ಭಾರತೀಯ ಸಾಧಕರ ಪರಂಪರೆಗೆ ಸಂಸ್ಕೃತ ಕೊಡುಗೆ ಅನನ್ಯ: ಸದಾನಂದ ಶರ್ಮ

| Published : Sep 26 2024, 10:16 AM IST

ಸಾರಾಂಶ

ಸಾಗರದ ಶ್ರೀಗಜಾನನ ಸಂಸ್ಕೃತ ಪಾಠಶಾಲೆಯಲ್ಲಿ ನಡೆದ ‘ಅಸ್ಮಾಕಂ ಸಂಸ್ಕೃತಮ್’ ಕಾರ್ಯಕ್ರಮದಲ್ಲಿ ಕವಿ ಸದಾನಂದ ಶರ್ಮ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಾಗರ

ಸಂಸ್ಕೃತ ಜ್ಞಾನ ಸಂಪನ್ನ ಭಾಷೆ. ನಮ್ಮ ಪ್ರಾಚೀನ ದರ್ಶನ-ಶಾಸ್ತ್ರಗಳು ಸಂಸ್ಕೃತ ಭಾಷೆಯಲ್ಲೇ ರಚಿತವಾದುದು. ಬದುಕಿಗೆ ಸಂಸ್ಕಾರ ನೀಡಿ ಉದ್ಧರಿಸುವ ಸಂಸ್ಕೃತ ಜೀವನದಲ್ಲಿ ಸತ್ಯ-ಶ್ರದ್ಧೆಯನ್ನು ರೂಢಿಸುತ್ತದೆ. ಭಾರತೀಯ ಸಾಧಕರ ಪರಂಪರೆಗೆ ಸಂಸ್ಕೃತ ಭಾಷೆಯ ಕೊಡುಗೆ ಅನನ್ಯವಾದುದು ಎಂದು ಕವಿ ಸದಾನಂದ ಶರ್ಮ ಹೇಳಿದರು.

ಪಟ್ಟಣದ ಎಸ್.ಎನ್.ನಗರದಲ್ಲಿ ಪ್ರಜ್ಞಾಭಾರತಿ ವಿದ್ಯಾಮಂದಿರದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀಗಜಾನನ ಸಂಸ್ಕೃತ ಪಾಠಶಾಲೆಯಲ್ಲಿ ಬುಧವಾರ ನಡೆದ ‘ಅಸ್ಮಾಕಂ ಸಂಸ್ಕೃತಮ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿಗೆ ಶ್ರೀರಾಮ-ಶ್ರೀಕೃಷ್ಣರು ಆದರ್ಶಪ್ರಾಯರು. ಮಹಾಭಾರತ, ರಾಮಾಯಣದಂತಹ ಕೃತಿಯ ಮೂಲಕ ಅವರನ್ನು ಕಡೆದುಕೊಟ್ಟ ವಾಲ್ಮೀಕಿ, ವ್ಯಾಸ ಮಹರ್ಷಿಗಳು ಪ್ರಾತಃಸ್ಮರಣೀಯರು. ಈ ಕೃತಿಯನ್ನು ಸಮೃದ್ಧವಾಗಿಸಲು ಸತ್ವಪೂರ್ಣ ಸಂಸ್ಕೃತ ಭಾಷೆಯೇ ಮೂಲ. ಸಂಸ್ಕೃತ ಇಲ್ಲದೇ ಭಾರತವನ್ನು ಕಲ್ಪಿಸಲು, ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಜ್ಞಾ ಭಾರತಿ ವಿದ್ಯಾಮಂದಿರದ ಮುಖ್ಯಶಿಕ್ಷಕಿ ಭಾರತಿ ಶರ್ಮಾ ಮಾತನಾಡಿ, ಅಧ್ಯಯನದ ಸಾಫಲ್ಯತೆಗೆ ಶ್ರದ್ಧೆಯ ಜೊತೆ ಉತ್ಸಾಹ ಅಗತ್ಯ. ನಿತ್ಯವೂ ಹೊಸತನದಿಂದ ಸಾಧನೆಯ ಮಾರ್ಗದಲ್ಲಿ ಸಾಗಬೇಕು. ಶ್ರೀ ಶ್ರೀಧರಸ್ವಾಮಿಗಳವರು ಸಂಸ್ಥಾಪಿಸಿದ ಈ ಪಾಠಶಾಲೆ ಮತ್ತೆ ಚೈತನ್ಯ ಪಡೆದು ಲೋಕಕ್ಕೆ ಸಂಸ್ಕೃತದ ಅರಿವನ್ನು ಪ್ರಸರಿಸುತ್ತಿರುವುದು ಸಂತಸದ ಸಂಗತಿ. ಸಂಸ್ಕಾರಕ್ಕೆ ಸಂಸ್ಕೃತದ ಕೊಡುಗೆ ಅಪಾರ ಎಂದು ಅವರು ಹೇಳಿದರು.

ಸಂಸ್ಕೃತ ಶಿಕ್ಷಕ ವಿದ್ವಾನ್ ಗಜಾನನ ಭಟ್ ಮಾತನಾಡಿ, ಸಂಸ್ಕೃತ ನಮ್ಮ ಹೃದಯದ ಭಾಷೆ. ಅದು ಮೃತಭಾಷೆಯಲ್ಲ. ಅಮೃತ ಭಾಷೆ. ನಮ್ಮ ನಡೆನುಡಿಯ ಪರಿಷ್ಕಾರಕ್ಕೆ ಸಂಸ್ಕೃತ ಭಾಷೆ ಅನಿವಾರ್ಯ ಎಂದು ಹೇಳಿದರು.

ಮುಖ್ಯ ಶಿಕ್ಷಕಿ ಚೇತನಾ ಕೆ.ಎನ್.ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಸ್ತೋತ್ರ, ಭಗವದ್ಗೀತೆ ಪಠಣ ನಡೆಯಿತು. ಇಂಚರಾ ಆರ್. ಸ್ವಾಗತಿಸಿದರು. ಲಿಖಿತ್ ವಂದಿಸಿದರು. ಶ್ರೀಲಕ್ಷ್ಮೀ ನಿರೂಪಿಸಿದರು.