ಸಾರಾಂಶ
ರಾಣಿಬೆನ್ನೂರು ತಾಲೂಕಿನ ಮಾಗೋಡ ಗ್ರಾಮದ 163 ಎಕರೆ ಗೋಮಾಳ ಜಮೀನನ್ನು ಯಥಾವತ್ತಾಗಿ ಉಳಿಸಬೇಕು ಎಂದು ಆಗ್ರಹಿಸಿ ಮಾಗೋಡ ಗ್ರಾಮದ ಗೋಮಾಳ ಜಮೀನು ಉಳಿಸಿ ಹೋರಾಟ ಸಮಿತಿ ಸದಸ್ಯರು ಸೋಮವಾರ ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ತಾಲೂಕಿನ ಮಾಗೋಡ ಗ್ರಾಮದ 163 ಎಕರೆ ಗೋಮಾಳ ಜಮೀನನ್ನು ಯಥಾವತ್ತಾಗಿ ಉಳಿಸಬೇಕು ಎಂದು ಆಗ್ರಹಿಸಿ ಮಾಗೋಡ ಗ್ರಾಮದ ಗೋಮಾಳ ಜಮೀನು ಉಳಿಸಿ ಹೋರಾಟ ಸಮಿತಿ ಸದಸ್ಯರು ಸೋಮವಾರ ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಮಾಗೋಡ ಗ್ರಾಮದ ಗೋಮಾಳ ಜಮೀನನ್ನು ತಾಲೂಕು ಆಡಳಿತ ಕೈಗಾರಿಕೆ ಪ್ರದೇಶ ಎಂದು ಉತಾರದಲ್ಲಿ ತಿದ್ದುಪಡಿ ಮಾಡಿತ್ತು. ಈ ಕುರಿತು ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ದರಿಂದ ನ್ಯಾಯಾಲಯ ಗೋಮಾಳ ಜಮೀನನ್ನು ಜಾನುವಾರುಗಳಿಗೆ ಮೀಸಲಿಡಬೇಕು ಎಂದು ಆದೇಶಿಸಿದೆ. ಉತಾರ ತಿದ್ದುಪಡಿಗೆ ಸೂಚಿಸಿದೆ. ಆದರೆ, ತಾಲೂಕು ಆಡಳಿತ ಮಾತ್ರ ಈ ವರೆಗೂ ಉತಾರದಲ್ಲಿ ಕೈಗಾರಿಕೆ ಪ್ರದೇಶ ಎಂದು ನಮೂದು ಮಾಡಿಟ್ಟಿದೆ. ಆದ್ದರಿಂದ ಮುಂದಿನ ಎರಡು ವಾರದೊಳಗೆ ತಾಲೂಕು ಆಡಳಿತ ಉತಾರ ತಿದ್ದುಪಡಿ ಮಾಡಿ ಗೋಮಾಳ ಜಮೀನನನ್ನು ಯಥಾವತ್ತಾಗಿ ಮುಂದುವರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಮಾಗೋಡ ಬಳಿಯ ಜಮೀನು ಬದಲು ನಗರದ ಹೊರವಲಯದ ಓಂ ಪಬ್ಲಿಕ್ ಶಾಲೆ ಬಳಿಯಿರುವ ಕೈಗಾರಿಕೆ ಪ್ರದೇಶವೇ ಖಾಲಿಯಿದೆ. ಸೈಟುಗಳ ಸಹ ಖಾಲಿ ಬಿದ್ದಿವೆ. ಅವುಗಳನ್ನು ಮೊದಲು ಬಳಕೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಚನ್ನಬಸಪ್ಪ ಮೂದಿಗೌಡ್ರ, ಉಜ್ಜಪ್ಪ ಕಮದೋಡ, ರಮೇಶ ಮುದುಕಣ್ಣಗೌಡ್ರ, ಬಸಪ್ಪ ಹೊಸಗೌಡ್ರ, ನಾಗಪ್ಪ ಬಸನಗೌಡ್ರ, ರಮೇಶ ಮಾಕನೂರ, ಉಮೇಶ ಹಾದಿಮನಿ, ರಮೇಶ ಮಳಲೇರ, ಮಹೇಶ ಮಲ್ಲಾಪುರ, ಹನುಮಂತಪ್ಪ ಮಜ್ಜಗಿ, ರಾಮಪ್ಪ ಕೆಂಚರೆಡ್ಡಿ, ಮಲ್ಲಿಕಾರ್ಜುನ ಕೊಪ್ಪದ ಮತ್ತಿತರರು ಉಪಸ್ಥಿತರಿದ್ದರು.