ದೆಹಲಿ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಸಂಡೂರಿನ ವಿದ್ಯಾರ್ಥಿನಿ ಆಯ್ಕೆ

| Published : Jan 19 2024, 01:49 AM IST

ದೆಹಲಿ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಸಂಡೂರಿನ ವಿದ್ಯಾರ್ಥಿನಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಕರ ಹಾಗೂ ಶಿಕ್ಷಕರ ಪ್ರೋತ್ಸಾಹ ಮತ್ತು ಸಹಕಾರ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದರು ವಿದ್ಯಾರ್ಥಿನಿ ಜಿ. ಮಾರೆಮ್ಮ.

ಸಂಡೂರು: ಪಟ್ಟಣದ ಎಸ್ಇಎಸ್ ಬಾಲಕಿಯರ ಪ್ರೌಢಶಾಲೆಯಲ್ಲಿ ೧೦ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಜಿ. ಮಾರೆಮ್ಮ ಅವರು ಜ. ೨೬ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಜಿ. ಮಾರೆಮ್ಮ ಅವರ ಸ್ವಗ್ರಾಮ ತಾಲೂಕಿನ ಮುರಾರಿಪುರ. ಈ ವಿದ್ಯಾರ್ಥಿನಿ ಶಾಲಾ ಹಂತದಲ್ಲಿಯೇ ರಸಪ್ರಶ್ನೆ, ಭಾಷಣ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನ ಪ್ರತಿಭೆ ಮೆರೆದಿದ್ದಾಳೆ. ೨೦೨೨- ೨೩ನೇ ಸಾಲಿನಲ್ಲಿ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆದ ಪ್ರಾಚ್ಯಪ್ರಜ್ಞೆ ಕುರಿತ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು ತಾನು ಕಲಿತ ಶಾಲೆಯ ಹಾಗೂ ತಾಲೂಕಿನ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಬೆಳಗಿದ್ದಳು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಳು. ಇತ್ತೀಚೆಗೆ ನಡೆದ ಪ್ರಾಚ್ಯಪ್ರಜ್ಞೆ ಕುರಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅಲ್ಲದೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿದ್ಯಾರ್ಥಿನಿಯ ಸಾಧನೆಗೆ ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಹಿರ್ಜಿ ಘೋರ್ಪಡೆ, ವೈಷ್ಣವಿ ಘೋರ್ಪಡೆ, ಎಲ್‌ಐಪಿಎಲ್ ನಿರ್ದೇಶಕರಾದ ಏಕಾಂಬರ ಘೋರ್ಪಡೆ, ಕರಕುಶಲ ಕೇಂದ್ರದ ನಿರ್ದೇಶಕರಾದ ಸೂರ್ಯಪ್ರಭಾ ಘೋರ್ಪಡೆ, ಶಿವಪುರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಯಶೋಧರಾ ಘೋರ್ಪಡೆ, ಎಸ್ಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣಮಾಧವ, ಕಾರ್ಯದರ್ಶಿ ಡಾ. ಜಗದೀಶ್ ಬಸಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ, ಎಸ್ಇಎಸ್ ಬಾಲಕಿಯರ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಕಲ್ಲಯ್ಯ ಹಿರೇಮಠ್, ಶಿಕ್ಷಕರು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಕರ ಸಹಕಾರ: ದೆಹಲಿಯಲ್ಲಿನ ಗಣರಾಜ್ಯೋತ್ಸವದ ಕಾರ್ಯಕ್ರಮದ ವೀಕ್ಷಣೆಗೆ ಆಯ್ಕೆಯಾಗಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಪಾಲಕರ ಹಾಗೂ ಶಿಕ್ಷಕರ ಪ್ರೋತ್ಸಾಹ ಮತ್ತು ಸಹಕಾರ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ ಎಂದರು ವಿದ್ಯಾರ್ಥಿನಿ ಜಿ. ಮಾರೆಮ್ಮ.