ಸಾರಾಂಶ
ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಕಳೆದ ಮೂರು ದಿನಗಳಿಂದ ತಜ್ಞರ ಸಮಿತಿ ಸಭೆ ಸೇರಿ ವಿಸ್ತಾರವಾಗಿ ಚರ್ಚಿಸಿತು.
ಬಸವಕಲ್ಯಾಣ:
ನೂತನ ಅನುಭವ ಮಂಟಪ ಕಾಮಗಾರಿಗಳು ಭರದಿಂದ ಸಾಗಿದ್ದು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆ ಕಟ್ಟಡದ ಒಳಭಾಗದಲ್ಲಿ ಅನುಭವ ಮಂಟಪ ಸೌಂದರೀಕರಣಗೊಳಿಸಲು 12ನೇ ಶತಮಾನದ ಬಸವಾದಿ ಶಿವಶರಣರ ವಚನ ಸಾಹಿತ್ಯ ಆಧಾರಿತವಾಗಿ ದೃಶ್ಯ ಮತ್ತು ಶ್ರವಣ ಮಾಧ್ಯಮ ಕೆಲಸಕ್ಕೆ ಶರಣ ಸಾಹಿತ್ಯ ಅಳವಡಿಕೆಗೆ ತಜ್ಞ ಸಲಹಾ ಸಮಿತಿ ಉತ್ತಮ ಸಲಹೆ ನೀಡಿದೆ ಎಂದು ಹಿರಿಯ ಸಾಹಿತಿ ಡಾ.ಗೋರು.ಚೆನ್ನಬಸಪ್ಪ ಹೇಳಿದರು.ಏ.16ರಿಂದ 18ರ ವರೆಗೆ ಬಸವಕಲ್ಯಾಣದಲ್ಲಿ ಅನುಭವ ಮಂಟಪ ತಜ್ಞರ ಸಮಿತಿ ಸಭೆ ಸೇರಿ ಕಳೆದ 3 ದಿನಗಳಿಂದ ಸಹ ವಿಸ್ತಾರವಾಗಿ ಚರ್ಚಿಸಿ ಅನುಭವ ಮಂಟಪದಲ್ಲಿ ಸುಮಾರು 300 ವಚನಗಳು ಅಳವಡಿಕೆ ಮಾಡಲು ಅದಕ್ಕೆ ಬೇಕಾದ ವಚನಗಳ ಆಯ್ಕೆ ಮಾಡಿಕೊಡಲಾಯಿತು. ಅದರಲ್ಲಿ ಸಾಹಿತ್ಯ ಲೋಪವಾಗದಂತೆ ನೋಡಿಕೊಳ್ಳುವುದು, ಅಲ್ಲಿ ಪ್ರದರ್ಶಿಸುವ ವಚನಗಳ ಆಯ್ಕೆ ಮತ್ತು ಶರಣರ ಭಾವಚಿತ್ರಗಳ ಅಳವಡಿಕೆ ದೃಶ್ಯ ಮಾಧ್ಯಮ, ಶ್ರವಣ ಮಾಧ್ಯಮ ಕುರಿತು ಚರ್ಚಿಸಲಾಯಿತು.
ಈ ಚರ್ಚೆಯಲ್ಲಿ ಸಮಿತಿ ಸದಸ್ಯರುಗಳಾದ ಅರವಿಂದ ಜತ್ತಿ, ರಂಜಾನ ದರ್ಗಾ, ವೀರಣ್ಣ ರಾಜೂರ ಸಾಹಿತಿಗಳು ಧಾರವಾಡ, ಗಂಗಾಂಬಿಕಾ ಪಾಟೀಲ, ವೀರಣ್ಣ ದಂಡೆ, ಕಾಶಿನಾಥ ಅಂಬುಲಗೆ, ಡಾ.ಅಮರನಾಥ ಸೋಲಪುರೆ, ಬಾಬಾಸಾಹೇಬ ಗಡ್ಡೆ ಅನುಭವ ಮಂಟಪದ ಶಿಲ್ಪಿ, ಅಶೋಕ ದೊಮಲೂರ, ಟಿ.ಆರ್ ಚಂದ್ರಶೇಖರ, ಅಶೋಕ ಬರಗುಂಡಿ, ರುದ್ರೇಶ ಚಿತ್ತೂರ, ಜೈಶ್ರೀ ದಂಡೆ, ಬಿಕೆಡಿಬಿ ಅಭಿಯಂತರರಾದ ಶಿವಕುಮಾರ ತಳವಾಡೆ ಮುಂತಾದವರು ಭಾಗವಹಿಸಿದ್ದರು.ಇವರೆಲ್ಲರ ಸಲಹೆ ಸಹಕಾರದಂತೆ ಅನುಭವ ಮಂಟಪದ ಒಳಗಡೆ ಮತ್ತು ಹೊರಗಡೆ ಸಾಹಿತ್ಯ ದೃಶ್ಯ ಮತ್ತು ಶ್ರವಣ ಮಾಧ್ಯಮಗಳು ವಚನ ಸಾಹಿತ್ಯ ಆಧಾರವಾಗಿ ಕಟ್ಟಡದಲ್ಲಿ ಅಳವಡಿಸಲಾಗುತ್ತಿದೆ ಎಂದು ತಜ್ಞರ ಸಲಹಾ ಸಮೀತಿ ಅಧ್ಯಕ್ಷ ಗೋ.ರು.ಚೆನ್ನಬಸಪ್ಪನವರು ತಿಳಿಸಿದರು.