ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಹನ್ನೆರಡನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನ ನೇತೃತ್ವದಲ್ಲಿ ನಡೆದ ಶರಣ ಸಂಸ್ಕೃತಿ ಅದೊಂದು ಜನಸಮುದಾಯದ ಭಕ್ತಿಯ ತೀರ್ಥೋದ್ಭವ. ಮಾನವ ಕಲ್ಯಾಣದ ಆತ್ಮೋನ್ನತಿಯ ಮಹೋತ್ಸವ ಎಂದು ಕೊಡಗು ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ ಹೇಳಿದರು.ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ “ ಸಾಂಸ್ಕೃತಿಕ ನಾಯಕ ಬಸವಣ್ಣ - ಹಾಗೂ ಮಡಿಕೇರಿ ಮಹದೇವಪೇಟೆಯ ಮುರುಗೇಶ್ ಹಾಗೂ ಶಿವಮ್ಮ ಅವರು ಸ್ಥಾಪಿಸಿರುವ ಶೀಲವಂತ ಹಾಗೂ ಸಿದ್ದಲಿಂಗಪ್ರಸಾದ್ ದತ್ತಿ ಕಾರ್ಯಕ್ರಮ ಶರಣ ಸಂಸ್ಕೃತಿ” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, 900 ವರ್ಷಗಳ ವರ್ತಮಾನದ ಅಂದಿನ ಶರಣರು ಕಟ್ಟಿದ ಹಾಗೂ ಸೃಷ್ಟಿಸಿದ ವಚನಗಳು ಎಲ್ಲಾ ಕಾಲಕ್ಕೂ ಅನ್ವಯವಾಗಿ ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಪ್ರಸ್ತುತತೆಯನ್ನು ಬಿತ್ತರಿಸುತ್ತಿವೆ ಎಂದು ವಿಶ್ಲೇಷಿಸಿದರು.ಹನ್ನೆರಡನೇ ಶತಮಾನದಲ್ಲಿ ಧರ್ಮದ ಹೆಸರಿನಲ್ಲಿ ಮಾನವೀಯ ಮೌಲ್ಯಗಳು ಮಣ್ಣುಪಾಲಾಗುತ್ತಿದ್ದ ಮತಿ ಹೀನ ಗತಿಯನ್ನು ಗಮನಿಸಿ ನಡೆ - ನುಡಿ, ಶುದ್ಧವಾದ ಸರ್ವಸಮಾನತೆಯ ವೈಚಾರಿಕ ಸಮಾಜವನ್ನು ನಿರ್ಮಿಸಿದ್ದರ ಫಲವೇ ಬಸವಣ್ಣ ಸಾಂಸ್ಕೃತಿಕ ನಾಯಕನಾಗಿ ವಿಶ್ವಖ್ಯಾತಿಯಾಗಿದ್ದಾನೆ ಎಂದು ಹರ್ಷವರ್ಧನ ಬಣ್ಣಿಸಿದರು.ಹಿಂದುಳಿದ ವರ್ಗಗಳ ಇಲಾಖೆಯ ಮಡಿಕೇರಿ ತಾಲೂಕು ಅಧಿಕಾರಿ ಬಿಂದಿಯಾ ನಾಯಕ್ ಮಾತನಾಡಿ, ಮನುಷ್ಯರಾಡುವ ಮಾತು ಸತ್ಯ, ಸರಳ, ಸುಂದರವಾದಲ್ಲಿ ಸಮಾಜದಲ್ಲಿ ಯಾವುದೇ ಕಲಹಗಳಿಗೆ ಆಸ್ಪದವೇ ಇರುವುದಿಲ್ಲ. ಸಮಸ್ತ ಜೀವಿಗಳು ಸೇರಿದಂತೆ ಮನುಷ್ಯನ ಹುಟ್ಟಿಗೆ ಕಾರಣವಾದ ತಾಯಂದಿರ ಮುಟ್ಟನ್ನು ಹೀಗಳೆದು ಮಹಿಳೆಯರನ್ನು ಅವಮಾನಿಸಿ ಅಪಮಾನಿಸಿ ಮಹಿಳಾ ಹಕ್ಕುಗಳನ್ನು ಕಸಿದಿದ್ದ ಹನ್ನೆರಡನೇ ಶತಮಾನದ ವೈದಿಕ ಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಬಸವಣ್ಣ ಅಂದೇ ಮಹಿಳೆಯರಿಗೆ ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನುಭಾವ ಎಂದರು.ಗಾಳಿಬೀಡು ನವೋದಯ ವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಮಾರುತಿ ದಾಸಣ್ಣನವರ್ ‘ಶರಣ ಸಂಸ್ಕೃತಿ” ಬಗ್ಗೆ ಪ್ರವಚನ ನೀಡಿ, ಹನ್ನೆರಡನೇ ಶತಮಾನದಲ್ಲಿ ವಿಶ್ವಕ್ಕೆ ಕರ್ನಾಟಕ ಕೊಡುಗೆಯಾಗಿ ಕೊಟ್ಟ ಶರಣ ಸಂಸ್ಕೃತಿ ಅದ್ಭುತ ಪರಿಕಲ್ಪನೆ. ಈ ಶರಣ ಸಂಸ್ಕೃತಿ ಮತ್ತೊಂದು ಪರಿಕಲ್ಪನೆಯಾದ ಮಹಾಮನೆಯಲ್ಲಿ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ನುಲಿಯ ಚೆನ್ನಯ್ಯ, ಛಲಗಾರ ಹರಳಯ್ಯ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮ ಹೀಗೆ ನೂರಾರು ಮಂದಿ ಬೇರೆ ಬೇರೆ ಸ್ತರ ಸಮುದಾಯದ ಶರಣರು ಸಮ ಸಮಾಜ ನಿರ್ಮಾಣಕ್ಕೆ ನೀಡಿದ ಕೊಡುಗೆ ಕಾಲಾತೀತವಾದುದು ಎಂದು ದಾಸಣ್ಣನವರ್ ವಿಶ್ಲೇಷಿಸಿದರು.ಸಂಸ್ಕೃತ ಭಾಷೆಯಲ್ಲಿನ ಸಾಹಿತ್ಯವನ್ನು ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಬರೆದು ಸಾರಿದ ಸತ್ಯ ಶುದ್ಧ ಕಾಯಕ ಜೀವಿಗಳ ಆದರ್ಶ ಇಂದಿನ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದು ಕರೆ ಕೊಟ್ಟರು.ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಮೋಹನಕುಮಾರ್, ವಸತಿ ನಿಲಯದ ಮೇಲ್ವಿಚಾರಕಿ ಕರುಣಾಕ್ಷಿ ಇದ್ದರು.