ಸಾರಾಂಶ
ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಭರ್ಜರಿ ಗೆಲುವು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಹೊಸದೊಂದು ರಾಜಕೀಯ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದೆ.
ಕನ್ನಡಪ್ರಭವಾರ್ತೆ ಬಳ್ಳಾರಿ
ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಭರ್ಜರಿ ಗೆಲುವು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಹೊಸದೊಂದು ರಾಜಕೀಯ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಈ ಉಪ ಚುನಾವಣೆ ಸೇರಿ ಸಂಡೂರಿನಲ್ಲಿ ಸತತ ಐದು ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬೀಗುವ ಮೂಲಕ ಸಂಡೂರು ಪಕ್ಷದ ಅಭೇದ್ಯ ಕೋಟೆಯಾಗಿ ಮುಂದುವರಿದಿದೆ.ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಈ.ಅನ್ನಪೂರ್ಣ 93,616 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು 83,967 ಮತಗಳನ್ನು ಪಡೆದು 9649 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಹಿನ್ನೆಲೆಯಲ್ಲಿ ಈ.ತುಕಾರಾಂ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯಿಂದಾಗಿ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಈ ಉಪ ಚುನಾವಣೆ ನಡೆದಿದ್ದು, ಇದೀಗ ತುಕಾರಾಂ ಪತ್ನಿಯೇ ಇಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದ ಮೇಲೆ ತುಕಾರಾಂ ಪಾರಮ್ಯ ಮುಂದುವರಿದಂತಾಗಿದೆ. ಜತೆಗೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಗೆದ್ದ ಇತಿಹಾಸ ನಿರ್ಮಾಣವಾಗಿದೆ.
ಆಡಳಿತಾರೂಢ ಪಕ್ಷದ ವಿರೋಧಿ ಅಲೆ ಹಾಗೂ ರಾಜ್ಯ ಸರ್ಕಾರದ ಮೇಲಿನ ಹಗರಣದ ಆರೋಪಗಳು ತನ್ನ ಅಭ್ಯರ್ಥಿಯ ಕೈ ಹಿಡಿಯಲಿದೆ ಎಂದು ನಂಬಿದ್ದ ಬಿಜೆಪಿಗೆ ಸಂಡೂರಿನ ಫಲಿತಾಂಶ ಆಘಾತ ನೀಡಿದೆ. ಈ ಮೂಲಕ ಕಾಂಗ್ರೆಸ್ ಭದ್ರಕೋಟೆ ಭೇದಿಸುವ ಬಿಜೆಪಿ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದೆ.ರೆಡ್ಡಿ ಬಂದರೂ ಅರಳದ ಕಮಲ: ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಿಂದ ಸಂಡೂರು ಉಪ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಚುನಾವಣೆಗಾಗಿ ಸಂಡೂರಲ್ಲಿ ತಾತ್ಕಾಲಿಕವಾಗಿ ಮನೆ ಮಾಡಿದ್ದ ರೆಡ್ಡಿ ಭರ್ಜರಿ ಪ್ರಚಾರವನ್ನೇ ಮಾಡಿದರು. ಆದರೆ, ಸಚಿವ ಸಂತೋಷ್ ಲಾಡ್ ಅವರ ತಂತ್ರಗಾರಿಕೆ ಮುಂದೆ ರೆಡ್ಡಿಯ ಚಾಣಕ್ಯನೀತಿ ಫಲ ನೀಡಲಿಲ್ಲ. ಚುನಾವಣೆ ನಿಮಿತ್ತ ಜನಾರ್ದನ ರೆಡ್ಡಿ ಸಂಡೂರಿನಲ್ಲಿ ವಾಸ್ತವ್ಯ ಹೂಡಿದ್ದನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡ ಕಾಂಗ್ರೆಸ್ ಪಡೆ, ರೆಡ್ಡಿ ಕಣ್ಣು ಸಂಡೂರಿನ ಗಣಿಮಣ್ಣಿನ ಮೇಲೆ ಬಿದ್ದಿದೆ ಎಂದು ಬಿಂಬಿಸಿದರು. ಅಲ್ಲದೆ, ಬಿಜೆಪಿಯ ಕೆಲವರಲ್ಲಿ ರೆಡ್ಡಿ ಆಗಮನದ ಕುರಿತು ಆಕ್ಷೇಪವೂ ಇತ್ತು. ಸಂಡೂರು ರಾಜಮನೆತನಕ್ಕೆ ಸೇರಿದ ಹಾಗೂ ತಮ್ಮದೇ ಆದ ಮತಬ್ಯಾಂಕ್ ಹೊಂದಿರುವ ಕಾರ್ತಿಕ್ ಘೋರ್ಪಡೆ ಅವರು ರೆಡ್ಡಿ ಪ್ರವೇಶದಿಂದಾಗಿ ಅಸಮಾದಾನ ಗೊಂಡಿದ್ದರು. ಉಪ ಚುನಾವಣೆ ವೇಳೆ ಪ್ರಚಾರದಿಂದ ದೂರವೇ ಉಳಿದರು. ಇದರೊಂದಿಗೆ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಲ್ಲಿದ್ದ ಅಸಮಾಧಾನವೂ ಬಿಜೆಪಿಗೆ ಹಿನ್ನಡೆ ಉಂಟು ಮಾಡಿತು.ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಪಕ್ಷದ ನಾಯಕರ ಒಗ್ಗಟ್ಟು ಹಾಗೂ ಸಚಿವ ಸಂತೋಷ್ ಲಾಡ್ ಅವರ ರಾಜಕೀಯ ತಂತ್ರಗಾರಿಕೆ ಪಾಲು ದೊಡ್ಡದಿದೆ. ಸಿದ್ದರಾಮಯ್ಯ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಉಳಿದು, ಹಳ್ಳಿಹಳ್ಳಿಗಳಲ್ಲಿ ಪ್ರಚಾರ ಕೈಗೊಂಡರು. ಇತರ ಸಚಿವ ಸಂಪುಟದ ಸದಸ್ಯರೂ ಜತೆಗಿದ್ದು ಅವರಿಗೆ ಸಾಥ್ ನೀಡಿದರು. ಇದು ಕ್ಷೇತ್ರದ ಅಹಿಂದ ಮತಗಳನ್ನು ಒಗ್ಗೂಡಿಸಲು ಸಹಕಾರಿಯಾಯಿತು. ಇದರ ಜತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಕೈತಪ್ಪಿ ಹೋಗದಂತೆ ನೋಡಿಕೊಂಡಿತು.ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಸಂಡೂರು ಕ್ಷೇತ್ರ ಹೊಸತೇನಲ್ಲ. ಈ ಹಿಂದೆ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು ನಂತರ ಕಲಘಟಗಿಗೆ ವಲಸೆ ಹೋಗಿದ್ದರು. ಸಂಡೂರು ಉಪ ಚುನಾವಣೆ ಪ್ರಚಾರದ ನೇತೃತ್ವವನ್ನು ಅವರೇ ವಹಿಸಿಕೊಂಡು ಹಳ್ಳಿಹಳ್ಳಿಗೂ ಓಡಾಡಿದರು. ಲಾಡ್ ಪ್ರಯತ್ನ ಹಾಗೂ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಈ.ತುಕಾರಾಂ ಅವರ ಪ್ರಭಾವ ಎರಡೂ ಕೆಲಸ ಮಾಡಿದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರನ್ನು ಗೆಲುವಿನ ದಡ ಸೇರಿಸಿತು.