- ಇಂದು ಕಾಟಿ ಆರೋಹಣ, ನಾಳೆ ಸಿಎಂ, ಸಚಿವರ ಭೇಟಿ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ಸಂತ ಸೇವಾಲಾಲ್ ಜಯಂತ್ಯುತ್ಸವ ಫೆ.13ರಿಂದ 15ರವರೆಗೆ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಜಿಲ್ಲಾಡಳಿತ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಮಹಾಮಠ ಸೇವಾ ಸಮಿತಿ ಸಹಯೋಗದಲ್ಲಿ 287ನೇ ಜಯಂತಿಯ ಜಾತ್ರಾ ಮಹೋತ್ಸವ ಜರುಗಲಿದೆ.ಫೆ.13ರಂದು ಶುಕ್ರವಾರ ಬೆಳಗ್ಗೆ ಶ್ರೀ ಸಂತ ಸೇವಾಲಾಲ್, ಶ್ರೀ ಮರಿಯಮ್ಮ ದೇವಿಯ ಶಿಲಾಮೂರ್ತಿಗೆ ವಿಶೇಷ ಧಾರ್ಮಿಕ ವಿಧಿವಿಧಾನ ಕೈಂಕರ್ಯಗಳು ನಡೆಯಲಿವೆ. ಶ್ರೀ ಸಂತ ಸೇವಾಲಾಲ್ ಮಹಾರಾಜರ, ಶ್ರೀ ಮಾತಾ ಮರಿಯಮ್ಮ ದೇವಿಯ ಕಾಟಿ ಆರೋಹಣದ ಮೂಲಕ ಜಯಂತ್ಯುತ್ಸವಕ್ಕೆ ಚಾಲನೆ ದೊರೆಯಲಿದೆ.
ಫೆ.14ರಂದು ಮಧ್ಯಾಹ್ನ 2 ಗಂಟೆಗೆ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮ ಮತ್ತು ವಿವಿಧ ಕಟ್ಟಡಗಳ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ನ್ಯಾಮತಿ- ಹೊನ್ನಾಳಿ ಕ್ಷೇತ್ರದ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಲಶಕ್ತಿ ಹಾಗೂ ರೈಲ್ವೆ ಶಾಲೆ ರಾಜ್ಯ ಸಚಿವ ವಿ.ಸೋಮಣ್ಣ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್, ಭಾಗವಹಿಸಲಿದ್ದಾರೆ.
ಸಂತ ಸೇವಾಲಾಲ್‌ರ ಭಾವಚಿತ್ರಕ್ಕೆ ಗಣಿ ಮತ್ತು ಭೂವಿಜ್ಞಾನ ಸಚಿವ ದಾವಣಗೆರೆ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ವಲಸೆ ಮಕ್ಕಳ ವಸತಿ ಶಾಲೆಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಗೃಹಮಂತ್ರಿ ಜಿ.ಪರಮೇಶ್ವರ, ವಿಧಾನ ಸಭೆ ಉಪ ಸಭಾಪತಿ ರುದ್ರಪ್ಪ ಎಂ. ಲಮಾಣಿ, ಸಚಿವರಾದ ಸತೀಶ್ ಜಾರಕಿಹೊಳೆ, ಎಸ್.ಮಧು ಬಂಗಾರಪ್ಪ, ಕೃಷ್ಣ ಬೈರೇಗೌಡ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿಪಕ್ಷದ ನಾಯಕ ಆರ್.ಅಶೋಕ್, ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ತಾಲೂಕು ಆಡಳಿತದಿಂದ ಭಾಯಾಗಡ್‌ನಲ್ಲಿ ಸ್ಥಳ ಪರೀಶಿಲನೆಗಾಗಿ ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ನ್ಯಾಮತಿ ತಾಲೂಕು ತಹಸೀಲ್ದಾರ್ ಎಂ.ಪಿ. ಕವಿರಾಜ್, ತಾ.ಪಂ. ಇಒ ಅಶೋಕ್‌ಕುಮಾರ್, ಬಂಜಾರ ನಿಗಮ ವ್ಯವಸ್ಥಾಪಕ ನಿರ್ದೇಶಕ ಎನ್.ರಾಜು ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಸ್ಥಳದಲ್ಲಿದ್ದು ಭೋಜನ ಸಿದ್ಧತೆ, ವೇದಿಕೆ ಸಿದ್ಧತೆಗಳನ್ನು ನಡೆಸಿದರು. ಈ ವೇಳೆ ವಿಜೇಂದ್ರ ಮಹೇಂದ್ರಕರ್, ಕರಿಬಸಪ್ಪ ಬಿ.ಕೆ., ಸಮುದಾಯದ ಮುಖಂಡರು ಇದ್ದರು.- - -