ಸಾರಾಂಶ
ಆರಂಭದಲ್ಲಿ ದೇಸ್ ರಾಗದ ಆಲಾಪ್ ಹಾಗೂ ಜೋಡ್ - ಝಾಲಾಗಳನ್ನು ನುಡಿಸಿ ಮಧ್ಯಲಯ ಝಪತಾಳದಲ್ಲಿ ಸಚಿನ್ ಅವರು ವಿಶೇಷ ನಾದಝರಿಯನ್ನು ಸೃಷ್ಟಿಸಿದರು. ಕೊನೆಯ ಪ್ರಸ್ತುತಿಯಾಗಿ ಕಾಫಿ ರಾಗದಲ್ಲಿ ನುಡಿಸಿದ ಧುನ್ ಕೇಳುಗರ ಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ಇತ್ತೀಚೆಗೆ ಮೈಸೂರಿನ ಪಂಡಿತ್ ಸಚಿನ್ ಹಂಪೆಮನೆ ಅವರ ಸರೋದ್ ವಾದನ ಕಛೇರಿ ಕೇಳುಗರ ಮನಸ್ಸನ್ನು ಆಹ್ಲಾದಗೊಳಿಸಿತು. ಕಾಲೇಜಿನ ಸಭಾಂಗಣ ತುಂಬಿ ನೆರೆದವರ ಮನಸ್ಸಿಗೆ ಮುದ ನೀಡಿ ನವಚೈತನ್ಯದ ಹರುಪನ್ನು ನೀಡಿತು.ಮೈಹರ್ ಘರಾನಾ ಪರಂಪರೆಯ ಅದ್ವಿತೀಯ ನುಡಿಸಾಣಿಕೆ ಸಚಿನ್ ಅವರ ವಾದನ ಶೈಲಿಯಲ್ಲಿ ಅಭೂತಪೂರ್ವವಾಗಿ ಮೂಡಿಬಂತು. ಉಸ್ತಾದ್ ಅಲಿ ಅಕ್ಬರ್ ಖಾನ್ ಇವರ ಅಗ್ರಗಣ್ಯ ಶಿಷ್ಯರಾದ ಪಂ. ರಾಜೀವ್ ತಾರಾನಾಥ್ ಅವರಲ್ಲಿ ಸಚಿನ್ ಅವರು ಸುದೀರ್ಘಕಾಲ ಸರೋದ್ ನುಡಿಸುವಿಕೆಯ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡು ಸಾಧನಾ ಹಾದಿಯಲ್ಲಿ ಬದ್ಧತೆಯಿಂದ ಮುನ್ನಡೆಯುತ್ತಿರುವ ಭರವಸೆಯ ಕಲಾವಿದ.
ಆರಂಭದಲ್ಲಿ ದೇಸ್ ರಾಗದ ಆಲಾಪ್ ಹಾಗೂ ಜೋಡ್ - ಝಾಲಾಗಳನ್ನು ನುಡಿಸಿ ಮಧ್ಯಲಯ ಝಪತಾಳದಲ್ಲಿ ಸಚಿನ್ ಅವರು ವಿಶೇಷ ನಾದಝರಿಯನ್ನು ಸೃಷ್ಟಿಸಿದರು. ಕೊನೆಯ ಪ್ರಸ್ತುತಿಯಾಗಿ ಕಾಫಿ ರಾಗದಲ್ಲಿ ನುಡಿಸಿದ ಧುನ್ ಕೇಳುಗರ ಮನ ಸೆಳೆಯಿತು. ತಬಲಾದಲ್ಲಿ ಆಶಯ್ ಕಲಾವಂತಕರ್, ಬಾಯಾರ್ ಇವರು ಸಮರ್ಪಕ ಸಾಥಿಯನ್ನು ಒದಗಿಸಿದರು.ಅತಿ ವಿರಳವಾಗಿ ಕೇಳಲು ಸಿಗುವ ಸರೋದ್ ವಾದ್ಯದ ನಾದ ಮನಸ್ಸನ್ನು ಉಜ್ಜೀವನಗೊಳಿಸಿ ಜೀವನಸ್ಫೂರ್ತಿಯನ್ನು ನೀಡುವಂತದ್ದು. ಇಂತಹ ವಿಶೇಷ ರೀತಿಯ ವಾದ್ಯದ ಇಂಪನ್ನು ಕಿವಿಗೆ ತುಂಬಿಕೊಂಡ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ - ಬೋಧಕೇತರ ವೃಂದದವರು ಸಂತಸಪಟ್ಟರು.