ಸತ್ಯ ಶುದ್ಧ ದುಡಿಮೆ ನಿಜವಾದ ಕಾಯಕ

| Published : Jun 07 2024, 12:31 AM IST

ಸಾರಾಂಶ

ರಾಷ್ಟ್ರ ಸಮೃದ್ಧವಾಗಿ ಬೆಳೆಯಬೇಕಾದರೆ ಪ್ರಜೆಗಳು ಸಂತೃಪ್ತಿಯಿಂದ ಬದುಕಬೇಕಾದರೆ ಪ್ರತಿಯೊಬ್ಬರು ಕಾಯಕ ಸಮಾನತೆ ದಾಸೋಹ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು

ಗದಗ: ಶ್ರಮ ಸಂಸ್ಕೃತಿ ಎಂದರೆ ಕಾಯಕ ಜೀವಿಗಳ ಸಂಸ್ಕೃತಿ. ಕಾಯಕ, ದಾಸೋಹ ಮತ್ತು ಸಮಾನತೆಯಂತಹ ವಿಶ್ವಮಾನ್ಯ ತತ್ವಗಳನ್ನು ಬಸವಾದಿ ಶರಣರು ವಿಶ್ವಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಅವರು ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2696ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸತ್ಯಶುದ್ಧ ಪ್ರಾಮಾಣಿಕವಾದ ದುಡಿಮೆಯೇ ನಿಜವಾದ ಕಾಯಕ. ಬಸವಣ್ಣನವರು ಶ್ರಮ ಸಂಸ್ಕೃತಿ ಗೌರವಿಸಿದ್ದಾರೆ. ಕಾಯಕದಿಂದ ಬಂದ ಹೆಚ್ಚಿನ ಹಣ ಸಮಾಜಕ್ಕೆ ಅರ್ಪಿತವಾಗಬೇಕು. ರಾಷ್ಟ್ರ ಸಮೃದ್ಧವಾಗಿ ಬೆಳೆಯಬೇಕಾದರೆ ಪ್ರಜೆಗಳು ಸಂತೃಪ್ತಿಯಿಂದ ಬದುಕಬೇಕಾದರೆ ಪ್ರತಿಯೊಬ್ಬರು ಕಾಯಕ ಸಮಾನತೆ ದಾಸೋಹ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶ್ರಮ ಸಂಸ್ಕೃತಿ ಕುರಿತು ಎಚ್.ಕೆ.ವಿವೇಕಾನಂದ ಉಪನ್ಯಾಸ ನೀಡಿ, ಜಗತ್ತಿನ ಎಲ್ಲ ಚಿಂತನೆ ಸಾಮಾನ್ಯವಾಗಿ ಭಕ್ತಿಯಿಂದ, ಭಯದಿಂದ, ಅನುಭವಗಳಿಂದ, ಅಧ್ಯಯನದಿಂದ ತುಂಬಿರುತ್ತವೆ. ಮಣ್ಣಿಗಿಂತ ಬೆವರಿಗಿಂತ ಪ್ರಕೃತಿಗಿಂತ ಅನುಭವದ ಅನುಭಾವದ ಚಿಂತನೆಗಳು ಯಾವುದಾದರೂ ಆಗಿದ್ದರೆ ವಚನಸಾಹಿತ್ಯದ ಬಸವತತ್ವಗಳು. ಬಸವಾದಿ ಶಿವಶರಣರು ಶ್ರಮಸಂಸ್ಕೃತಿ ಬೆಳೆಸಿದರು. ಪ್ರಸ್ತುತ ಶ್ರಮಸಂಸ್ಕೃತಿ ಮಾಯವಾಗಿ ವಿರಾಮ ಸಂಸ್ಕೃತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಹಿತಿ ಪ್ರೊ.ಬಿ.ಆರ್.ಪೋಲಿಸ್‌ಪಾಟೀಲ ಮಾತನಾಡಿದರು. ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರ್‍ಯಾಂಕ್‌ ಪಡೆದ ನಿಖಿತಾ ರೇವಣಕುಂದಿ ಅವರನ್ನು ಸನ್ಮಾನಿಸಲಾಯಿತು. ಪೂಜಾ ಬೇವೂರ ತಂಡದವರು ಜನಪದ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಸೌಮ್ಯ ದೇವರಡ್ಡಿ, ವಚನ ಚಿಂತನೆಯನ್ನು ಶ್ರವಣಾ ವೀರಣ್ಣ ದಿಂಡೂರ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆ ವಹಿಸಿಕೊಂಡಿದ್ದ ಶಾಂತಮ್ಮ ಭೀಮಪ್ಪ ಕೋನ್ನವರ ಹಾಗೂ ಪರಿವಾರ ಅವರನ್ನು ಪೂಜ್ಯರು ಸನ್ಮಾನಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.