾನ್‌ ಸಿಆರ್‌ಝಡ್‌ನ ಮರಳು ಲಭ್ಯವಿದೆ. ಅದನ್ನು ಜಿಲ್ಲಾಡಳಿತದ ಆ್ಯಪ್‌ ಮೂಲಕ ಬುಕ್ಕಿಂಗ್‌ ಮಾಡಬಹುದು. ಆದರೆ ಕೆಲವು ಮರಳು ಮಾಫಿಯಾದವರು ಸಿಆರ್‌ಝಡ್‌ ಮರಳೇ ಬೇಕು ಎನ್ನುತ್ತಿದ್ದಾರೆ. ಬೆಂಗಳೂರಿನಲ್ಲಿ ಎಂ-ಸ್ಯಾಂಡ್‌, ಹೋಲೋಬ್ಲಾಕ್‌ನಲ್ಲಿ ನಿರ್ಮಿಸಿದ ಕಟ್ಟಡಗಳು ಸುರಕ್ಷಿತವಾಗಿವೆ. ಇಲ್ಲಿ ಸಿಆರ್‌ಝಡ್‌ ಮರಳೇ ಬೇಕು ಎಂದು ಹೇಳುತ್ತಿದ್ದಾರೆ. ಇದರಲ್ಲಿ ಮರಳು ಮಾಫಿಯಾ ಇದೆ. ಇದು ಕಪ್ಪು ಹಣದಲ್ಲಿ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಹೆಲ್ಮೆಟ್‌ ಧರಿಸದವರ ವಿರುದ್ಧ ಕ್ರಮ:

ನಗರದ ಹಲವೆಡೆ ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.

ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಉತ್ತರಿಸಿ, ಹೆಲ್ಮೆಟ್‌ ಧರಿಸದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ. ಸದ್ಯ ಮಳೆಗಾಲ ಇರುವುದರಿಂದ ವಾಹನಗಳನ್ನು ತಡೆದು ನಿಲ್ಲಿಸುವಾಗ ಅಪಘಾತಗಳು ಸಂಭವಿಸಬಹುದು ಎಂಬ ಕಾರಣಕ್ಕೆ ವಾಹನಗಳನ್ನು ತಡೆದು ನಿಲ್ಲಿಸುವ ಕಾರ್ಯಾಚರಣೆ ಕಡಿಮೆಗೊಳಿಸಲಾಗಿದೆ ಎಂದರು. ಡಿಸಿಪಿ ಮಿಥುನ್‌ ಮಾತನಾಡಿ, ಮಂಡ್ಯದಲ್ಲಿ ಇತ್ತೀಚೆಗೆ ವಾಹನ ತಡೆದು ನಿಲ್ಲಿಸಿದಾಗ ಅಪಘಾತ ಉಂಟಾದ ನಂತರ ವಾಹನ ತಡೆದು ದಂಡ ವಿಧಿಸುವ ಕಾರ್ಯಾಚರಣೆ ಕಡಿಮೆ ಮಾಡಲಾಗಿದೆ. ಕ್ಯಾಮರಾ ಸೇರಿದಂತೆ ತಂತ್ರಜ್ಞಾನಗಳನ್ನು ಆಧರಿಸಿ ಉಲ್ಲಂಘನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಪುತ್ತೂರು ತಾಲೂಕಿನ ಬಲ್ನಾಡು ಮತ್ತು ಅಜಕ್ಕಳದಲ್ಲಿರುವ 13 ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ತಮ್ಮ ಮನೆಗಳಿಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ ಎಂದು ದಲಿತ ಮುಖಂಡರು ಕಳವಳ ವ್ಯಕ್ತಪಡಿಸಿದರು. ಇದರಿಂದ ಗರ್ಭಿಣಿಯರು, ರೋಗಿಗಳು ಮತ್ತು ಇತರ ನಿವಾಸಿಗಳು ಅಪಾರ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದರು. ಈ ವಿಷಯವನ್ನು ಜಿಲ್ಲಾಧಿಕಾರಿ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಎಸ್‌ಪಿ ಭರವಸೆ ನೀಡಿದರು.

ಸಂಚಾರಿ ವಿಭಾಗ ಡಿಸಿಪಿ ರವಿಶಂಕರ್‌, ಡಿಸಿಆರ್‌ಇ ಇನ್ಸ್‌ಪೆಕ್ಟರ್‌ ವಿದ್ಯಾಧರ್‌ ಇದ್ದರು.

ಧಾರ್ಮಿಕ ಉತ್ಸವಕ್ಕೆ ರಾತ್ರಿ 10.30ರ ನಂತರ ಅವಕಾಶ ಇಲ್ಲ: ಕಮಿಷನರ್‌ ಗಣೇಶೋತ್ಸವ, ಜನ್ಮಾಷ್ಟಮಿ ಮೊದಲಾದ ಉತ್ಸವಗಳನ್ನು ರಾತ್ರಿ 10.30ರೊಳಗೆ ಮುಗಿಸುವಂತೆ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿರುವುದು ಶ್ಲಾಘನೀಯ. ಡಿಜೆ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಮುಖಂಡ ಗಿರೀಶ್‌ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ, ರಾತ್ರಿ 10.30ರ ಅನಂತರ ಆಚರಣೆಗೆ ಅವಕಾಶವಿಲ್ಲ. ಡಿಜೆ ಬಳಕೆಗೂ ಅವಕಾಶ ನೀಡುವುದಿಲ್ಲ. ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ಪೊಲೀಸ್‌ ಕಂಟ್ರೋಲ್‌ ರೂಂ ಅಥವಾ 112ಕ್ಕೆ ಮಾಹಿತಿ ನೀಡಬಹುದು. ಉಲ್ಲಂಘನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.