ಸಾರಾಂಶ
- ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಲಿಂ. ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ಚನ್ನಗಿರಿ
12ನೇ ಶತಮಾನದ ಜಗಜ್ಯೋತಿ ಬಸವೇಶ್ವರರು ರಚಿಸಿದ ವಚನಗಳಲ್ಲಿ ಎಲ್ಲ ಧರ್ಮಗಳ ಸಾರಗಳೂ ಅಡಗಿವೆ. ಸೂರ್ಯ-ಚಂದ್ರರು ಇರುವ ತನಕವು ವಚನ ಸಾಹಿತ್ಯವು ಸರ್ವಕಾಲಿಕ ಸತ್ಯವಾಗಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.ಸೋಮವಾರ ಸಂಜೆ ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದ ವತಿಯಿಂದ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ನಡೆದ ಲಿಂ. ಶ್ರೀಗಳ ಸ್ಮರಣೋತ್ಸವ ಮತ್ತು ಮಹಾಮಾತೆ ಸಜ್ಜಲಗುಡ್ಡದ ಶ್ರೀ ಶರಣಮ್ಮ ತಾಯಿಯವರ ವಚನಾಮೃತ ಬೋಧನೆ ಪ್ರವಚನ, ಶ್ರೀ ಬಸವತತ್ವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠವು ಶ್ರಾವಣ ಮಾಸದಲ್ಲಿ 25 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಮಠದ ಶ್ರೀಗಳ ಈ ಧಾರ್ಮಿಕ ಸೇವಾ ನಿಷ್ಠೆ ಮೆಚ್ಚುವಂಥದು ಎಂದು ತಿಳಿಸಿದರು.
ಶ್ರೀ ಮಠವು ಬಸವ ತತ್ವಗಳ ಪ್ರಚಾರ ಮಾಡುತ್ತಾ 12ನೇ ಶತಮಾನದ ಎಲ್ಲ ಶರಣರ ವಚನಾಮೃತ ಪ್ರವಚನವನ್ನು ಪ್ರತಿ ವರ್ಷವು ಶರಣ-ಶರಣೆಯರ ವಿಚಾರ ಧಾರೆಗಳನ್ನು ಭಕ್ತಸಮೂಹಕ್ಕೆ ತಿಳಿಸುತ್ತಿದೆ. 12ನೇ ಶತಮಾನದಲ್ಲಿ ಕಲ್ಯಾಣದ ಕ್ರಾಂತಿ ಆದಾಗ ವಚನ ಸಾಹಿತ್ಯವನ್ನು ಕಾಪಾಡುವಲ್ಲಿ ದಿಟ್ಟತನದಿಂದ ಹೋರಾಡಿ, ವಚನ ಸಾಹಿತ್ಯವನ್ನು ಉಳಿಸಿದವರು ಮಡಿವಾಳ ಮಾಚಿದೇವರು ಎಂದು ಹೇಳಿದರು.ಸಮಾರಂಭದ ನೇತೃತ್ವ ವಹಿಸಿದ್ದ ಶ್ರೀ ಮಠದ ಡಾ.ಬಸವ ಜಯಚಂದ್ರ ಮಹಾಸ್ವಾಮಿ ಮಾತನಾಡಿ, ಶ್ರಾವಣ ಮಾಸದಲ್ಲಿ ಧಾರ್ಮಿಕ ಉಪದೇಶಗಳು, ಆಧ್ಯಾತ್ಮಿಕವಾದ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಶರಣರ ವಿಚಾರ ಧಾರೆಗಳನ್ನು ಭಕ್ತಸಮೂಹಕ್ಕೆ ತಿಳಿಸುವ ಉದ್ದೇಶ ಶ್ರೀ ಮಠವು ಹೊಂದಿದೆ. ಯಾವುದೇ ತಾರತಮ್ಯಗಳಿಲ್ಲದೇ ಸರ್ವ ಜಾತಿ- ಧರ್ಮದವರನ್ನು ಸಮಾನವಾಗಿ ಕಾಣುವುದೇ ನಮ್ಮ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಲಿಂಗೈಕ್ಯ ಶ್ರೀ ಜಯದೇವ ಸ್ವಾಮಿಗಳ ಆಶಯದಂತೆ ಮುನ್ನಡೆಸಲಾಗುತ್ತಿದೆ ಎಂದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಸೊರಬ ಜಡೆ ಸಂಸ್ಥಾನ ಮಠದ ಮಹಂತಸ್ವಾಮಿಗಳು ಮಾತನಾಡಿ, ಶ್ರಾವಣ ಮಾಸದಲ್ಲಿ ಧಾರ್ಮಿಕ ವಿಚಾರಗಳ ತಿಳಿದು, ಜೀವನಗಳನ್ನು ಪಾವನ ಮಾಡಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.ಪಟ್ಟಣದ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಭಾರತೀಯ ಸನಾತನ ಧರ್ಮದಲ್ಲಿ ಪ್ರತಿಯೊಂದರಲ್ಲಿಯೂ ದೇವರನ್ನು ಕಾಣುತ್ತೇವೆ. ವೀರಶೈವ ಲಿಂಗಾಯತ ಒಂದಾಗಿದ್ದರೆ ಇಡೀ ವಿಶ್ವದಲ್ಲಿಯೇ ಬಲಿಷ್ಠವಾಗಿರುವೆವು ಎಂದರು.
ವಚನಾಮೃತ ಬೋಧನೆಯನ್ನು 30 ದಿನಗಳ ಕಾಲ ಪಠಿಸುವ ಕಾರ್ಯಕ್ರಮಕ್ಕೆ ಪ್ರವಚನಕಾರ ಮಹಾಂತೇಶ ಶಾಸ್ತ್ರಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಒಪನ್ ಮೈಡ್ಸ್ ಸಂಸ್ಥೆಯ ಕಿರಣ್ ಕುಮಾರ್, ಪುರಸಭೆಯ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಮ್ಮ ನರಸಿಂಹಮೂರ್ತಿ, ಸದಸ್ಯರಾದ ಪಾರಿ ಪರಮೇಶ್, ಕಮಲಮ್ಮ, ವೀರಶೈವ ಸಮಾಜದ ಗೌರವ ಅಧ್ಯಕ್ಷ ರಾಜಶೇಖರಯ್ಯ, ಸಾಗರದ ಶಿವಲಿಂಗಪ್ಪ, ಜವಳಿ ಮಹೇಶ್, ಕವಿತಾ ಹಾಲಸ್ವಾಮಿ, ಶರಣಯ್ಯ, ಸುರೇಶ್ ಇನ್ನಿತರರು ಇದ್ದರು.- - - -6ಕೆಸಿಎನ್ಜಿ1:
ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.