ಶಾಲಾ ಮಕ್ಕಳ ಅಪಹರಣ ಪ್ರಕರಣದ ಆರೋಪಿಗೆ ಕಾನೂನು ಪ್ರಕಾರ ಕ್ರಮ ಆಗಬೇಕು. ಪ್ರಕರಣದ ಕುರಿತು ಸಮಗ್ರ ತನಿಖೆ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಜಿಲ್ಲಾಡಳಿತವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಧಾರವಾಡ:
ಕಮಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಇಬ್ಬರು ಮಕ್ಕಳ ಅಪಹರಣ ಪ್ರಕರಣದ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಪೊಲೀಸ್ ಕ್ರಮ ಜರುಗಿಸಲಾಗಿದೆ. ಶಾಲಾ ಅವಧಿಯಲ್ಲಿ ಮಕ್ಕಳ ಅಪಹರಣವಾಗಿದ್ದು, ಈ ಕುರಿತು ತನಿಖೆ ಮಾಡಿ ವರದಿ ನೀಡಲು ಜಿಪಂ ಸಿಇಒ ಅಧಿಕಾರಿಗಳ ಸಮಿತಿ ರಚಿಸಿದ್ದಾರೆ. ಸಮಿತಿ ನೀಡುವ ವರದಿ ಪರಿಶೀಲಿಸಿ, ಲೋಪ ಉಂಟಾಗಿದ್ದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.ಬುಧವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯ ವಿಚಾರಿಸಿದ ಅವರು, ಗಾಯಾಳು ಮಕ್ಕಳ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಶಾಲೆಯ ಊಟದ ವಿರಾಮದ ನಂತರ ಈ ಘಟನೆ ನಡೆದಿದೆ. ಈ ರೀತಿಯ ಘಟನೆಗಳನ್ನು ತಡೆಯಲು ಶಾಲಾ ಸುರಕ್ಷತಾ ವ್ಯವಸ್ಥೆ ಸುಧಾರಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಪ್ರಕರಣದ ಆರೋಪಿಗೆ ಕಾನೂನು ಪ್ರಕಾರ ಕ್ರಮ ಆಗಬೇಕು. ಪ್ರಕರಣದ ಕುರಿತು ಸಮಗ್ರ ತನಿಖೆ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಜಿಲ್ಲಾಡಳಿತವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದಲ್ಲಿ ವಿಶೇಷ ಅಭಿಯೋಜಕರ ಅವಶ್ಯಕತೆ ಇದ್ದಲ್ಲಿ ಪೊಲೀಸ್ ಇಲಾಖೆ ಪರಿಶೀಲಿಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಶಾಲಾ ಅವಧಿಯಲ್ಲಿ ಕಡ್ಡಾಯವಾಗಿ ಶಿಕ್ಷಕರು ಶಾಲೆಯಲ್ಲಿದ್ದು, ಮಕ್ಕಳಿಗೆ ಪಾಠ ಬೋಧನೆ ಮಾಡಬೇಕು ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ನಿಗಾವಹಿಸಬೇಕು. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಜಿಪಂದಿಂದ ಸುತ್ತೋಲೆ ನೀಡಲಾಗುತ್ತದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆ ಮತ್ತು ಕಾಂಪೌಂಡ್ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲಿಸಲಾಗುವುದು ಎಂದರು. ಡಿಡಿಪಿಐ ಎಸ್.ಎಸ್. ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ಡಾ. ಎಚ್.ಎಚ್. ಕುಕನೂರ, ಡಿಎಚ್‌ಒ ಡಾ. ಎಸ್.ಎಂ. ಹೊನಕೇರಿ, ಇನ್‌ಸ್ಪೆಕ್ಟರ್ ಪ್ರಭು ಗಂಗೆನಹಳ್ಳಿ ಇದ್ದರು.