ತೊಟ್ಟಿಲನ್ನು ತೂಗುವ ಕೈಗಳು ದೇಶದ ಆಡಳಿತವನ್ನು ತೂಗಬೇಕು, ಎನ್ನುವ ಮಹತ್ವದ ಉದ್ದೇಶವನ್ನು ಹೊಂದಿದ್ದ ಮಾತೆ ಸಾವಿತ್ರಿ ಬಾಫುಲೆ, ಹೆಣ್ಣುಮಕ್ಕಳ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ತತ್ವ ಮತ್ತು ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಡಯಟ್ ಕಾಲೇಜಿನ ಉಪನ್ಯಾಸಕ ರಾಮಚಂದ್ರಪ್ಪ ಹೇಳಿದರು.
ಮೊಳಕಾಲ್ಮೂರು: ತೊಟ್ಟಿಲನ್ನು ತೂಗುವ ಕೈಗಳು ದೇಶದ ಆಡಳಿತವನ್ನು ತೂಗಬೇಕು, ಎನ್ನುವ ಮಹತ್ವದ ಉದ್ದೇಶವನ್ನು ಹೊಂದಿದ್ದ ಮಾತೆ ಸಾವಿತ್ರಿ ಬಾಫುಲೆ, ಹೆಣ್ಣುಮಕ್ಕಳ ಸರ್ವೋತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ತತ್ವ ಮತ್ತು ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಡಯಟ್ ಕಾಲೇಜಿನ ಉಪನ್ಯಾಸಕ ರಾಮಚಂದ್ರಪ್ಪ ಹೇಳಿದರು.ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸಮಾಜ ಪರಿವರ್ತನ ವೇದಿಕೆಯಿಂದ ಆಯೋಜಿಸಿದ್ದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆಗೈದ ಮಹಿಳಾ ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಾತೆ ಸಾವಿತ್ರಿಬಾಯಿ ಪುಲೆ ಆಧುನಿಕ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ. ಅವರು ಹಚ್ಚಿದ ಶಿಕ್ಷಣವೆಂಬ ಜ್ಞಾನದ ಬೆಳಕು ಇಂದು ಕೋಟ್ಯಂತರ ಹೆಣ್ಣುಮಕ್ಕಳ ಬದುಕನ್ನು ಬೆಳಗುತ್ತಿರುವ ದೀಪವಾಗಿದೆ. ಭಾರತದ ಪ್ರತಿ ಹೆಣ್ಣು ಮಕ್ಕಳು ಸಾವಿತ್ರಿಯವರ ತ್ಯಾಗದ ಋಣದಲ್ಲಿ ಬದುಕುತ್ತಿದ್ದಾರೆ. ಮಾನ, ಸನ್ಮಾನ, ಘನತೆ, ಗೌರವಗಳು ಪ್ರತಿ ಹೆಣ್ಣುಮಕ್ಕಳಿಗೆ ಸಿಗಲು ಕಾರಣರಾಗಿದ್ದಾರೆ ಎಂದು ತಿಳಿಸಿದರು.ಹೆಣ್ಣನ್ನು ಕೇವಲ ಅಡುಗೆ ಮನೆಗೆ ಸೀಮಿತ ಮಾಡಿದ್ದ ಕಾಲಘಟ್ಟದಲ್ಲಿ ಅವಮಾನ ಮತ್ತು ಸವಾಲುಗಳನ್ನು ಎದುರಿಸಿ ಶೋಷಿತ ಸಮುದಾಯದ ಮಹಿಳೆಯರನ್ನು ಸಾಕ್ಷರಸ್ಥರನ್ನಾಗಿಸುವ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯಾದರು. ಹೆಣ್ಣಿನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎನ್ನುವುದನ್ನು ಅರಿತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮಹತ್ವ ಕೊಟ್ಟರು ಅವರ ತತ್ವ ಆದರ್ಶ ಸಮಾಜದಲ್ಲಿ ಇಂದಿಗೂ ಮಾದರಿಯಾಗಿವೆ ಎಂದರು. ಸಾಮಾಜಿಕ ಪರಿವರ್ತನಾ ಚಳುವಳಿಯ ಎಸ್.ಪರಮೇಶ್ ಮಾತನಾಡಿ, ಮಾತೆ ಸಾವಿತ್ರಿಬಾ ಪುಲೆಯವರು ಜಾತಿ ವ್ಯವಸ್ಥೆಯ ನಡುವೆ ದೇಶದಲ್ಲಿ ಹೆಣ್ಣುಮಕ್ಕಳಿಗಾಗಿ ಪ್ರತ್ಯೇಕ ಶಾಲೆ ತೆರೆದು ಶಿಕ್ಷಣದ ಕ್ರಾಂತಿ ಮಾಡಿದರು. ಬ್ರಿಟಿಷ್ ಹಂಟರ್ ಆಯೋಗದ ಮುಂದೆ ಹೆಣ್ಣುಮಕ್ಕಳಿಗೆ ಪ್ರತ್ಯೇಕ ವಸತಿ ಶಾಲೆಗಳು ಸ್ಥಾಪಿಸಬೇಕು. ವಿದ್ಯಾರ್ಥಿ ವೇತನ ನೀಡಬೇಕು. ಬಾಲ್ಯವಿವಾಹ ನಿಷೇಧಿಸಬೇಕು. ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು. ಶಿಕ್ಷಣವನ್ನು ಸಾರ್ವತ್ರೀಕರಣ ಗೊಳಿಸಲು ನಿರಂತರ ಹೋರಾಟ ಮಾಡಿದರು ಎಂದರು.
ಸಾಹಿತಿ ಮೇದೂರು ತೇಜ ಮಾತನಾಡಿ, ಸಾವಿತ್ರಿ ಬಾಪುಲೆಯವರು ಮಹಿಳೆಯರ ಶಿಕ್ಷಣ ಲೋಕದ ಮಹತ್ವದ ಕೊಂಡಿಯಾಗಿದ್ದಾರೆ. ಇವರ ಉದಾತ್ತ ಚಿಂತನೆಗಳ ಫಲವೇ ಈ ದೇಶದ ಸಂವಿಧಾನವಾಗಿದೆ. ಮಹಿಳೆಯರು ಹೆಚ್ಚು ಸಾವತ್ರಿಯವರ ಬಗ್ಗೆ ಅಧ್ಯಯನ ಶೀಲರಾಗಬೇಕು. ಅವರ ಚಿಂತನೆಯಲ್ಲಿ ಸಾಗಬೇಕು ಎಂದು ತಿಳಿಸಿದರು.ಈ ವೇಳೆ ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷೆ ಮಮತ, ಮಹಿಳಾ, ಮತ್ತು ಮಕ್ಕಳ ಇಲಾಖೆಯ ಲೀಲಾಭಾಯಿ ಅವರಿಗೆ ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಎಚ್.ರಂಗಪ್ಪ, ಶಿಕ್ಷಣ ಇಲಾಖೆಯ ಮಂಜುನಾಥ್, ಸಮಾಜ ಪರಿವರ್ತನಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ನಾಗಸಮುದ್ರ ಮರಿಸ್ವಾಮಿ, ಗೌರವ ಅಧ್ಯಕ್ಷ ಭಂಗಿ ನಾಗರಾಜ್, ಶಿವಣ್ಣ ತಿಮ್ಮಲಾಪುರ, ತಾಲೂಕು ಅಧ್ಯಕ್ಷ ವಡೆರಹಳ್ಳಿ ಬಸವರಾಜ್, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಯರಿಸ್ವಾಮಿ, ಸಾಹಿತಿ ಲೋಕೇಶ್ ಪಲ್ಲವಿ, ಮಾನವ ಬಂಧುತ್ವ ವೇದಿಕೆಯ ಅಧ್ಯಕ್ಷ ತಿಪ್ಪೇಶ್ ಇದ್ದರು.