ಚಂಚಲವಾದ ಮನಸ್ಸಿಗೆ ಸಂಸ್ಕಾರ ಬಹಳ ಮುಖ್ಯ: ಚುಂಚಶ್ರೀ

| Published : Mar 03 2024, 01:31 AM IST

ಸಾರಾಂಶ

ದೇವರನ್ನು ನೋಡಲು ಮನಸ್ಸೆಂಬ ವಾಹನವನ್ನು ನೀಡಿ ನಮ್ಮನ್ನು ಜಗತ್ತಿಗೆ ಕಳುಹಿಸಿದ್ದಾನೆ. ಆದರೆ, ನಾವು ಆ ಮನಸ್ಸನ್ನು ಕೆಡಿಸಿಟ್ಟಿದ್ದೇವೆ. ರಿಪೇರಿ ಮಾಡಲಾಗದಷ್ಟು ರೀತಿಯಲ್ಲಿ ಹಾಳುಗೆಡವಿದ್ದೇವೆ. ಯಾವ ಮನಸ್ಸು ಜಗತ್ತನ್ನು ತೋರಿಸುವುದೋ ಅದೇ ಮನಸ್ಸು ಭಗವಂತನನ್ನೂ ತೋರಿಸುತ್ತದೆ. ಅಂತಹ ಮನಸ್ಸನ್ನು ಚೆಂದವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

ಕನ್ನಡಪ್ರಭ ವಾರ್ತೆ ಮಂಡ್ಯಚಂಚಲವಾದ ಮನಸ್ಸಿಗೆ ಸಂಸ್ಕಾರ ಕೊಡುವುದು ಬಹಳ ಮುಖ್ಯ. ಮನಸ್ಸಿಗೆ ಸಂಸ್ಕಾರ ಸಿಕ್ಕಿದರೆ ನಾವು ದೇವರನ್ನು ಕಾಣಲು ಸಾಧ್ಯ ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಜಿಲ್ಲಾ ಒಕ್ಕಲಿಗರ ಸಂಘ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ದೇವರನ್ನು ನೋಡಲು ಮನಸ್ಸೆಂಬ ವಾಹನವನ್ನು ನೀಡಿ ನಮ್ಮನ್ನು ಜಗತ್ತಿಗೆ ಕಳುಹಿಸಿದ್ದಾನೆ. ಆದರೆ, ನಾವು ಆ ಮನಸ್ಸನ್ನು ಕೆಡಿಸಿಟ್ಟಿದ್ದೇವೆ. ರಿಪೇರಿ ಮಾಡಲಾಗದಷ್ಟು ರೀತಿಯಲ್ಲಿ ಹಾಳುಗೆಡವಿದ್ದೇವೆ. ಯಾವ ಮನಸ್ಸು ಜಗತ್ತನ್ನು ತೋರಿಸುವುದೋ ಅದೇ ಮನಸ್ಸು ಭಗವಂತನನ್ನೂ ತೋರಿಸುತ್ತದೆ. ಅಂತಹ ಮನಸ್ಸನ್ನು ಚೆಂದವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಮನಸ್ಸು ಕಲುಷಿತವಾಗದಂತೆ, ನಿರ್ಮಲವಾಗಿಟ್ಟುಕೊಳ್ಳಬೇಕಾದರೆ ಸಂಸ್ಕಾರ ಕೊಡಬೇಕು. ಸಂಸ್ಕಾರ ಸಿಗಬೇಕೆಂದರೆ ಭಗವಂತನನ್ನು ಸ್ಮರಿಸುವ, ಗುರುಗಳನ್ನು ನೆನೆಯುವ ಕಾರ್ಯಕ್ರಮಗಳಲ್ಲಿ ಮನಸ್ಸನ್ನು ತೊಡಗಿಸಿದ್ದೇ ಆದರೆ ಮನಸ್ಸು ಸದಾಕಾಲ ತಿಳಿಯಾಗಿರುತ್ತದೆ ಎಂದರು.

ಜೇನುಹುಳು ಹೇಗೆ ಹೂವಿನ ಮಕರಂದವನ್ನು ಹೀರಿ ಸಿಹಿಯಾದ ಜೇನನ್ನು ನೀಡುವುದೋ ಹಾಗೆಯೇ ಮನುಷ್ಯರು ಕೂಡ ಸದಾಕಾಲ ಒಳ್ಳೆಯ ಆಲೋಚನೆ, ಚಿಂತನೆಗಳನ್ನು ಮಾಡುತ್ತಾ ಸಮಾಜಕ್ಕೆ ಒಳ್ಳೆಯದನ್ನೇ ಮಾಡಬೇಕು. ಸಜ್ಜನರ ಸಹವಾಸದೊಂದಿಗೆ ಪ್ರೀತಿಯನ್ನು ಎಲ್ಲರಿಗೂ ಹಂಚಬೇಕು. ಒಳ್ಳೆಯದನ್ನೇ ಮಾತನಾಡುತ್ತಾ, ಒಳ್ಳೆಯ ಕಾರ್ಯಗಳನ್ನೇ ಮಾಡುತ್ತಾ ಜೀವನದಲ್ಲಿ ಮುನ್ನಡೆದಾಗ ಮನಸ್ಸು ನಮಗೆ ದೇವರನ್ನು ತೋರಿಸುತ್ತದೆ. ಆ ಸತ್ಸಂಗದ ಮೂಲಕ ನಮಗೆ ಜೀವನದಲ್ಲಿ ಮುಕ್ತಿ ಸಿಗುತ್ತದೆ ಎಂದು ನುಡಿದರು.

ಕುವೆಂಪು ಅವರು ಹೇಳಿರುವಂತೆ ಮನಸ್ಸು ಮಲ್ಲಿಗೆಯಿಂದ ಕೂಡಿದ್ದಾಗ ಮಾತುಗಳು ಪರಿಮಳದಂತಿರುತ್ತವೆ. ನಾವಾಡುವ ಪ್ರತಿಯೊಂದು ಮಾತುಗಳು ಯಾರನ್ನೂ ನೋಯಿಸಬಾರದು. ಮಾತುಗಳು ಶುದ್ಧವಾಗಿದ್ದಾಗ ನಮಗೆ ಗೌರವ ಹೆಚ್ಚುತ್ತದೆ. ಎಲ್ಲರಿಂದಲೂ ಪ್ರೀತಿಗೆ ಒಳಗಾಗುತ್ತೇವೆ ಎಂದರು.

ಶಾಸಕ ಪಿ.ರವಿಕುಮಾರ್‌ ಮಾತನಾಡಿ, ಅಭಿವೃದ್ಧಿಗೆ ಜಿಲ್ಲೆಯೊಳಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಮಂಡ್ಯದ ಅಸ್ಮಿತೆಯ ಪ್ರತೀಕದಂತಿರುವ ಮೈಷುಗರ್‌ ಕಾರ್ಖಾನೆಯನ್ನು 500 ಕೋಟಿ ರು. ವೆಚ್ಚದಲ್ಲಿ ಆಧುನಿಕವಾಗಿ ನಿರ್ಮಿಸಲು ಮುಂದಾಗಿದ್ದೇವೆ. ಹಾಲಿ ಇರುವ ಕಾರ್ಖಾನೆ ಸ್ಥಳದಲ್ಲಿ ಸಾಫ್ಟ್‌ವೇರ್‌ ಪಾರ್ಕ್‌ ನಿರ್ಮಿಸಲು ಉದ್ದೇಶಿಸಿದ್ದು, ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಗುರುಗಳ ಆಶೀರ್ವಾದ ಮತ್ತು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವುದರೊಂದಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದೊಳಗೆ ಬದಲಾವಣೆಯ ಪರ್ವವವನ್ನು ಸೃಷ್ಟಿಸುವ ಸಂಕಲ್ಪ ಮಾಡಿದ್ದೇನೆ. ಹತ್ತಾರು ಯೋಜನೆಗಳಿಗೆ ಚಾಲನೆ ನೀಡಿದ್ದು, ಕೆಲವು ಮುಗಿಯುವ ಹಂತ ತಲುಪಿವೆ. ಮಂಡ್ಯ ನಗರದೊಳಗಿರುವ ಚಿತ್ರಣವನ್ನು ಶೀಘ್ರದಲ್ಲೇ ಬದಲಾಯಿಸಿ ಅಭಿವೃದ್ಧಿಯಲ್ಲಿ ಹೊಸ ರೂಪ ನೀಡುವುದಾಗಿ ಹೇಳಿದರು.

ಗುರುವಂದನಾ ಕಾರ್ಯಕ್ರಮದಲ್ಲಿ ಯುವ ಬರಹಗಾರರ ಬಳಗದ ಅಧ್ಯಕ್ಷ ಸತೀಶ್ ಜವರೇಗೌಡ, ಕೆಆರ್‌ಎಸ್‌ ಕಾರ್ಯಪಾಲಕ ಎಂಜಿನಿಯರ್‌ ಜಯಂತ್‌, ಕ್ರೀಡಾಪಟು, ಸಮಾಜಸೇವಕ ಡಾ.ರೇವಣ್ಣ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಷುಗರ್‌ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಆದಿ ಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಇತರರಿದ್ದರು.