ಸಾರಾಂಶ
ಕೆಲಸಕ್ಕೆ ತಡವಾಗಿ ಹೋಗಿದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿದಲ್ಲದೆ ಥಳಿಸಿದ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ಚಕಿತ್ಸೆಗಾಗಿ ದಾಖಲಾಗಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸ್ ಇಲಾಖೆಯು ಇದುವರೆಗೂ ಯಾವ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ಹೊಲೆಯ ಮಾದಿಗರ ಸಂಘದ ರಾಜ್ಯಾಧ್ಯಕ್ಷ ನಿಡುಗರಹಳ್ಳಿ ಸಿದ್ದಪ್ಪ ದೂರಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ನ್ಯಾಯ ಸಿಗುವವರೆಗೆ ಉಪವಾಸ
ಕನ್ನಡಪ್ರಭ ವಾರ್ತೆ ಹಾಸನಕೆಲಸಕ್ಕೆ ತಡವಾಗಿ ಹೋಗಿದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿದಲ್ಲದೆ ಥಳಿಸಿದ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ಚಕಿತ್ಸೆಗಾಗಿ ದಾಖಲಾಗಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸ್ ಇಲಾಖೆಯು ಇದುವರೆಗೂ ಯಾವ ಕ್ರಮ ಕೈಗೊಂಡಿಲ್ಲ. ನೊಂದಿರುವ ಕುಟುಂಬಕ್ಕೆ ನ್ಯಾಯ ಕೊಡಿಸದಿದ್ದರೆ ನ್ಯಾಯ ಸಿಗುವವರೆಗೂ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಹೊಲೆಯ ಮಾದಿಗರ ಸಂಘದ ರಾಜ್ಯಾಧ್ಯಕ್ಷ ನಿಡುಗರಹಳ್ಳಿ ಸಿದ್ದಪ್ಪ ಎಚ್ಚರಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ಹಾಸನ ಕಸಬಾ ಹೋಬಳಿ, ಜೋಡಿತಟ್ಟೆಕೆರೆ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ (ಆದಿ ಕರ್ನಾಟಕ) ರಂಗಯ್ಯನ ಮಗ 40 ವರ್ಷದ ಕುಮಾರಸ್ವಾಮಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಇವರು ಜೋಡಿತಟ್ಟೆಕೆರೆ ಗ್ರಾಮದ ದೇವರಾಜೇಗೌಡ ಎಂಬುವವರ ಹತ್ತಿರ ಸುಮಾರು ೫-೬ ವರ್ಷಗಳವರೆಗೆ ಬೆಳಗಿನ ಜಾವ ೪ ಗಂಟೆಯಿಂದ ಸಂಜೆ ೮ ಗಂಟೆಯವರೆಗೆ ದನಗಳ ವ್ಯಾಪಾರಕ್ಕಾಗಿ ಹಳ್ಳಿಗಳಿಗೆ ಹೋಗುತ್ತಿದ್ದರು. ಇವರಿಗೆ ದಿನಕ್ಕೆ ೫೦೦ ರು. ದಿನಗೂಲಿಯನ್ನು ವಾರಕ್ಕೊಮ್ಮೆ ಕೊಡುತ್ತಿದ್ದರು. ಜನವರಿ ೨೨ ರಂದು ಬೆಳಿಗ್ಗೆ ೮ ಗಂಟೆಗೆ ತಡವಾಗಿ ಕೆಲಸಕ್ಕೆ ಹೋಗಿದ್ದಕ್ಕೆ ದೇವರಾಜೇಗೌಡ ಕುಮಾರಸ್ವಾಮಿ ಅವರನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ’ ಎಂದು ದೂರಿದರು.ಪೆಟ್ಟು ತಿಂದ ಮೇಲೆ ಹಿಮ್ಸ್ ಆಸ್ಪತ್ರೆಗೆ ಹೊರ ರೋಗಿಯಾಗಿ ಕುಮಾರಸ್ವಾಮಿ ದಾಖಲಾಗಿದ್ದು, ಅದೇ ದಿನ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ 9 ದಿನಗಳ ನಂತರ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಅದೇ ದಿನ ದೇವರಾಜೇಗೌಡನ ಅತ್ತೆ ಜಯಮ್ಮನಿಂದ ಹೇಳಿಕೆ ಕೊಡಿಸಿ ತಮ್ಮ ಬಳಿ ಇದ್ದ ಕರಿಮಣಿ ತಾಳಿ ಚೈನನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಹೊಲೆಯ ಮಾದಿಗರ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಟಿ.ರಂಗಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮು ಗೊರೂರು, ನೊಂದವರಾದ ಗ್ರಾಮದ ಕುಮಾರಸ್ವಾಮಿ, ಮಂಜುಳ, ನೇತ್ರಾವತಿ ಇತರರು ಇದ್ದರು.