ಅಭಿಮಾನಿಗಳನ್ನು ಪುಳಕಗೊಳಿಸಿದ ಗೋಲ್ಡನ್‌ ಸ್ಟಾರ್‌ ಗಣೇಶ್‌

| Published : Jan 17 2025, 12:47 AM IST

ಸಾರಾಂಶ

ಕರಾವಳಿಯ ಅನೇಕ ಸ್ನೇಹಿತರು ಸೀರಿಯಸ್‌ ಫಿಲಂ ಮಾಡಬೇಡಿ, ಚಿತ್ರ ನೋಡಿ ಖುಷಿಪಡಲು ಜನ ಇಷ್ಟಪಡುತ್ತಾರೆ ಎಂದು ಹೇಳುತ್ತಾರೆ. ನಾವು ನಮ್ಮ ಸಾಮರ್ಥ್ಯ ಮೀರಿ ಚಿತ್ರ ನಿರ್ಮಾಣ ಮಾಡಲಿದ್ದೇವೆ. ಈ ಮೂಲಕ ತುಳು ಚಿತ್ರರಂಗವನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗುವ ವಿಶ್ವಾಸವಿದೆ ಎಂದು ಗಣೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳುನಾಡಿನ ಅನೇಕ ಮಂದಿ ಸ್ಯಾಂಡಲ್‌ವುಡ್‌, ಬಾಲಿವುಡ್‌ನಲ್ಲಿ ಮಿಂಚುತ್ತಿರುವುದು ಒಂದೆಡೆಯಾದರೆ, ಇದೀಗ ತುಳು ಚಿತ್ರ ನಿರ್ಮಿಸಲು ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ನೇತೃತ್ವದ ಗೋಲ್ಡನ್‌ ಮೂವೀಸ್‌ ಮುಂದಾಗಿದೆ. ತುಳುನಾಡಿನದ್ದೇ ಪ್ರತಿಭೆಗಳಾದ ನಿತ್ಯಪ್ರಕಾಶ್‌ ಬಂಟ್ವಾಳ್‌ ಮತ್ತು ಅಮೃತಾ ನಾಯಕ್‌ ಅವರು ನಾಯಕ- ನಾಯಕಿ. ಸ್ವತಃ ಗೋಲ್ಡನ್‌ ಸ್ಟಾರ್‌ ಗಣೇಶ್‌ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಿಲ್ಪಾ ಗಣೇಶ್‌ ಮಾಲೀಕತ್ವದ ‘ಗೋಲ್ಡನ್‌ ಮೂವೀಸ್‌’ ಬ್ಯಾನರ್‌ನಡಿ ಮೊಟ್ಟ ಮೊದಲ ತುಳು ಚಿತ್ರ ‘ಪ್ರೊಡಕ್ಷನ್‌ ನಂ.1’ (ತಾತ್ಕಾಲಿಕ ಶೀರ್ಷಿಕೆ)ಗೆ ಗುರುವಾರ ಕುದ್ರೋಳಿ ದೇವಾಲಯದಲ್ಲಿ ಮುಹೂರ್ತ ನೆರವೇರಿತು. ಗೋಲ್ಡನ್ ಸ್ಟಾರ್‌ ಗಣೇಶ್‌ ಈ ಸಂದರ್ಭ ಹಾಜರಿದ್ದು, ನೂರಾರು ಅಭಿಮಾನಿ ವರ್ಗವನ್ನು ಪುಳಕಗೊಳಿಸಿದರು.

ಮುಹೂರ್ತದ ಬಳಿಕ ಮಾತನಾಡಿದ ಗಣೇಶ್‌, ನನ್ನ ಮೊತ್ತ ಮೊದಲ ಸಿನೆಮಾ ಮೊದಲು ಚಿತ್ರೀಕರಣ ಆದದ್ದು ಮಂಗಳೂರಿನಲ್ಲಿ. ಮೊದಲ ಸಿನೆಮಾದ ಡೈರೆಕ್ಟರ್‌, ಮ್ಯೂಸಿಕ್‌ ಡೈರೆಕ್ಟರ್‌ ಎಲ್ಲರೂ ಮಂಗಳೂರಿನವರೇ. ನಾನು ಮದುವೆಯಾದದ್ದು ಕೂಡ ಕರಾವಳಿಯ ಹುಡುಗಿಯನ್ನೇ. ನಾಲ್ಕು ವರ್ಷಗಳ ಹಿಂದೆ ಮಂಗಳೂರಿಗೆ ಬಂದಿದ್ದಾಗ ತುಳು ಸಿನೆಮಾ ಮಾಡಬೇಕು ಅಂತ ಅನ್ನಿಸಿತ್ತು. ಅದಕ್ಕಿಂತ ಹೆಚ್ಚಾಗಿ ಶಿಲ್ಪಾ ಗಣೇಶ್‌ ಅವರಿಗೆ ತುಳು ಚಿತ್ರ ಮಾಡುವ ಆಸೆಯಿತ್ತು. ಇದೀಗ ಸರಿಯಾದ ಸಮಯಕ್ಕೆ ಸರಿಯಾದ ಸ್ಕ್ರಿಪ್ಟ್‌ ದೊರೆತಿದ್ದರಿಂದ ಇದು ಸಾಕಾರವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕತೆ ಅತ್ಯಂತ ಚೆನ್ನಾಗಿದೆ. ನಾಯಕ ನಟನಾಗಿ ಕರಾವಳಿಯ ಹೊಸಪ್ರತಿಭೆ ನಿತ್ಯಪ್ರಕಾಶ್‌ ಬಂಟ್ವಾಳ್‌ ಅವರನ್ನು ಆಯ್ಕೆ ಮಾಡಲಾಗಿದೆ. ನಾಯಕಿ ಅಮೃತಾ ನಾಯಕ್‌ ಕೂಡ ಕರಾವಳಿಯವರೇ. ಈ ಚಿತ್ರದಲ್ಲಿ ನಿರ್ಮಾಪಕರು (ಶಿಲ್ಪಾ ಗಣೇಶ್‌) ನನಗಿನ್ನೂ ಪಾತ್ರ ನೀಡಿಲ್ಲ. ನನ್ನನ್ನು ಇಷ್ಟಪಡುವವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಖಂಡಿತವಾಗಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಹೇಳಿದರು.

ಕರಾವಳಿಯ ಅನೇಕ ಸ್ನೇಹಿತರು ಸೀರಿಯಸ್‌ ಫಿಲಂ ಮಾಡಬೇಡಿ, ಚಿತ್ರ ನೋಡಿ ಖುಷಿಪಡಲು ಜನ ಇಷ್ಟಪಡುತ್ತಾರೆ ಎಂದು ಹೇಳುತ್ತಾರೆ. ನಾವು ನಮ್ಮ ಸಾಮರ್ಥ್ಯ ಮೀರಿ ಚಿತ್ರ ನಿರ್ಮಾಣ ಮಾಡಲಿದ್ದೇವೆ. ಈ ಮೂಲಕ ತುಳು ಚಿತ್ರರಂಗವನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗುವ ವಿಶ್ವಾಸವಿದೆ ಎಂದು ಗಣೇಶ್‌ ಹೇಳಿದರು.

ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಚಿತ್ರಕ್ಕೆ ಶುಭ ಹಾರೈಸಿದರು. ಉದ್ಯಮಿ ಪ್ರಕಾಶ್‌ ಶೆಟ್ಟಿ ಚಿತ್ರಕ್ಕೆ ಕ್ಲ್ಯಾಪ್‌ ಮಾಡಿದರು. ಶಾಸಕರಾದ ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹರಿಕೃಷ್ಣ ಬಂಟ್ವಾಳ್‌ ಸಹಿತ ವಿವಿಧ ರಾಜಕೀಯ ಮುಖಂಡರು, ತುಳು ಚಿತ್ರರಂಗದ ಕಲಾವಿದರು ಈ ಸಂದರ್ಭ ಹಾಜರಿದ್ದರು.