ಎಂಬಿಎ ಪದವೀಧರೆಯಾಗಿರುವ ನಾನು ಒಂದು ವರ್ಷದಲ್ಲಿ ಪಾಲಿಕೆಯನ್ನು ಆತ್ಮನಿರ್ಭರವನ್ನಾಗಿಸಲು ಪ್ರಯತ್ನಿಸಿದ್ದೇನೆ. ಅದರಲ್ಲಿ ಯಶಸ್ವಿ ಕೂಡ ಆಗಿದ್ದೇನೆ. ನಾನು ಮಾಡಿದ ಕೆಲಸಗಳು ನನಗೆ ತೃಪ್ತಿ ತಂದಿವೆ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಹುಬ್ಬಳ್ಳಿ: ಮಹಾನಗರ ಪಾಲಿಕೆಯ 24ನೆಯ ಮೇಯರ್‌ ಆಗಿ ವರ್ಷ ಪೂರೈಸಿದ ಧಾರವಾಡದ ಜ್ಯೋತಿ ಪಾಟೀಲ, ಗುರುವಾರ ನಡೆದ ತಮ್ಮ ಕೊನೆಯ ಸಾಮಾನ್ಯ ಸಭೆಯಲ್ಲಿ ವಿದಾಯ ಭಾಷಣ ಮಾಡಿದರು. ಎಂಬಿಎ ಪದವೀಧರೆಯಾಗಿರುವ ನಾನು ಒಂದು ವರ್ಷದಲ್ಲಿ ಪಾಲಿಕೆಯನ್ನು ಆತ್ಮನಿರ್ಭರವನ್ನಾಗಿಸಲು ಪ್ರಯತ್ನಿಸಿದ್ದೇನೆ. ಅದರಲ್ಲಿ ಯಶಸ್ವಿ ಕೂಡ ಆಗಿದ್ದೇನೆ. ನಾನು ಮಾಡಿದ ಕೆಲಸಗಳು ನನಗೆ ತೃಪ್ತಿ ತಂದಿವೆ ಎಂದು ನುಡಿದರು.

ಬಸವಣ್ಣವರ ವಚನದೊಂದಿಗೆ ತಮ್ಮ ವಿದಾಯ ಭಾಷಣ ಪ್ರಾರಂಭಿಸಿದ ಜ್ಯೋತಿ ಅವರು, ಕೊನೆಗೆ ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ! ಎಂದು ಬಸವಣ್ಣನ ವಚನದೊಂದಿಗೆ ಮುಕ್ತಾಯಗೊಳಿಸುವ ಮೂಲಕ ಗಮನ ಸೆಳೆದರು.

ತಮ್ಮ ಭಾಷಣದಲ್ಲಿ ಒಂದು ವರ್ಷದಲ್ಲಿ ಏನೆಲ್ಲ ಕೆಲಸ ಮಾಡಿದ್ದೇನೆ ಎಂದು ಸವಿಸ್ತಾರವಾಗಿ ವಿವರಿಸಿದ ಅವರು, ಟ್ಯಾಕ್ಸ್‌ ಸಂಗ್ರಹ, ಕುಟುಂಬ ವಿಮೆ, ಪೌರಕಾರ್ಮಿಕರ ನೇಮಕ, ಬೆಳಕು ಯೋಜನೆಯಡಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ, ಇಂದೋರ್‌ ಪ್ರವಾಸ ಬಗ್ಗೆಯೆಲ್ಲ ಪ್ರಸ್ತಾಪಿಸಿದರು.

ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಮತ್ತು ಹೊಸ ಆರ್ಥಿಕ ಸೃಷ್ಟಿಗೆ ಮಹತ್ವ ನೀಡಿದ್ದು ಖುಷಿ ಇದೆ. ಕಸ ಕಂಡಲ್ಲಿ ಪೋಟೋ ಕಳಿಸಿ ವಿನೂತನ ಕಾರ್ಯಕ್ರಮ ತೃಪ್ತಿ ತಂದಿದೆ ಎಂದರು. ತಮಗೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು. ಅಲ್ಲದೇ, ಮೇಯರ್‌ ಆಗುವ ಅವಕಾಶ ಕಲ್ಪಿಸಿದ ಪಕ್ಷದ ಮುಖಂಡರಿಗೆ ಧನ್ಯವಾದ ತಿಳಿಸಿದರು.

ಬಳಿಕ ಮೇಯರ್‌ ಕಾರ್ಯವೈಖರಿಗೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತಪಡಿಸಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದು ವಿಶೇಷ.