ಸಾರಾಂಶ
ಹುಬ್ಬಳ್ಳಿ:
ಶಿಕ್ಷಣ, ಉದ್ಯೋಗ ಅರಸಿ ದೇಶ-ವಿದೇಶಗಳಿಗೆ ವಲಸೆ ಹೋಗಿದ್ದ ನಾಲ್ಕು ತಲೆಮಾರಿನ ಕರುಳ ಕುಡಿಗಳೆಲ್ಲ ಮರಳಿ ಬಂದು ಅಲ್ಲಿ ಒಂದೇ ಸೂರಿನಡಿ ಸೇರಿದ್ದರು. ಬಂಧು-ಬಳಗ, ಹಿರಿಯರು-ಮಿತ್ರರ ಆಗಮಿಸಿದ್ದರು. ಹಳೆಯ ಬೇರು- ಹೊಸ ಚಿಗುರುಗಳ ಸಮಾಗಮಕ್ಕೆ ಹಿರಿಯರ ನೆನಪಿನ ಬುತ್ತಿ ರಸಗವಳವಾಗಿದ್ದರೆ, ಕುಟುಂಬ ವೃಕ್ಷದಲ್ಲಿ ಹೂವಾಗಿ ಹಣ್ಣಾದ ಧನ್ಯತೆ ಎಲ್ಲರ ಮುಖದಲ್ಲಿ ಘಮಘಮಿಸುತ್ತಿತ್ತು.ಕೇಶ್ವಾಪುರದಲ್ಲಿರುವ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಸಭಾಭವನ ಭಾನುವಾರ ಬೆಳಗ್ಗೆ ಇಂಥದೊಂದು ಕಲರವಕ್ಕೆ ಸಾಕ್ಷಿಯಾಗಿತ್ತು. ಹಿಂದಿನ ಮುಂಬೈ ರಾಜ್ಯದ ಶ್ರೇಷ್ಠನಟ ಪ್ರಶಸ್ತಿಗೆ ಭಾಜನರಾಗಿದ್ದ ಡಾ. ಶ್ರೀನಿವಾಸ ಪರ್ವತಿ ಅವರ ಜೀವನಯಾನ ಕುರಿತು ಹೊರತರಲಾದ `ಸವ್ಯಸಾಚಿ'''' ಕೃತಿ ಲೋಕಾರ್ಪಣೆ ಕಾರ್ಯಕ್ರಮ ಅಲ್ಲಿ ಸೇರಿದ್ದವರ ಎದೆಯಲ್ಲಿ ತುಂಬು ಕುಟುಂಬದ ಮಮತೆ ಅನುಭವಿಸುವಂತೆ ಮಾಡಿತು..
ಸಾಮಾನ್ಯವಾಗಿ ಅಗಲಿದ ತಂದೆಯನ್ನು ನೆನಪಿಸುವುದು ಅವರ ಶ್ರಾದ್ಧ, ಪುಣ್ಯತಿಥಿ ಕಾರ್ಯಕ್ರಮಗಳಲ್ಲಿ. ಆದರೆ ಪರ್ವತಿ ಕುಟುಂಬ ಸಾಹಿತ್ಯ, ರಂಗಭೂಮಿ, ಗೆಳೆಯರ ಬಳಗದಲ್ಲಿ ಶೀನೂಕಾಕಾ ಎಂದೇ ಹೆಸರಾಗಿದ್ದ ಡಾ. ಶ್ರೀನಿವಾಸರಾವ ಪರ್ವತಿ ಅವರನ್ನು ನೆನಪಿಸಿಕೊಳ್ಳಲಿಲ್ಲ, ಬದಲಾಗಿ ಅವರ ಬದುಕಿನ ನೆನಪುಗಳಿಗೆ ಅಕ್ಷರ ರೂಪ ನೀಡಿ, `ಸವ್ಯಸಾಚಿ'''' ಕೃತಿ ಮೂಲಕ ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿತು.ಈ ಕೃತಿಯಲ್ಲಿ ಮಕ್ಕಳು, ಮೊಮ್ಮಕ್ಕಳು ತಮ್ಮ ನೆನಪುಗಳಲ್ಲು ಹಂಚಿಕೊಂಡಿದ್ದಾರೆ. ಪ್ರಹ್ಲಾದ ಪರ್ವತಿ ಸಂಪಾದಿಸಿ ಈ ಕೃತಿಯನ್ನುಶೀನೂಕಾಕಾರ ಗಿರಿಮೊಮ್ಮಗ 10 ವರ್ಷದ ದರ್ಶ ತಲೆಯ ಮೇಲೆ ಹೊತ್ತು ವೇದಿಕೆಗೆ ತಂದಾಗ ಹಿರಿಯ ಸಾಹಿತಿಗಳಾದ ಡಾ. ರಮಾಕಾಂತ ಜೋಶಿ, ಶ್ರೀನಿವಾಸ ವಾಡಪ್ಪಿ, ಡಾ. ಕೃಷ್ಣ ಕಟ್ಟಿ, ಕನ್ನಡ ಹೋರಾಟಗಾರ ವೆಂಕಟೇಶ ಮರೇಗುದ್ದಿ, ರಂಗಕರ್ಮಿ ಅನಂತ ದೇಶಪಾಂಡೆ ಜತೆಗೂಡಿ ಲೋಕಾರ್ಪಣೆಗೊಳಿಸಿದಾಗ ಅಲ್ಲಿದ್ದವರಿಗೆ ಮನೆದೇವರ ತೇರನೆಳೆದ ಸಂಭ್ರಮ.
ಶೀನೂಕಾಕಾರ ನಿಕಟವರ್ತಿ ಡಾ. ರಮಾಕಾಂತ ಜೋಶಿ ಅವರು ತಮ್ಮ ಅನುಭವದ ಬುತ್ತಿ ಬಿಚ್ಚಿದಾಗ ಇಡೀ ಸಭಾಂಗಣ ನೆನಪಿನ ದೋಣಿಯಾಗಿ ಪರ್ವತಿ, ಬಾಗಲಕೋಟೆ, ನಿಡಗುಂದಿ, ಧಾರವಾಡ, ಹುಬ್ಬಳ್ಳಿ, ಮುಂಬೈ ಸುತ್ತುತ್ತಿತ್ತು. ಅವರ ಆಪ್ತ ಮಾತುಗಳು ಅಂತರಾಳವನ್ನು ಹೊಕ್ಕು ಶೀನೂಕಾಕಾರನ್ನು ಅಮರಗೊಳಿಸಿದವು. ಸುದೀರ್ಘವಾಗಿ ನೆನಪುಗಳ ಮೆಲುಕು ಹಾಕುತ್ತ ಬಡತನದಲ್ಲಿ ಸವ್ಯಸಾಚಿಯ ಹೃದಯ ಶ್ರೀಮಂತಿಯನ್ನು ಅನಾವರಣಗೊಳಿಸಿದರು. ಶೀನೂಕಾಕಾರ ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳ ಹೆಸರುಗಳನ್ನು ಎತ್ತಿ ಹೇಳಿ ಹಳೆಯ ಬೇರು-ಹೊಸ ಚಿರುಗುರಿನ ಬಂಧುತ್ವ ಇನ್ನಷ್ಟು ಬಿಗಿಗೊಳಿಸಿದರು.ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ, ಸ್ವತಂತ್ರ್ಯಪೂರ್ವದಲ್ಲಿ ಕೆಳಮಧ್ಯಮ ಬ್ರಾಹ್ಮಣ ಕುಟುಂಬದ ಪ್ರತೀಕದಂತಿದ್ದ ಶೀನೂಕಾಕಾ, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕೊಟ್ಟರು. ಇಂಥ ತಂದೆ ಅಪರೂಪ, ಈ ವಿಷಯದಲ್ಲಿ ಪರ್ವತಿ ಕುಟುಂಬದವರು ಅದೃಷ್ಟವಂತರು ಎಂದು ಶ್ಲಾಘಿಸಿದರು.
ಗದುಗಿನ ಭಾರತದಲ್ಲಿ ಸಂಬಂಧಗಳ ಕುರಿತು ಕುಮಾರವ್ಯಾಸ ಉಲ್ಲೇಖಿಸಿದ ಪದ್ಯಕ್ಕೆ ಪರ್ವತಿ ಕುಟುಂಬವನ್ನು ಹೋಲಿಕೆ ಮಾಡಿದ ಡಾ. ಕೃಷ್ಣ ಕಟ್ಟಿ, ಹಿರಿಯರ ಋಣ ಯಾವತ್ತೂ ನಮ್ಮ ಮೇಲಿರುತ್ತದೆ. ಅದನ್ನು ಬರೀ ಶ್ರಾದ್ಧ ಮಾಡಿ ತೀರಿಸುವುದಲ್ಲ, ಹೀಗೆ ಅವರ ಆದರ್ಶ ಮೆಲುಕು ಹಾಕುವ ಮೂಲಕ, ಪಾಲಿಸುವ ಮೂಲಕ, ಮುಂದಿನ ಪೀಳಿಗೆಗೆ ದಾಟಿಸುವ ಮೂಲಕ ತೀರಿಸುತ್ತ ಜೀವಂತ ಇಡಬೇಕು ಎಂದರು.ವೆಂಕಟೇಶ ಮರೆಗುದ್ದಿ, ಪ್ರಹ್ಲಾದ ಪರ್ವತಿ ಮತ್ತಿತರರು ತಮ್ಮ ನೆನಪುಗಳನ್ನು ಹಂಚಿಕೊಂಡರು. ಸುಶಿಲೇಂದ್ರ ಕುಂದರಗಿ ಕಾರ್ಯಕ್ರಮ ನಿರೂಪಿಸಿದರು. ರಂಗಕರ್ಮಿ ಅನಂತ ದೇಶಪಾಂಡೆ ವರಕವಿ ಬೇಂದ್ರೆ ಅವರನ್ನು ಅನುಕರಣೆ ಮಾಡಿ ನೆರೆದಿದ್ದವರನ್ನು ರಂಜಿಸಿದರು. ಲಕ್ಷ್ಮೀ ಪರ್ವತೀಕರ್ ಸುಶ್ರಾವ್ಯವಾಗಿ ಭಕ್ತಿಗೀತೆ ಹಾಡಿದರು.