ರಾಮನಗರದಲ್ಲಿ ಸಂಭ್ರಮ ಸಡಗರದಿಂದ ಸಂಕ್ರಾಂತಿ ಹಬ್ಬ ಆಚರಣೆ

| Published : Jan 15 2025, 12:45 AM IST

ಸಾರಾಂಶ

ಸಂಕ್ರಾಂತಿಯು ಸಮೃದ್ಧಿಯ ಸಂಕೇತ. ವರ್ಷ ಪೂರ್ತಿ ದುಡಿಯುವ ರಾಸುಗಳಿಗೆ ಗೌರವ ನೀಡುವ ಕೆಲಸವನ್ನು ರೈತಾಪಿ ವರ್ಗದವರು ಹಿಂದಿನ ಕಾಲದಿಂದಲೂ ಮಾಡಿಕೊಂಡು ಬರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರಸುಗ್ಗಿ ಹಬ್ಬವಾಗಿರುವ ಮಕರ ಸಂಕ್ರಾಂತಿಯನ್ನು ಎಳ್ಳು ಬೆಲ್ಲಗಳ ವಿನಿಮಯ, ಪೊಂಗಲ್ ಸೇರಿದಂತೆ ವಿಶೇಷ ಖಾದ್ಯಗಳ ತಯಾರಿಕೆ, ಗೋವುಗಳನ್ನು ಕಿಚ್ಚು ಹಾಯಿಸುವುದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳ ಮೂಲಕ ಜಿಲ್ಲೆಯ ಜನರು ಸಡಗರ ಸಂಭ್ರಮದಿಂದ ಮಂಗಳವಾರ ಆಚರಿಸಿದರು.ನಗರಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿ ಸಡಗರ ಜೋರಾಗಿ ಕಂಡು ಬಂದಿತು. ಪೊಂಗಲ್ ಸೇರಿದಂತೆ ಕಬ್ಬು, ಕೊಬ್ಬರಿ, ಗೆಣಸು, ಕಡಲೆಕಾಯಿ, ಬಾಳೆಹಣ್ಣು ಮತ್ತು ಅವರೆಕಾಯಿಗಳಿಂದ ವಿಶೇಷ ಖಾದ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸಿದರು.ನಗರದ ಎಲ್ಲ ದೇಗುಲಗಳಲ್ಲಿಯೂ ಅಲಂಕಾರ, ವಿಶೇಷ ಪೂಜೆಗಳು ಜರುಗಿದವು. ಹೆಣ್ಣು ಮಕ್ಕಳು ಸಂಕ್ರಾಂತಿ ಎಳ್ಳು ಬೀರುವ ಮೂಲಕ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದರು. ಸಂಜೆ ವೇಳೆ ಸಿಂಗಾರಗೊಂಡಿದ್ದ ಮಕ್ಕಳು, ಅಕ್ಕ ಪಕ್ಕದ ಮನೆಗೆ ತೆರಳಿ ಎಳ್ಳು ಕೊಡು ಕೊಳ್ಳುವಿಕೆಯನ್ನು ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ರಾಸುಗಳಿಗೆ ಸಿಂಗಾರ:ಸಂಕ್ರಾಂತಿಯು ಸಮೃದ್ಧಿಯ ಸಂಕೇತ. ವರ್ಷ ಪೂರ್ತಿ ದುಡಿಯುವ ರಾಸುಗಳಿಗೆ ಗೌರವ ನೀಡುವ ಕೆಲಸವನ್ನು ರೈತಾಪಿ ವರ್ಗದವರು ಹಿಂದಿನ ಕಾಲದಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಹಾಗಾಗಿ ಭಾನುವಾರ ರಾಸುಗಳ ಮೈ ತೊಳಿದು, ಸಂಜೆಯ ವೇಳೆಗೆ ಊರಿನ ಪೂರ್ತಿ ಮೆರವಣಿಗೆ ಮಾಡಿ, ಧನ ಹಾಗೂ ಹೋರಿಗಳನ್ನು ಕಿಚ್ಚು ಹಾಯಿಸಲಾಯಿತು.ಇದಾದ ಬಳಿಕೆ ರೈತಾಪಿ ವರ್ಗದ ಸ್ನೇಹಿತನಾಗಿರುವ ಹಸು ಹಾಗೂ ಹೋರಿಗಳನ್ನು ಮನೆ ತುಂಬಿಸಿಕೊಳ್ಳಲಾಯಿತು. ರಾತ್ರಿಯ ವೇಳೆ ಊರಿನಲ್ಲಿ ಮೆರವಣಿಗೆ ಮಾಡಲಾಯಿತು. ಆಮೂಲಕ ಸಂಕ್ರಾಂತಿಯ ಸಂಭ್ರಮಕ್ಕೆ ಅಧಿಕೃತವಾಗಿ ತೆರೆ ಎಳೆಯಲಾಯಿತು.ಮನೆಯಲ್ಲಿನ ಹೆಣ್ಣು ಮಕ್ಕಳು ಅಕ್ಕ ಪಕ್ಕದ ಮನೆಗೆ ತೆರಳಿ, ಎಳ್ಳು ಬೀರುವ ದೃಶ್ಯ ಸಾಮಾನ್ಯವಾಗಿತ್ತು. ಸಿಂಗಾರ ಗೊಂಡಿದ್ದ ಹೆಣ್ಣು ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿದ್ದ ಎಳ್ಳು ಮತ್ತುಕಬ್ಬು ಮನೆ ಮನೆಗೆ ತೆರಳಿ, ವಿನಿಮಯ ಮಾಡಿಕೊಂಡ ದೃಶ್ಯ ಸಮಾನ್ಯವಾಗಿತ್ತು.ಮಂಗಳವಾರ ಹಬ್ಬದ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವರ್ತಕರಿಗೆ ಕೊಂಚನ ಮಟ್ಟಿನ ನಿರಾಸೆ ವ್ಯಕ್ತವಾಗಿತ್ತು. ಇನ್ನು ಹಬ್ಬದ ದಿನವಾದ ಬೆಳಗ್ಗೆ ಸಾರಿಗೆ ಸಂರ್ಪಕ್ಕಗಳಿಗೆ ಬೇಡಿಕೆ ಇತ್ತು. ಬೆಂಗಳೂರು ಹಾಗೂ ಮೈಸೂರಿನಿಂದ ಆಗಮಿಸಿದ್ದ ಜನತೆಗೆ, ಹಳ್ಳಿಗಳಿಗೆ ತೆರಳಲು ಕೊಂಚ ಕಷ್ಟವಾಗಿದೆ.------14ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಶ್ರೀ ಬಾಲನಾಗಮ್ಮ ಬಂಡೆ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಗರಸಭೆ ಸದಸ್ಯ ಶಿವಸ್ವಾಮಿ (ಅಪ್ಪಿ) ರವರು ಭಕ್ತರಿಗೆ ಕಡಲೆಕಾಯಿ, ಅವರೆಕಾಯಿ ವಿತರಿಸಿದರು.