ಸತೀಶ ಕುಲಕರ್ಣಿ ಬದುಕು, ಬರಹ ನವ ಪೀಳಿಗೆಗೆ ಪ್ರೇರಣಾದಾಯಕ

| Published : Nov 20 2023, 12:45 AM IST

ಸಾರಾಂಶ

ಸಾಹಿತಿ ಸತೀಶ ಕುಲಕರ್ಣಿ ಅವರ ಬದುಕು, ಬರಹ ಮತ್ತು ಸಮಾಜದ ಬದಲಾವಣೆಗೆ ನಡೆದ ಹೋರಾಟಗಳು ನವ ಪೀಳಿಗೆಗೆ ಪ್ರೇರಣಾದಾಯಕ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಸಾಹಿತಿ ಸತೀಶ ಕುಲಕರ್ಣಿ ಅವರ ಬದುಕು, ಬರಹ ಮತ್ತು ಸಮಾಜದ ಬದಲಾವಣೆಗೆ ನಡೆದ ಹೋರಾಟಗಳು ನವ ಪೀಳಿಗೆಗೆ ಪ್ರೇರಣಾದಾಯಕ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.

ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿನ ಅವರ ಐವತ್ತು ವರ್ಷಗಳ ನಿರಂತರ ಸೇವೆ, ಶ್ರಮದಲ್ಲಿ ಅನೇಕ ಸಾಮಾಜಿಕ ಚಿಂತನೆಗಳಿಗೆ ಮಾನವೀಯ ಮೌಲ್ಯಗಳಿಗೆ ಒತ್ತು ಕೊಟ್ಟು ಹೋರಾಟಕ್ಕಿಳಿದವರು. ಅವರು ಅನುಭವಿಸಿದ ನೋವು-ನಲಿವುಗಳಿಗೆ ಸಾಹಿತ್ಯದಲ್ಲಿ ಉತ್ತರ ಕಂಡುಕೊಂಡರು. ತಮ್ಮ ಗಟ್ಟಿ ನಿಲುವಿನ ಸಾಮಾಜಿಕ ಹೋರಾಟ ಮತ್ತು ಚಿಂತನೆಗಳಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುವುದರ ಮೂಲಕ ಸೂಕ್ತ ಗೌರವ ನೀಡಿದೆ. ಸಾಹಿತ್ಯ ಕ್ಷೇತ್ರ ಮತ್ತು ಸಮಾಜದಲ್ಲಿ ಸತೀಶ ಅರ್ಥಗರ್ಭಿತ ಮತ್ತು ಗೌರವಯುತ ಸ್ಥಾನ ಪಡೆದಿದ್ದಾರೆ. ಅವರನ್ನು ಗೌರವಿಸುವ ಮೂಲಕ ಈ ಸಂಸ್ಥೆ ಉತ್ತಮ ಕಾರ್ಯ ಮಾಡಿದೆ. ಸಾಹಿತ್ಯ ಪರಿಷತ್ತು ಕೂಡ ಇಂತಹ ಸಾಹಿತ್ಯಿಕ ಮತ್ತು ಮೌಲ್ಯಯುತ ಚಟುವಟಿಕೆಗಳಿಗೆ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಪ್ರಾಧ್ಯಾಪಕಿ ಪುಷ್ಪಾವತಿ ಶಲವಡಿಮಠ ಮಾತನಾಡಿ, ಸತೀಶ ಅವರು ವೈಯಕ್ತಿಕ ಬದುಕಿನಲ್ಲಿ ಪ್ರತೀ ಸಾರಿ ನೋವು ಉಂಡಾಗ ಅದರ ಪ್ರತಿಕ್ರಿಯೆಯನ್ನು ಕವಿತೆ, ಲೇಖನ, ನಾಟಕ ವಿಮರ್ಶೆ, ನಟನೆ, ನಿರ್ದೇಶನದತ್ತ ತೆರಳಿ ದಾಖಲಿಸುತ್ತಾರೆ. ಸಮಾಜದ ಓರೆ ಕೋರೆಗಳನ್ನು ತಿದ್ದಲು ರೂಪಕಗಳು, ಬೀದಿ ನಾಟಕಗಳು ಚಲನಚಿತ್ರಗಳ ಮೂಲಕ ಪ್ರತಿಕ್ರಿಯಿಸಿದ್ದು ವಿಶೇಷ. ಎದೆಯಲ್ಲಿ ಬೆಂಕಿ ಇಟ್ಟುಕೊಂಡರೂ ಅದರ ಬಿಸಿಯನ್ನು ತಾವೇ ನುಂಗಿ ಅದರಿಂದ ಬರುವ ಬೆಳಕನ್ನು ಮಾತ್ರ ಇತರರಿಗೆ ನೀಡುತ್ತಾರೆ. ಅಪಾರ ತಾಳ್ಮೆ, ಸಹನೆ ಹೊಂದಿರುವ ಅವರು ಎಲ್ಲವನ್ನು, ಎಲ್ಲರನ್ನೂ ನಗುನಗುತ್ತಲೇ ಎದುರುಗೊಳ್ಳುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಕಳೆದುಹೋಗದೇ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬದುಕನ್ನ ಅರ್ಥಪೂರ್ಣಗೊಳಿಸಿಕೊಂಡಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಸತೀಶ ಕುಲಕರ್ಣಿ, ಸಾಂಸ್ಕೃತಿಕ ಮನಸ್ಸಿನ ಪ್ರತಿಯೊಬ್ಬರಿಗೂ ಸಹನೆ ಇರಬೇಕು ಸಾಹಿತ್ಯದಲ್ಲಿ ಸತ್ವ ಇರಬೇಕು. ಎಂತಹ ಸಂದರ್ಭದಲ್ಲಿಯೂ ನಮ್ಮ ಗಟ್ಟಿ ನಿಲುವು ಮತ್ತು ಬದ್ಧತೆಯನ್ನು ಬಿಟ್ಟುಕೊಡಬಾರದು. ನಿರಂತರ ಅಧ್ಯಯನ, ಸಾಮಾಜಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಬೇಕು. ಜಾತಿ, ಧರ್ಮಗಳ ಸೀಮಿತ ಚೌಕಟ್ಟುಗಳನ್ನು ಮೀರಿ ನಿಂತಾಗ ಮಾತ್ರ ಒಬ್ಬ ನೈಜ ಮನುಷ್ಯ, ಅವನ ಭಾವನೆ, ಮತ್ತು ಕನಸುಗಳು ಕಾಣುತ್ತವೆ. ಅವುಗಳಲ್ಲಿ ಬಿರುಕು ಬಂದಾಗ ನಾವು ಮತ್ತೆ ಮತ್ತೆ ಈ ರೀತಿ ಸೇರಿಕೊಂಡು ಚಿಂತನ ಮಂಥನ ಮಾಡುವ ಮೂಲಕ ಅವುಗಳನ್ನು ಜೋಡಿಸಿ ಕಟ್ಟಬೇಕು. ಕಟ್ಟುವ ಕೆಲಸ ಕಷ್ಟದಾಯಕ. ಆದರೂ ಕಟ್ಟುವ ಕೆಲಸವನ್ನು ಮಾಡುತ್ತಲೇ ಸಾಗಬೇಕು ಎಂದರು.

ಕರ್ಜಗಿಯ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ಪ್ರಾಚಾರ್ಯ ಸೋಮನಾಥ ಡಿ., ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿದರು. ಚಿತ್ರ ಕಲಾವಿದ ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೃಷ್ಣಪ್ಪ ಕೆ., ಸಿ.ಎಸ್. ಮರಳಿಹಳ್ಳಿ, ಚಂದ್ರಶೇಖರ ಮಾಳಗಿ, ಎಸ್.ಆರ್. ಹಿರೇಮಠ, ಮಂಜುನಾಥ ಹತ್ತಿಯವರ, ವಿಶ್ವನಾಥ ಬಿ.ಎನ್., ಪ್ರಶಾಂತ ಬಾನಣ್ಣನವರ, ಈಶ್ವರಗೌಡ ಪಾಟೀಲ, ಮುತ್ತು ಗುತ್ತಲ, ನಾಗರಾಜ ಬಣಕಾರ, ನೇತ್ರಾವತಿ, ರೇಣುಕಾ ಗುಡಿಮನಿ, ದಾನೇಶ್ವರಿ ಶಿಗ್ಗಾವಿ, ಭೂಮಿಕಾ ರಜಪೂತ ಇತರರು ಇದ್ದರು.