ಸಾರಾಂಶ
ಗೋಕರ್ಣ: ಸಾತ್ವಿಕ ಸುಖ ಮೊದಲು ವಿಷದಂತಿದ್ದು, ಬಳಿಕ ಅಮೃತದಂತಾಗುತ್ತದೆ. ಬದುಕಿನಲ್ಲಿ ಕಷ್ಟಪಟ್ಟು ಪಡೆಯುವ ಸುಖ ಶಾಶ್ವತ. ಇದಕ್ಕೆ ವಿರುದ್ಧವಾದ ರಾಜಸ ಸುಖ ಮೊದಲು ಸವಿ ಅನುಭವ ನೀಡಿದರೂ, ಕೊನೆಗೆ ದುಃಖಾಂತ್ಯವಾಗುತ್ತದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 23ನೇ ದಿನವಾದ ಸೋಮವಾರ ಜೀವಯಾನ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿ, ನರಕವನ್ನು ತಾನು ಆಹ್ವಾನಿಸಿಕೊಂಡು ಬೇರೆಯವರಿಗೆ ಸ್ವರ್ಗ ನೀಡುವವರು ನಿಜವಾದ ಧರ್ಮಾತ್ಮರು ಎನ್ನುವುದನ್ನು ಯಮಧರ್ಮರಾಯ ನಡೆಸಿದ ಪರೀಕ್ಷೆಯಿಂದ ದೃಢಪಡುತ್ತದೆ. ನಾವೂ ಧರ್ಮರಾಜನಂತೆ ಇರಲು ಪ್ರಯತ್ನಿಸಿದರೆ ನಮ್ಮ ಸುತ್ತಮುತ್ತಲ ಪರಿಸರವೇ ಸ್ವರ್ಗವಾಗುತ್ತದೆ ಎಂದರು.ದೊಡ್ಡ ಧರ್ಮಕ್ಕಾಗಿ, ಚಿಕ್ಕ ಅಧರ್ಮವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸ್ವತಃ ಶ್ರೀಕೃಷ್ಣ ಹೇಳಿದ್ದಾರೆ. ಧರ್ಮ- ಅಧರ್ಮದ ಯುದ್ಧದಲ್ಲಿ ಧರ್ಮ ಗೆಲ್ಲಬೇಕಾದರೆ ಚಿಕ್ಕ ಸುಳ್ಳು ಹೇಳಬೇಕಾಗುತ್ತದೆ ಎಂದು ಕೃಷ್ಣ, ಧರ್ಮರಾಯನಿಗೆ ಹೇಳುತ್ತಾನೆ. ಕೃಷ್ಣ ಹೇಳಿದ ಕಾರಣಕ್ಕೆ ಧರ್ಮರಾಜ ಒಲ್ಲದ ಮಾತಿನಿಂದ ಒಪ್ಪಿಕೊಂಡು ಅಶ್ವತ್ಥಾಮ ಹತಃಕುಂಜರ ಎಂದು ಹೇಳುತ್ತಾನೆ. ಈ ಅರ್ಧಸತ್ಯವನ್ನು ಹೇಳಿದ ಕಾರಣಕ್ಕೆ ಧರ್ಮರಾಜನಿಗೂ ಒಮ್ಮೆ ನರಕದರ್ಶನವಾಯಿತು ಎಂದರು.ಎಲ್ಲ ರಾಜರೂ ಒಮ್ಮೆ ನರಕದರ್ಶನ ಮಾಡಬೇಕಾಗುತ್ತದೆ. ಏಕೆಂದರೆ ಅವರ ಸ್ಥಾನ ಪಾಪ ಮಾಡಿಸುತ್ತದೆ. ಅಧಿಕಾರದ ಪಕ್ಕ ನರಕವೂ ಇರುತ್ತದೆ ಎನ್ನುವುದನ್ನು ಮಹಾಭಾರತ ಬೋಧಿಸುತ್ತದೆ. ಎಷ್ಟೋ ಪ್ರಾಯಶ್ಚಿತ, ಪರಿಹಾರಗಳನ್ನು ಮಾಡಿದರೂ ಚೂರು ಪಾರು ಉಳಿದುಕೊಂಡಿರುತ್ತದೆ ಎಂದರು.ಜೀವನ ಎನ್ನುವುದು ಹುಲ್ಲಿನ ತುದಿಗಂಟಿನ ನೀರ ಹನಿಯಂತೆ. ಸದಾ ನಮ್ಮ ಜತೆಗಿರುವ ಸ್ನೇಹಿತ ಧರ್ಮಮಾತ್ರ. ಮುಂದಿನ ಯೋಚನೆ ಇದ್ದರೆ ಧರ್ಮಸಂಗ್ರಹ ಮಾಡು ಎಂಬ ಸಂದೇಶವನ್ನು ಧರ್ಮರಾಯ ನೀಡುತ್ತಾನೆ. ಸಾವು ಕೂಡಾ ಮುಟ್ಟದಂತೆ ಬದುಕಬೇಕು ಎನ್ನುವುದನ್ನು ಭೂಮಿಗೆ ಬಂದ ಯಮಧರ್ಮರಾಯ ತೋರಿಸಿದ್ದಾನೆ ಎಂದರು.ಬದುಕನ್ನು ಧರ್ಮ ಆಳಬೇಕು ಎನ್ನುವುದು ಪಾಂಡವರು ಲೋಕಕ್ಕೆ ನೀಡಿದ ಪಾಠ. ರೂಪ, ಜ್ಞಾನ, ಬಲ, ಕೌಶಲಗಳ ಮದ ನಮ್ಮನ್ನು ಸ್ವರ್ಗಕ್ಕೆ ಒಯ್ಯಲಾರವು. ಧರ್ಮವೊಂದೇ ಸ್ವರ್ಗಕ್ಕೆ ದಾರಿ. ನಡೆ- ನುಡಿ ಒಂದಾಗಿರಬೇಕು; ಪಕ್ಷಪಾತ ಮತ್ತು ಅತಿಸೇವನೆ ಸೃಷ್ಟಿಯ ದುರುಪಯೋಗ ಎನ್ನುವ ಸಂದೇಶ ಪಾಂಡವರ ಪ್ರಕರಣದಿಂದ ತಿಳಿದುಬರುತ್ತದೆ. ಎಲ್ಲರೂ ಸ್ವರ್ಗಾರೋಹಣದ ದಾರಿಮಧ್ಯದಲ್ಲೇ ದೇಹತ್ಯಾಗ ಮಾಡಿದರೆ, ಸಜೀವನಾಗಿ ಧರ್ಮರಾಯ ಮಾತ್ರ ಸ್ವರ್ಗಸೇರುತ್ತಾನೆ. ಜತೆಗೆ ನಾಯಿ ಮಾತ್ರ ಜತೆಗೆ ಉಳಿದಿತ್ತು. ಇದು ಧರ್ಮಕ್ಕೆ ಇರುವ ಸ್ಥಾನ ಎಂದು ವಿಶ್ಲೇಷಿಸಿದರು.
ಖಾರ್ವಿ ಮತ್ತು ದೇಶಭಂಡಾರಿ ಸಮಾಜದಿಂದ ಸೋಮವಾರ ಸ್ವರ್ಣಪಾದುಕಾಪೂಜೆ ಸೇವೆ ನೆರವೇರಿತು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಮಾತೃಪ್ರಧಾನರಾದ ವೀಣಾ ಜಿ. ಪುಳು, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಮೋಹನ ಭಟ್ ಹರಿಹರ, ಸುಧಾಕರ ಬಡಗಣಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಮತ್ತಿತರರು ಉಪಸ್ಥಿತರಿದ್ದರು. ಗಣಪತಿ ಗುಂಜಗೋಡ್ ನಿರೂಪಿಸಿದರು.