ಸಾರಾಂಶ
ಜನಗಣತಿ-2011ರ ಪ್ರಕಾರ 318305 ಪರಿಶಿಷ್ಟ ಜಾತಿ ಜನಸಂಖ್ಯೆ ದಾವಣಗೆರೆ ಜಿಲ್ಲೆಯಲ್ಲಿದೆ. ಪ್ರಸ್ತುತ ಸಮೀಕ್ಷೆಯ ಪ್ರಕಾರ 329064 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಜನಗಣತಿ ಸಮೀಕ್ಷೆ ಮಾಡಿ, ಶೇ.100ಕ್ಕಿಂತಲೂ ಹೆಚ್ಚು ಪ್ರಗತಿ ಸಾಧಿಸಿ, ಗಣತಿಮುಕ್ತವಾಗಿದೆ.
ದಾವಣಗೆರೆ : ಜನಗಣತಿ-2011ರ ಪ್ರಕಾರ 318305 ಪರಿಶಿಷ್ಟ ಜಾತಿ ಜನಸಂಖ್ಯೆ ದಾವಣಗೆರೆ ಜಿಲ್ಲೆಯಲ್ಲಿದೆ. ಪ್ರಸ್ತುತ ಸಮೀಕ್ಷೆಯ ಪ್ರಕಾರ 329064 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಜನಗಣತಿ ಸಮೀಕ್ಷೆ ಮಾಡಿ, ಶೇ.100ಕ್ಕಿಂತಲೂ ಹೆಚ್ಚು ಪ್ರಗತಿ ಸಾಧಿಸಿ, ಗಣತಿಮುಕ್ತವಾಗಿದೆ. ಸಮೀಕ್ಷೆ ವೇಳೆ 85369 ಮನೆಗಳಿಗೆ ಭೇಟಿ ಗುರಿ ಇದ್ದು, ಈಗಾಗಲೇ 86366 ಮನೆಗಳ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಇಡೀ ರಾಜ್ಯದಲ್ಲೇ ದಾವಣಗೆರೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ಕೈಗೊಂಡಿರುವ ಜಾತಿ ಸಮೀಕ್ಷೆಯನ್ನು ಅತಿಯಾದ ಮಳೆ ಹಾಗೂ ಬೇರೆ ಕಾರಣಗಳಿಂದಾಗಿ ವಿಸ್ತರಿಸಲಾಗಿದೆ. ಈಗಾಗಲೇ ಜಾತಿ ಸಮೀಕ್ಷೆ ನಡೆಯುತ್ತಿದೆ. ಮೇ 25ರ ಸಂಜೆ 6 ಗಂಟೆವರೆಗೆ ನಡೆಯಲಿದ್ದು, ವಿಶೇಷ ಶಿಬಿರಗಳು ಮೇ 26ರಿಂದ 28ರವರೆಗೆ ನಡೆಯಲಿದೆ ಎಂದರು.
ಮತಗಟ್ಟೆ ಕೇಂದ್ರಗಳಲ್ಲಿ ಗಣತಿದಾರರು ಲಭ್ಯವಿರುತ್ತಾರೆ. ಸಮೀಕ್ಷೆಯಲ್ಲಿ ಯಾರಾದರೂ ಬಿಟ್ಟು ಹೋಗಿದ್ದರೆ, ಕೆಲಸ ಅರಸಿ ಬೇರೆ ಊರುಗಳಿಗೆ ಹೋಗಿದ್ದವರು, ವಲಸೆ ಹೋಗಿದ್ದವರು ಇದ್ದರೆ, ಸಮೀಕ್ಷೆಗೆ ಬಂದಾಗ ಮನೆ ಬೀಗ ಹಾಕಿಕೊಂಡು ಹೋದವರು ಯಾರಾದರೂ ಇದ್ದರೆ, ಅಂತಹವರು ವಿಶೇಷ ಶಿಬಿರದ ವೇಳೆ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಅಂತಹವರು ತಮ್ಮ ತಮ್ಮ ಮತಗಟ್ಟೆಗಳಿಗೆ ಹೋಗಿ, ಜಾತಿ ಸಮೀಕ್ಷೆ ಅಧಿಕಾರಿಗಳಲ್ಲಿ ನೋಂದಾಯಿಸಬಹುದು ಎಂದು ಅವರು ಹೇಳಿದರು.
ಮನೆ ಮನೆ ಭೇಟಿ ವೇಳೆ ಜಾತಿ ಇತರೆ ಮಾಹಿತಿ ದಾಖಲಿಸಲಾಗದೇ ಇದ್ದವರು ಮೊಬೈಲ್ ಅಪ್ಲಿಕೇಷನ್ ಮೂಲಕವೂ ನೋಂದಣಿ ಮಾಡಿಸಬಹುದು. ಮೇ.5ರಿಂದ ಸಮೀಕ್ಷೆ ಕಾರ್ಯವು ಶುರುವಾಗಿದ್ದು, ಮೇ.25ರವರೆಗೆ ಮನೆ ಮನೆ ಭೇಟಿ ಮಾಡಿ, ಸಮೀಕ್ಷೆ ಕೈಗೊಳ್ಳಲಾಗುವುದು. ವಿಶೇಷ ಶಿಬಿರ(ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ)ವು ಮೇ.26ರಿಂದ 28ರವರೆಗೆ ಮೂರು ದಿನಗಳ ಕಾಲ ಸಮೀಕ್ಷೆಯಲ್ಲಿ ಕೈಬಿಟ್ಟು ಹೋದಂತಹ ಪರಿಶಿಷ್ಟ ಜಾತಿ ಕುಟುಂಬದವರು ಶಿಬಿರಕ್ಕೆ ಆಗಮಿಸಿ, ನೋಂದಾಯಿಸಿಕೊಳ್ಳಬಹುದು ಎಂದು ಡಿಸಿ ಹೇಳಿದರು.
ಮೇ 19ರಿಂದ 28ರವರೆಗೆ ಸಮೀಕ್ಷೆಯಲ್ಲಿ ಆನ್ ಲೈನ್ ವೆಬ್ ಸೈಟ್: ** http://schedulecastesurvey.karnataka.gov.in/selfdeclaration ** ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬಹುದು. ಜಿಲ್ಲೆಯಲ್ಲಿ ಸಮೀಕ್ಷೆದಾರರು ಪ್ರತಿ ಮತಗಟ್ಟೆಗೊಬ್ಬರಂತೆ 1693 ಗಣತಿದಾರರು, ಪರಿಶಿಷ್ಟ ಜಾತಿ ಹೆಚ್ಚಿರುವ ಮತಗಟ್ಟೆಗಳಲ್ಲಿ ಹೆಚ್ಚುವರಿ 119 ಗಣತಿದಾರರನ್ನು ನೇಮಿಸಲಾಗಿದೆ. ಪ್ರತಿ 10 ಸಮೀಕ್ಷಾದಾರರಿಗೆ ಒಬ್ಬರಂತೆ 169 ಮೇಲ್ವಿಚಾರಕರನ್ನು ಸೇರಿದಂತೆ ಒಟ್ಟು 1981 ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಡಿಸಿ ಗಂಗಾಧರ ಸ್ವಾಮಿ ವಿವರಿಸಿದರು.
ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ನಾಗರಾಜ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರಿಸಿದ್ದಪ್ಪ ಇತರರು ಇದ್ದರು.
ಸುಳ್ಳು ಜಾತಿ-ಕ್ರಿಮಿನಲ್ ಕೇಸ್: ಡಿಸಿ ಎಚ್ಚರಿಕೆ ಪರಿಶಿಷ್ಟ ಜಾತಿಗಳ ಜಾತಿ ಸಮೀಕ್ಷೆ ವೇಳೆ ಪರಿಶಿಷ್ಟ ಜಾತಿಯವರು ಸುಳ್ಳು ಜಾತಿ ಮಾಹಿತಿ ನೀಡಿ, ದಾಖಲಿಸಿದರೆ ಅಂತಹವರನ್ನೂ ದಾಖಲಿಸಿಕೊಳ್ಳುತ್ತೇವೆ. ಬೇಡ ಜಂಗಮ ಹೆಸರಿನಲ್ಲಿ ನೈಜ ಬೇಡ ಜಂಗಮ ಅಲ್ಲದವರೂ ದಾಖಲಿಸುತ್ತಿರುವ ಬಗ್ಗೆ ದೂರು ಕೇಳಿಬರುತ್ತಿದೆ. ಅಂಥವರು ನೀಡುವ ಮಾಹಿತಿಯನ್ನೂ ಪಡೆಯುತ್ತೇವೆ. ಒಂದು ವೇಳೆ ಅಂತಹವರು ನೈಜವಾಗಿ ಪರಿಶಿಷ್ಟ ಜಾತಿಗೆ ಸೇರಿದವರಲ್ಲ ಎಂಬುದು, ದುರ್ಬಳಕೆ ಮಾಡಿಕೊಂಡಿದ್ದಾರೆಂಬುದು, ಪರಿಶಿಷ್ಟ ಜಾತಿಗಳ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಕಂಡುಬಂದವರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವುದೂ ಸೇರಿದಂತೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಜಿ.ಎಂ. ಗಂಗಾಧರ ಸ್ವಾಮಿ ಎಚ್ಚರಿಸಿದರು.