ನನಗೆ ಸಂಘ-ಪರಿವಾರ ಕಾರ್ಯಕರ್ತರ ಬೆಂಬಲ: ಈಶ್ವರಪ್ಪ

| Published : Apr 16 2024, 01:08 AM IST / Updated: Apr 16 2024, 11:13 AM IST

KS Eshwarappa

ಸಾರಾಂಶ

ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಪರಿಶುದ್ಧವಾಗಿರಬೇಕು ಎಂಬುದು ಆರ್‌ಎಸ್ಎಸ್ ಹೇಳುತ್ತದೆ. ನಾನೂ ಕೂಡ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದು, ಈ ಪರಿಶುದ್ಧತೆ ತತ್ವದ ಹಿನ್ನೆಲೆಯಲ್ಲಿ ಬಿಜೆಪಿ ಶುದ್ಧೀಕರಣದ ಕಾರ್ಯಕ್ಕೆ ಮುಂದಾಗಿದ್ದೇನೆ. - ಕೆ. ಎಸ್. ಈಶ್ವರಪ್ಪ ಹೇಳಿದರು.

 ಶಿವಮೊಗ್ಗ :  ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಪರಿಶುದ್ಧವಾಗಿರಬೇಕು ಎಂಬುದು ಆರ್‌ಎಸ್ಎಸ್ ಹೇಳುತ್ತದೆ. ನಾನೂ ಕೂಡ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದು, ಈ ಪರಿಶುದ್ಧತೆ ತತ್ವದ ಹಿನ್ನೆಲೆಯಲ್ಲಿ ಬಿಜೆಪಿ ಶುದ್ಧೀಕರಣದ ಕಾರ್ಯಕ್ಕೆ ಮುಂದಾಗಿದ್ದೇನೆ. ಹೀಗಾಗಿ ಅನೇಕ ಸಂಘ ಪರಿವಾರದ ಕಾರ್ಯಕರ್ತರು ಈ ಚುನಾವಣೆಯಲ್ಲಿ ನನ್ನ ನಿಲುವನ್ನು ಒಪ್ಪಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಆರ್‌ಎಸ್‌ಎಸ್‌ ಎಂದೂ ರಾಜಕೀಯವಾಗಿ ಗುರುತಿಸಿಕೊಂಡಿಲ್ಲ. ನೇರವಾಗಿ ಯಾವುದೇ ಪಕ್ಷದ ಪರ ಸಂಘ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರಿಗೆ ಸಂಸ್ಕಾರ ಕೊಡುತ್ತದೆ. ಆದರೆ ಆ ಸಂಘಟನೆಯಲ್ಲಿ ಇರುವವರು ಯಾವುದೇ ಪಕ್ಷ ಮತ್ತು ಅಭ್ಯರ್ಥಿ ಬೆಂಬಲಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದಿಂದ ಡಮ್ಮಿ ಅಭ್ಯರ್ಥಿ ಎಂಬ ನನ್ನ ಮಾತಿಗೆ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಬೇರೇನು ಹೇಳಬೇಕೆಂದು ಅವರೇ ಹೇಳಲಿ, ಅದರಂತೆ ಕರೆಯುತ್ತೇನೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆಯಾಗಿದೆ. ಒಂದರ್ಥದಲ್ಲಿ ಇವರು ಚುನಾವಣಾ ಪಾರ್ಟ್‌ನರ್ಸ್. ಹೀಗಾಗಿಯೇ ಕಾಂಗ್ರೆಸ್ ಎಲ್ಲಿಯೂ ಸರಿಯಾದ ಪ್ರಚಾರ ಮಾಡುತ್ತಿಲ್ಲ. ಯಾವುದೇ ಗ್ರಾಮೀಣ ಪ್ರದೇಶದಲ್ಲಿ ಅವರ ಪ್ರಚಾರದ ಯಾವುದೇ ಅಂಶ ಕಾಣುತ್ತಿಲ್ಲ. ಬದಲಾಗಿ ಅವರ ಹೊಂದಾಣಿಕೆಯ ರಾಜಕಾರಣ ಢಾಳಾಗಿ ಕಾಣಿಸುತ್ತಿದೆ. ಇಷ್ಟು ಮಾತ್ರವಲ್ಲ, ಆ ಎರಡೂ ಪಕ್ಷದ ಅಭ್ಯರ್ಥಿಗಳು ಎಲ್ಲಿಯೂ ಪರಸ್ಪರ ಟೀಕಿಸುತ್ತಿಲ್ಲ. ಬದಲಾಗಿ ಇಬ್ಬರೂ ನನ್ನನ್ನು ಟೀಕಿಸುತ್ತಿದ್ದಾರೆ. ಇಂತಹ ಯಾವುದೇ ಟೀಕೆಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ನನ್ನ ಬಗ್ಗೆ ಭಯ ಶುರುವಾಗಿದೆ. ಹೀಗಾಗಿ ನನ್ನನ್ನು ಟೀಕಿಸುತ್ತಿದ್ದಾರೆ. ನನ್ನ ಕುರಿತು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾನು ಟಿಕೆಟ್ ಹಿಂದೆ ಪಡೆದು ಚುನಾವಣಾ ನಿವೃತ್ತಿ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದೇನೆ. ಬ್ರಹ್ಮ ಬಂದು ಹೇಳಿದರೂ, ಮೋದಿ ಹೇಳಿದರೂ ಹಿಂದಕ್ಕೆ ಪಡೆಯೋದಿಲ್ಲ ಎಂದು ಹೇಳಿದರೂ ಪುನಃ ಪುನಃ ವಾಪಸ್ಸು ಪಡೆಯುವ ಸಾಧ್ಯತೆ ಎಂದು ಗುಲ್ಲು ಹರಡಿಸುತ್ತಾರೆ. ಇದು ನನ್ನ ಬೆಂಬಲಿತ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡುವ ಯತ್ನ. ಆದರೆ ಇಂತಹ ಯತ್ನ ಸಫಲವಾಗುದಿಲ್ಲ. ನಾನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಉತ್ಸಾಹಿ ನಾಯಕ ಗೂಳಿಹಟ್ಟಿ ಶೇಖರ್ ಸ್ವಯಂಪ್ರೇರಿತರಾಗಿ ನನ್ನ ಬೆಂಬಲಕ್ಕೆ ಬಂದು ನಿಂತಿದ್ದಾರೆ. ಕಳೆದ 10 ದಿನಗಳಿಂದ ರಣೋತ್ಸಾಹದಲ್ಲಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ಭೋವಿ, ದಲಿತ ಮತ್ತು ಹಿಂದುಳಿದ ವರ್ಗದವರನ್ನು ಸಂಪರ್ಕಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಇನ್ನೊಮ್ಮೆ ಪ್ರಧಾನಿಯಾಗಬೇಕೆಂಬ ಗುರಿ ಅವರದೂ ಕೂಡ ಆಗಿದೆ ಎಂದು ಈಶ್ವರಪ್ಪ ಹೇಳಿದರು.

ಗೋಷ್ಠಿಯಲ್ಲಿ ಗೂಳಿಹಟ್ಟಿ ಶೇಖರ್, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗ ಶಾಸ್ತ್ರಿ, ಗಂಗಾಧರ್ ಮಂಡೇನಕೊಪ್ಪ, ಶಿವಾಜಿ, ರಾಜಣ್ಣ, ತಿಪ್ಪೆಸ್ವಾಮಿ, ವಿಶ್ವಾಸ್ ಮತ್ತಿತರರು ಇದ್ದರು.

ಸಂವಿಧಾನ ಬದಲಾವಣೆ ಕುರಿತು ಅನಗತ್ಯ ಗೊಂದಲ

ಅಂಬೇಡ್ಕರ್ ಬಂದು ಹೇಳಿದರೂ ಸಂವಿಧಾನ ಬದಲು ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಸ್ಪಷ್ಟನೆ ನೀಡಿದ ಮೇಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ವಿಚಾರವನ್ನೇ ಇಟ್ಟುಕೊಂಡು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದರು.ಈ ವಿಚಾರದಲ್ಲಿ ಆರ್‌ಎಸ್‌ಎಸ್‌ ಹೆಸರನ್ನು ಕೂಡ ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ಆರ್‌ಎಸ್‌ಎಸ್‌ ಎಂದೂ ಸಂವಿಧಾನವನ್ನು ಬದಲಿಸುವ ವಿಚಾರ ಮಾತನಾಡಿಲ್ಲ. ಕೇಂದ್ರ ಸರ್ಕಾರ ಕೂಡ ಹೇಳಿಲ್ಲ. ಸುಳ್ಳು ಸುದ್ದಿಯನ್ನೇ ಹತ್ತಾರು ಬಾರಿ ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುವ ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಚುನಾವಣಾ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಕುರಿತು ಮಾತನಾಡಿದರೆ ಲಾಭ ಮಾಡಿಕೊಳ್ಳಬಹುದು ಎಂದು ಇವರು ಭಾವಿಸಿದಂತಿದೆ. ಆದರೆ ನಿಜಕ್ಕೂ ಆರ್‌ ಎಸ್‌ಎಸ್‌ ಕುರಿತ ಮಾತಿನಿಂದ ಇವರು ನಷ್ಟ ಅನುಭವಿಸುತ್ತಾರೆ ಎಂದು ಭವಿಷ್ಯ ನುಡಿದರು.

ದೇಶದ ಜನ ಈಗಾಗಲೇ ಆರ್‌ಎಸ್‌ಎಸ್‌ ಅನ್ನು ಒಪ್ಪಿಕೊಂಡಿದ್ದಾರೆ. ಸಂವಿಧಾನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ ಮೇಲೆ ಇನ್ನು ಈ ವಿಚಾರವನ್ನು ರಾಜಕೀಯಕ್ಕೆ ಎಳೆ ತರಬಾರದು ಎಂದರು.