ಸವಿತಾ ಸಮಾಜದಲ್ಲಿ ಅತ್ಯಂತ ಕಡುಬಡವರಿದ್ದಾರೆ. ಹೇರ್ ಕಟ್ಟಿಂಗ್ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಇದರಿಂದ ಸಹಜವಾಗಿ ಈ ಸಮಾಜದವರು ಆರ್ಥಿಕವಾಗಿ ಅತಿ ಹಿಂದುಳಿದಿದ್ದಾರೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪರದಾಡುತ್ತಿದ್ದಾರೆ. ಇಂತಹ ಸಮಾಜದಲ್ಲಿ ಹುಟ್ಟಿ ತಮ್ಮ ಶ್ರಮದಿಂದ ಉತ್ತಮ ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಇನ್ನಷ್ಟು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೊನ್ನಾಳಿ ಮೂಲದ, ಬೆಂಗಳೂರಿನಲ್ಲಿ ನೆಲೆಸಿರುವ ರವಿಕುಮಾರ್ ನಾಗಲದಿನ್ನೆ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ರವಿಕುಮಾರ್ ನಾಗಲದಿನ್ನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸವಿತಾ ಸಮಾಜದಲ್ಲಿ ಅತ್ಯಂತ ಕಡುಬಡವರಿದ್ದಾರೆ. ಹೇರ್ ಕಟ್ಟಿಂಗ್ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಇದರಿಂದ ಸಹಜವಾಗಿ ಈ ಸಮಾಜದವರು ಆರ್ಥಿಕವಾಗಿ ಅತಿ ಹಿಂದುಳಿದಿದ್ದಾರೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪರದಾಡುತ್ತಿದ್ದಾರೆ. ಇಂತಹ ಸಮಾಜದಲ್ಲಿ ಹುಟ್ಟಿ ತಮ್ಮ ಶ್ರಮದಿಂದ ಉತ್ತಮ ಅಂಕಗಳನ್ನು ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಇನ್ನಷ್ಟು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೊನ್ನಾಳಿ ಮೂಲದ, ಬೆಂಗಳೂರಿನಲ್ಲಿ ನೆಲೆಸಿರುವ ರವಿಕುಮಾರ್ ನಾಗಲದಿನ್ನೆ ಹೇಳಿದರು.

ಪಟ್ಟಣದ ಬಾಲರಾಜ್ ಘಾಟ್‌ನಲ್ಲಿರುವ ಸವಿತಾ ಸಮಾಜ ಕಾರ್ಯಾಲಯದಲ್ಲಿ ಮಂಗಳವಾರ ಸಮಾಜ ವತಿಯಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಸಮಾಜದ ಟ್ರಸ್ಟ್‌ನಿಂದ ಸಹಾಯ ಮಾಡುವಂಥ ಒಂದು ಸಂಸ್ಥೆ ಹುಟ್ಟುಹಾಕಿದ್ದೇವೆ. ಸಂಸ್ಥೆ ಮೂಲಕ ಸಾಧ್ಯವಾದಷ್ಟು ಅತಿ ಹೆಚ್ಚು ಅಂಕ ಪಡೆದ ಸವಿತಾ ಸಮಾಜದ ಪ್ರತಿಭಾವಂತರಿಗೆ ಸಹಾಯ ಮಾಡಲಾಗುವುದು. ಈ ಟ್ರಸ್ಟ್ ವತಿಯಿಂದ ತೀವ್ರ ಆರೋಗ್ಯ ಸಮಸ್ಯೆ ಇರುವ ಸಮಾಜದವರು, ಸ್ವಂತ ಕಟ್ಟಿಂಗ್ ಸಲೂನ್ ನಡೆಸುವವರು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಉತ್ಸಾಹಿ ಯುವಕರಿಗೆ ಸಹಾಯ ಮಾಡುವ ಉದ್ದೇಶಗಳನ್ನು ಹೊಂದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸವಿತ ಸಮಾಜದ ತಾಲೂಕು ಅಧ್ಯಕ್ಷ ಕೆ. ನಾಗರಾಜ್, ನಗರ ಘಟಕ ಅಧ್ಯಕ್ಷ ಕೆ.ಸಿ.ಗೋವಿಂದರಾಜು, ದಾವಣಗೆರೆ ಜಿಲ್ಲೆಯ ಸವಿತಾ ಕ್ಷೇಮಾಭಿವೃದ್ದಿ ಸಂಘದ ನಿರ್ದೇಶಕರಾದ ವೆಂಕಟಾಚಲಪತಿ, ಕೆ.ಬಾಬು, ಪಿ.ಟಿ. ಸಂಜೀವ, ಪಿ.ಟಿ.ಪ್ರಭಾಕರ್, ನಾಗರಾಜ್, ಎನ್.ಕೆ. ನಾರಾಯಣ ರಾಂಪುರ, ನಿವೃತ್ತ ಶಿಕ್ಷಕರಾದ ಮೋಹನ್, ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ರಾಮಾಂಜನೇಯ ಇತರರು ಇದ್ದರು.

ಕಾರ್ಯಕ್ರಮದಲ್ಲಿ 6 ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಾರಾಯಣ ರಾಂಪುರ ಪ್ರಾರ್ಥನೆ ಸಲ್ಲಿಸಿದರು. ಎಸ್.ಪಿ. ಉಮೇಶ್ ಸ್ವಾಗತಿಸಿದರು.

- - -

-13ಎಚ್.ಎಲ್.ಐ2:

ಸವಿತಾ ಸಮಾಜ ವತಿಯಿಂದ ಮಂಗಳವಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾಜದ ಮುಖಂಡರು ಇದ್ದರು.