ದಾವಣಗೆರೆಯ ಕೆರೆಗಳ ಅಭಿವೃದ್ಧಿಗೆ ಸಂಕಪ್ಪ

| Published : Dec 09 2024, 12:48 AM IST

ಸಾರಾಂಶ

ನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಿಪಂ, ನಗರ ಪಾಲಿಕೆ, ನಗರಸಭೆ, ಗ್ರಾಪಂ ವ್ಯಾಪ್ತಿಗೊಳಪಡುವ ದಾವಣಗೆರೆ ಜಿಲ್ಲೆಯ 538 ಕೆರೆಗಳ ಹೂಳು ತೆಗೆಸುವುದು, ಕೆರೆ ಏರಿ ದುರಸ್ತಿ, ಕೋಡಿ ಬಿದ್ದು ಹರಿಯುವ ಹಳ್ಳಗಳನ್ನು ಸರಿಪಡಿಸುವ ಬಗ್ಗೆ ನಗರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರ ಸಭೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಿಪಂ, ನಗರ ಪಾಲಿಕೆ, ನಗರಸಭೆ, ಗ್ರಾಪಂ ವ್ಯಾಪ್ತಿಗೊಳಪಡುವ ದಾವಣಗೆರೆ ಜಿಲ್ಲೆಯ 538 ಕೆರೆಗಳ ಹೂಳು ತೆಗೆಸುವುದು, ಕೆರೆ ಏರಿ ದುರಸ್ತಿ, ಕೋಡಿ ಬಿದ್ದು ಹರಿಯುವ ಹಳ್ಳಗಳನ್ನು ಸರಿಪಡಿಸುವ ಬಗ್ಗೆ ನಗರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತ ಮುಖಂಡರ ಸಭೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ನಗರ, ಗ್ರಾಮೀಣ ಕೆರೆಗಳಿಗೆ ಕಾಯಕಲ್ಪ ನೀಡುವ ಬಗ್ಗೆ, ಕೆರೆಗಳ ಅಭಿವೃದ್ಧಿ ಕುರಿತಂತೆ ಆಗಬೇಕಾದ ತುರ್ತು ಕಾರ್ಯಗಳ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳು ತುರ್ತಾಗಿ ಸಭೆ ಕರೆಯುವಂತೆ ರೈತ ಮುಖಂಡರು, ಸಂಘ-ಸಂಸ್ಥೆಗಳ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ತಮ್ಮ ಕ್ಷೇತ್ರದ ಬಸವಾಪಟ್ಟಣ, ಹಾಲಸ್ವಾಮಿ ಮಠದ ಹಿಂಭಾಗದಲ್ಲಿ ಸುಮಾರು 600 ಅಡಿ ಅಗಲ, 3 ಕಿಮೀ ಉದ್ದ, 40 ಅಡಿ ಎತ್ತರವಿರುವ ಎರಡು ಗುಡ್ಡಗಳ ಮಧ್ಯೆ ಬ್ಯಾರೇಜ್ ನಿರ್ಮಿಸುವ ಕೆಲಸ ಆಗಬೇಕಾಗಿದೆ. ಮಾಯಕೊಂಡ ಹೊಸಕೆರೆ ಜಾಗದಲ್ಲಿ ಮಾರಿ ಕಣಿವೆಯಷ್ಟೇ ಜಾಗವಿದ್ದು, ಅರಣ್ಯ ಇಲಾಖೆ ಅನುಮತಿ ನೀಡಿದರೆ, ಅಂತರ್ಜಲ ವೃದ್ಧಿ, ಕಾಡು ಪ್ರಾಣಿಗಳು, ನಾಡ ಪ್ರಾಣಿಗಳು, ಪಕ್ಷಿಗಳು ಎದುರಿಸುವ ನೀರಿನ ಹಾಹಾಕಾರ ತಪ್ಪಿಸಲು ಸಾಧ್ಯವಿದೆ ಎಂದರು.

ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನಾ ಸಮಿತಿ ಸಂಚಾಲಕ, ರೈತ ಮುಖಂಡ ಬಲ್ಲೂರು ರವಿಕುಮಾರ, ಜಿಲ್ಲಾದ್ಯಂತ ಕೆರೆಗಳ ಹೂಳೆತ್ತುವುದು, ಕೆರೆಗಳ ಏರಿಗಳನ್ನು ಭದ್ರಪಡಿಸುವ, ಒತ್ತುವರಿಯಾಗಿರುವ ಮಳೆ ನೀರು, ಕೆರೆಗೆ ಬರುವ ಹಳ್ಳ ಕೊಳ್ಳಗಳ ಜಾಗಗಳ ಒತ್ತುವರಿ ತೆರವುಗೊಳಿಸಬೇಕು. ಸಮರೋಪಾದಿಯಲ್ಲಿ ಈ ಕಾರ್ಯ ಕೈಗೆತ್ತಿಕೊಂಡರೆ, ಮುಂದಿನ ಮಳೆಗಾಲದ ವೇಳೆಗೆ ಕೆರೆಗಳಿಗೆ ನೀರು ಹರಿದು ಬಂದು ಕೆರೆಗಳು ತುಂಬಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.ಹರಿಹರ ತಾ. ಮಲೆಬೆನ್ನೂರಿಗೆ ಸೇರಿದ 9200 ಎಕರೆ ಅರಣ್ಯ ಪ್ರದೇಶದಲ್ಲಿ ಸುಮಾರು 10 ಎಕರೆಯಲ್ಲಿ ಮುದ್ದಪ್ಪನ ಕೆರೆ ಇದೆ. ಕೆರೆಯ ಏರಿ ಒಡೆದು ಹೋಗಿ, ಸುಮಾರು ದಿನಗಳಾಗಿವೆ. ಕೆರೆ ಏರಿಯನ್ನು ಈಗಾಗಲೇ ಅಭಿವೃದ್ದಿಪಡಿಸಲು ಜಿಪಂನಿಂದ ಕಾರ್ಯಾದೇಶವಾಗಿದೆ. ಆದಷ್ಟು ಬೇಗನೆ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಅಗತ್ಯ ಕಾಮಗಾರಿಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ನೆಲ, ಜಲ, ಪರಿಸರ ಆಂದೋಲನ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ದಾವಣಗೆರೆ ನಗರದ ಹಸಿರು ಸ್ವಚ್ಛತೆ ಆಂದೋಲನಾ ಸಂಘ, ಗ್ರಾಮೀಣಾಭಿವೃದ್ಧಿ ಸಂಘದ ಲಕ್ಷ್ಮಣ, ರೈತ ಮುಖಂಡರಾದ ಐಗೂರು ಶಿವಮೂರ್ತೆಪ್ಪ, ಕರುಣಾ ಜೀವ ಟ್ರಸ್ಟ್‌ ಪ್ರತಿನಿಧಿಗಳಾದ ಕತ್ತಲಗೆರೆ ತಿಪ್ಪಣ್ಣ, ಬಸವಾಪಟ್ಟಣ ರಾಜಣ್ಣ, ವಸಂತ ಮೆಡಿಕಲ್ಸ್, ಮಾಯಕೊಂಡ ಅಶೋಕ, ರಾಂಪುರ ಬಸವರಾಜ, ಮಿಯ್ಯಾಪುರ ತಿರುಮಲೇಶ, ಹೆಬ್ಬಾಳು ರಾಜಯೋಗಿ, ಮಾಯಕೊಂಡ ಪ್ರತಾಪ ಸಾಣಿಕೆರೆ ಟಿ.ಗುರುಮೂರ್ತಿ ಇತರರು ಇದ್ದರು.