ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕರಲ್ಲಿ ಜನಪದ ಸೊಗಡು, ಗ್ರಾಮೀಣ ಸೊಗಡು ಕಣ್ಮರೆಯಾಗುವ ಜತೆಗೆ ಸ್ಪರ್ಧಾತ್ಮಕ ಜಗತ್ತಿನತ್ತ ಮುಖ ಮಾಡುತ್ತಿರುವುದು ಆತಂಕಕಾರಿ ವಿಚಾರ. ಪೋಷಕರು ಹಾಗೂ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಬಗ್ಗೆ ಹೆಚ್ಚು ಅಧ್ಯಯನ ನಡೆಸಿ ಬೇರೂರಿರುವ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ನಾಡಿನ ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಜಾನಪದ ಸೊಗಡನ್ನು ಉಳಿಸಲು ಶ್ರಮಿಸುತ್ತಿರುವ ಆರ್.ಕೆ.ವಿದ್ಯಾಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಎಂ.ಶ್ರೀನಿವಾಸ್ ಅಭಿಪ್ರಾಯಪಟ್ಟರು.ತಾಲೂಕಿನ ಕೆ.ಹೊನ್ನಲಗೆರೆ ಆರ್.ಕೆ.ವಿದ್ಯಾಸಂಸ್ಥೆಯ ಆವರಣದಲ್ಲಿ ಕರ್ನಾಟಕ ಸಂಘ ಮತ್ತು ಆರ್.ಕೆ.ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಹೊನ್ನುಡಿ ಜಗಲಿಯಿಂದ ಜಗತ್ತಿನೆಡೆಗೆ ಬಿ.ರಾಮಕೃಷ್ಣ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕರಲ್ಲಿ ಜನಪದ ಸೊಗಡು, ಗ್ರಾಮೀಣ ಸೊಗಡು ಕಣ್ಮರೆಯಾಗುವ ಜತೆಗೆ ಸ್ಪರ್ಧಾತ್ಮಕ ಜಗತ್ತಿನತ್ತ ಮುಖ ಮಾಡುತ್ತಿರುವುದು ಆತಂಕಕಾರಿ ವಿಚಾರ. ಪೋಷಕರು ಹಾಗೂ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಬಗ್ಗೆ ಹೆಚ್ಚು ಅಧ್ಯಯನ ನಡೆಸಿ ಬೇರೂರಿರುವ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಬೇಕು ಎಂದರು.ಅರಕಲಗೂಡು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಸಾಧಾರಣ ಸಾಧನೆ ಮಾಡುವ ಛಲವಿದೆ. ವ್ಯಾಸಂಗದ ಜತೆಯಲ್ಲಿಯೇ ಗುರಿ, ಸಾಧನೆ, ಏಕಾಗ್ರತೆ ಮೈಗೂಡಿಸಿಕೊಂಡಲ್ಲಿ ತಾವು ಕಂಡ ಕನಸನ್ನು ನನಸು ಮಾಡಬಹುದು ಎಂದರು.
ಆಧುನಿಕ ಪ್ರಪಂಚಕ್ಕೆ ಮಾರು ಹೋಗದೆ ದೇಶೀಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕು. ಮಾನವ ದುರಾಸೆಯಿಂದಾಗಿ ಪರಿಸರ ಮತ್ತು ವಾತಾವರಣ ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಇದಕ್ಕೆ ಜಾಗತಿಕ ತಾಪಮಾನ ಬೆಟ್ಟ, ಗುಡ್ಡ, ಕೆರೆ, ಕಟ್ಟೆಗಳನ್ನು ನಾಶ ಪರಿಣಾಮ ಮುಂದೊಂದು ದಿನ ದೊಡ್ಡ ಅನಾಹುತವನ್ನೇ ಎದುರಿಸಬೇಕಾದ ಸ್ಥಿತಿ ಕಾಣಸಿಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಪ್ರಶಸ್ತಿ ಸ್ವೀಕರಿಸಿದ ಜನಪದ ವಿದ್ವಾಂಸ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುವ ಜತೆಗೆ ರೈತಾಪಿ ಮಕ್ಕಳ ಬದುಕನ್ನು ರೂಪಿಸಲು ಶ್ರಮಿಸುತ್ತಿರುವುದು ಶ್ರೇಷ್ಠ ಸಾಧನೆ ಎಂದು ಬಣ್ಣಿಸಿದರು.
ಜನಪದ ವಿದ್ವಾಂಸ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಹಾಗೂ ಕೊತ್ತತ್ತಿ ವಿದ್ಯಾಗಣಪತಿ ಶಿಕ್ಷಣ ಸಂಸ್ಥೆ ಪರ ಅಧ್ಯಕ್ಷ ಜವರೇಗೌಡರಿಗೆ ಬಿ.ರಾಮಕೃಷ್ಣ ಪ್ರಶಸ್ತಿ ಹಾಗೂ 50 ಸಾವಿರ ರು. ನಗದನ್ನು ಪ್ರದಾನ ಮಾಡಿದರು.ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಸನ್ಮಾನಿತರನ್ನು ಕುರಿತು ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ, ಚಂದ್ರಕಲಾ.ಬಿ.ರಾಮಕೃಷ್ಣ, ಆರ್.ಕೆ.ವಿದ್ಯಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ಬಿಇಒ ಎಸ್.ಬಿ.ಧನಂಜಯ, ಟ್ರಸ್ಟಿ ಕೀರ್ತನ, ಆಡಳಿತಾಧಿಕಾರಿ ಎಂ.ಎಸ್.ಮರಿಸ್ವಾಮಿಗೌಡ, ಪ್ರಾಂಶುಪಾಲ ಡಾ.ಎಂ.ಸಿ.ಸತೀಶ್‌ಬಾಬು, ಉಪಪ್ರಾಂಶುಪಾಲ ಚಂದ್ರು, ಮುಖ್ಯಶಿಕ್ಷಕರಾದ ಎಂ.ಎಂ.ರಮೇಶ್, ಅನುಸೂಯ, ಪ್ರವೀಣ್, ಬಿಆರ್‌ಒ ಅನಿರೀಕ್ಷಿತ ಇತರರಿದ್ದರು.