ಎಸ್ಸಿ ಒಳಮೀಸಲು ಸಮೀಕ್ಷೆ 1 ವಾರ ವಿಸ್ತರಣೆ

| N/A | Published : May 17 2025, 01:21 AM IST / Updated: May 17 2025, 11:32 AM IST

Vidhan soudha

ಸಾರಾಂಶ

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ನೀಡುವ ಸಂಬಂಧ ನಡೆಯುತ್ತಿರುವ ಮನೆ, ಮನೆ ಸಮೀಕ್ಷೆ ಅವಧಿಯನ್ನು ಒಂದು ವಾರ ಅಂದರೆ, ಮೇ 25ರವರೆಗೆ ವಿಸ್ತರಿಸಲಾಗಿದೆ.

 ಬೆಂಗಳೂರು : ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ನೀಡುವ ಸಂಬಂಧ ನಡೆಯುತ್ತಿರುವ ಮನೆ, ಮನೆ ಸಮೀಕ್ಷೆ ಅವಧಿಯನ್ನು ಒಂದು ವಾರ ಅಂದರೆ, ಮೇ 25ರವರೆಗೆ ವಿಸ್ತರಿಸಲಾಗಿದೆ. ಜತೆಗೆ, ವಿಶೇಷ ಶಿಬಿರಗಳ ಮೂಲಕ ನಡೆಸಲು ಉದ್ದೇಶಿಸಿದ್ದ ಸಮೀಕ್ಷೆಯನ್ನೂ ಮೇ 26 ರಿಂದ 28ರವರೆಗೆ ಹಾಗೂ ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆ ಸೌಲಭ್ಯವನ್ನು ಮೇ 19 ರಿಂದ 28ರವರೆಗೆ ಮರು ನಿಗದಿಪಡಿಸಲಾಗಿದೆ.

ಸಮೀಕ್ಷೆ ವೇಳೆ ಕಂಡು ಬಂದ ಸಮಸ್ಯೆಗಳನ್ನು ಸರಿಪಡಿಸಲು ಹಾಗೂ ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಭಾಗಿಯಾಗಬೇಕೆಂಬ ಕಾರಣದಿಂದ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ಹಲವು ಸಂಘ, ಸಂಸ್ಥೆಗಳು ಸಮೀಕ್ಷೆ ಅವಧಿ ವಿಸ್ತರಣೆಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪರಿಶಿಷ್ಟ ಜಾತಿ ಒಳಮೀಸಲಾತಿಯ ಏಕಸದಸ್ಯ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ.ಎಚ್‌.ಎನ್‌.ನಾಗಮೋಹನ್‌ ದಾಸ್‌, ಮೇ 15ರವರೆಗೆ ರಾಜ್ಯಾದ್ಯಂತ ಶೇ.73.72ರಷ್ಟು ಸಮೀಕ್ಷೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಶೇ.33ರಷ್ಟು ಸಮೀಕ್ಷೆ ನಡೆದಿದೆ, ಸಮೀಕ್ಷೆ ಅವಧಿ ವಿಸ್ತರಣೆಯಿಂದ ಇನ್ನಷ್ಟು ಮಂದಿ ಭಾಗಿಯಾಗುವ ವಿಶ್ವಾಸವಿದೆ ಎಂದರು.

ಆದಷ್ಟು ಬೇಗ ವರದಿ ಸಲ್ಲಿಕೆ:

ಸಮೀಕ್ಷೆ ಕಾರ್ಯ ಮುಗಿದ ನಂತರ ಲಭ್ಯ ದತ್ತಾಂಶಗಳನ್ನು ವಿಶ್ಲೇಷಿಸಿ ಆದಷ್ಟು ಬೇಗ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಆಯೋಗದಿಂದ ಯಾವುದೇ ವಿಳಂಬವಾಗುವುದಿಲ್ಲ. ಈಗಾಗಲೇ ಸರ್ಕಾರದ 43 ಇಲಾಖೆಗಳ ಪೈಕಿ 40 ಇಲಾಖೆ, ವಿಶ್ವವಿದ್ಯಾಲಯ ಸೇರಿ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿರುವ ಪರಿಶಿಷ್ಟ ಜಾತಿಯ ಅಧಿಕಾರಿ, ಸಿಬ್ಬಂದಿಯ ವಿವರ ಲಭ್ಯವಾಗಿದೆ. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿರುವ ಜನಪ್ರತಿನಿಧಿಗಳ ವಿವರ ಸಹ ಸಲ್ಲಿಕೆಯಾಗಿದೆ. ಇವುಗಳ ವಿಶ್ಲೇಷಣೆ ಬಾಕಿ ಇದೆ ಎಂದರು.

ಎಲ್ಲ ದತ್ತಾಂಶಗಳು ಲಭ್ಯವಾದ ನಂತರ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಿರುವ ಮಾನದಂಡಗಳನ್ನು ಆಧರಿಸಿ ವರ್ಗೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಕಾನೂನು ಕ್ರಮ:

ಬೆಂಗಳೂರಿನ ಕೆಲ ಅಪಾರ್ಟ್‌ಮೆಂಟ್‌ಗಳಲ್ಲಿ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಸಮೀಕ್ಷೆಗೆ ಅವಕಾಶ ನೀಡದಿರುವ ದೂರುಗಳು ಬಂದಿದೆ. ಈ ರೀತಿಯ ವರ್ತನೆ ಅಪರಾಧ. ಈಗಾಗಲೇ ಅಂತಹ ಅಪಾರ್ಟ್‌ಮೆಂಟ್‌ಗಳಿಗೆ ಎಚ್ಚರಿಸಲಾಗಿದೆ. ಇಂಥ ಅಪಾರ್ಟ್‌ಮೆಂಟ್‌ಗಳಿಗೆ ವಿದ್ಯುತ್‌, ನೀರು ಪೂರೈಕೆ ಯಾಕೆ ನೀಡಬೇಕು? ಗಣತಿದಾರರು ಬಂದಾಗ ವಿವರ ನೀಡುವುದಿಲ್ಲ ಎಂದು ಹೇಳಲಿ, ಆದರೆ ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರವೇಶ ನಿರಾಕರಿಸಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ನ್ಯಾ.ನಾಗಮೋಹನದಾಸ್‌ ಎಚ್ಚರಿಸಿದರು.

ನಮ್ಮ ಆ್ಯಪ್‌ ಬಗ್ಗೆ

ಕೇಂದ್ರಕ್ಕೆ ಮಾಹಿತಿ

ಜಾತಿ ಗಣತಿ ಮಾಡಲುದ್ದೇಶಿಸಿರುವ ಕೇಂದ್ರ ಸರ್ಕಾರ, ಪ್ರಸ್ತುತ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಅಳವಡಿಸಿಕೊಂಡಿರುವ ಮೊಬೈಲ್‌ ಆ್ಯಪ್‌ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವಂತೆ ಕೇಳಿತ್ತು. ಈ ಸಂಬಂಧ ಆಯೋಗ ವಿವರವಾದ ಉತ್ತರ ನೀಡಿದೆ ಎಂದು ನ್ಯಾ.ನಾಗಮೋಹನ್‌ ದಾಸ್‌ ತಿಳಿಸಿದರು.

ಗಣತಿ ವೇಳೆ ಮೃತಪಟ್ಟ  ಶಿಕ್ಷಕನ ಕುಟುಂಬಕ್ಕೆ 15 ಲಕ್ಷ

ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಸಮೀಕ್ಷೆ ವೇಳೆ ಹೃದಯಾಘಾತದಿಂದ ಮೃತಪಟ್ಟ ಶಿಕ್ಷಕ ನಾಗಶೆಟ್ಟಿ ಎಂಬುವರ ಕುಟುಂಬಕ್ಕೆ ಆಯೋಗದಿಂದ 15 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಇದೇ ವೇಳೆ ನ್ಯಾ.ನಾಗಮೋಹನದಾಸ್‌ ಹೇಳಿದರು.

ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ:

ರಾಜ್ಯದಲ್ಲಿ 44.50 ಮಂದಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂದ್ರ ಜಾತಿ ಎಂದು ನಮೂದಿಸಿದ್ದಾರೆ. ಆದರೆ ಇವು ಮೂರು ಜಾತಿಗಳ ಗುಂಪುಗಳಾಗಿವೆ. ಪ್ರಮುಖವಾಗಿ ಮೂರ್ನಾಲ್ಕು ತಲೆಮಾರುಗಳಿಂದ ಅನೇಕರಿಗೆ ತಮ್ಮ ಮೂಲ ಜಾತಿ ಗೊತ್ತಿಲ್ಲ. ಕೆಲವರು ತಮ್ಮ ಮೂಲ ಜಾತಿ ಹೇಳುತ್ತಿಲ್ಲ. ಕೆಲ ಕಡೆ ಉಪಜಾತಿ ಇದ್ದರೂ ಅದರ ಹೆಸರು 101 ಜಾತಿಯ ಪಟ್ಟಿಯಲ್ಲಿಲ್ಲ, ಹಾಗಾಗಿ ಈ ಜಾತಿಗಳ ಗುಂಪಿನ ಮೂಲಕ ಗುರುತಿಸಿಕೊಂಡಿದ್ದಾರೆ. ಸಮೀಕ್ಷೆ ವೇಳೆ ಉಪಜಾತಿ ಹೇಳದೆ ಆದಿ ದ್ರಾವಿಡ, ಆದಿ ಕರ್ನಾಟಕ ಇಲ್ಲವೇ ಆದಿ ಆಂಧ್ರ ಜಾತಿ ಎಂದು ಹೇಳಿದರೆ ಅದೇ ರೀತಿ ನಮೂದಿಸಲಾಗುವುದು, ಈ ರೀತಿ ದಾಖಲಿಸಿದವರನ್ನು ಹೇಗೆ ಪರಿಗಣಿಸಬೇಕು ಎಂಬುದನ್ನು ಮುಂದೆ ತೀರ್ಮಾನ ಮಾಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೇಡ ಜಂಗಮ, ಬುಡಗ ಜಂಗಮ:

ಸಮೀಕ್ಷೆ ವೇಳೆ ಬೇಡ ಜಂಗಮ, ಬುಡಗ ಜಂಗಮ ಎಂದು ಜಾತಿ ನಮೂದಿಸಿಕೊಂಡ ಮಾತ್ರಕ್ಕೆ ಮೀಸಲಾತಿಯಾಗಲಿ ಅಥವಾ ಜಾತಿ ಪ್ರಮಾಣ ಪತ್ರವಾಗಲಿ ದೊರೆಯುವುದಿಲ್ಲ. ಆದರೆ ಈಗಾಗಲೇ ಜಾತಿ ಪ್ರಮಾಣ ಪತ್ರ ಸಿಕ್ಕಿದ್ದರೆ ಸಮೀಕ್ಷೆಯಿಂದ ಹೊರಗಿಡಲು ಆಗುವುದಿಲ್ಲ. ಬೇಡ ಜಂಗಮ ಅಥವಾ ಬುಡಗ ಜಂಗಮ ಹೆಸರಿನಲ್ಲಿ ಅನ್ಯರು ಜಾತಿ ಪ್ರಮಾಣ ಪತ್ರ ಪಡೆದಿರುವ ದೂರುಗಳು ಬಂದಿವೆ. ಈ ಬಗ್ಗೆ ಜಿಲ್ಲಾಮಟ್ಟದ ಜಾತಿ ಪರಿಶೀಲನಾ ಸಮಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಈ ವಿಷಯದಲ್ಲಿ ಆಯೋಗಕ್ಕೆ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಅಧಿಕಾರವಿಲ್ಲ ಎಂದರು.ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್‌, ಆಯುಕ್ತ ರಾಕೇಶ್‌ಕುಮಾರ್‌, ಇ-ಆಡಳಿತ ನಿರ್ದೇಶಕ ಯತೀಶ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.

Read more Articles on