ಸಾರಾಂಶ
ಹುಲಸೂರ: ಬೀದರ್ ಜಿಲ್ಲೆಯ ಹುಲಸೂರ ದೊಡ್ಡ ಗ್ರಾ.ಪಂ ಎಂದು ಪ್ರಖ್ಯಾತಿ ಪಡೆದಂತೆ ಅಷ್ಟೇ ದೊಡ್ಡ ಹಗರಣದ ಬಗ್ಗೆ ಕೂಗು ಕೇಳಿ ಬರುತ್ತಿದೆ. ಕೋಟ್ಯಾಂತರ ರು. ದೋಚುವ ಪ್ರಯತ್ನ ನಡೆದಿದೆ ಎಂದು ಗ್ರಾ.ಪಂ ಸದಸ್ಯರೊಬ್ಬರು ಜಿ.ಪಂ ಸಿಇಒಗೆ ಮನವಿ ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ. ನರೇಗಾ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸದೆ ಬಿಲ್ ಪಾವತಿ, ಅಂದಾಜು ಪತ್ರಿಕೆಯಲ್ಲಿ ಸೂಚಿಸಿದಂತೆ ಯೋಜನೆ ರೂಪಿಸದೆ ಇರುವುದು, ಗ್ರಾ.ಪಂ ಸದಸ್ಯರು, ಮಕ್ಕಳು ಹಾಗೂ ಪತಿ ಹೆಸರಲ್ಲಿ ಬಿಲ್ ಪಾವತಿ ಮಾಡಿಕೊಳ್ಳುವುದು, ಹಳೆ ಕಾಮಗಾರಿಗಳನ್ನೇ ಪುನಃ ಎಂಐಎಸ್ ಮಾಡಿ, 1.25 ಕೋಟಿ ದೋಚುವ ಪ್ರಯತ್ನ ನಡೆದಿದೆ. ಈ ಅವ್ಯವಹಾರದಲ್ಲಿ ಗ್ರಾ.ಪಂ, ತಾ.ಪಂ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪಿಆರ್‌ಇ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ನಾನು ನೀಡಿದ ಈ ದೂರನ್ನು ಕಡೆಗಣಿಸಿ, ಈ ಬೋಗಸ್ ಕಾಮಗಾರಿಗಳಿಗೆ ಬಿಲ್ ಪಾವತಿ ಆದಲ್ಲಿ ನಾನು, ಲೋಕಾಯುಕ್ತ ಇಲಾಖೆಗೆ ಮೊರೆ ಹೋಗಬೇಕಾಗುತ್ತದೆ ಎಂದು ಗ್ರಾ.ಪಂ ಸದಸ್ಯ ವಿವೇಕಾನಂದ ಚಳಕಾಪುರೆ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗಿರೀಶ ಬಡೋಲೆಗೆ ದೂರಿನಲ್ಲಿ ಎಚ್ಚರಿಕೆ ನೀಡಿದ್ದಾರೆ.
------