ಸಾರಾಂಶ
ವೇಳೆಗೆ ಸರಿಯಾಗಿ ಬಸ್ ಆಗಮಿಸದ ಹಿನ್ನೆಲೆಯಲ್ಲಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಬುಧವಾರ ರಾತ್ರಿ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವೇಳೆಗೆ ಸರಿಯಾಗಿ ಬಸ್ ಆಗಮಿಸದ ಹಿನ್ನೆಲೆಯಲ್ಲಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಬುಧವಾರ ರಾತ್ರಿ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ತಡೆದು ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿರುವುದರಿಂದ ಬಸ್ಸುಗಳ ಕೊರತೆ ಕೂಡ ಅಷ್ಟೇ ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳು ಇಲ್ಲದೆ ಶಾಲಾ-ಕಾಲೇಜುಗಳು ಹೋಗಲು ಪರದಾಡುತ್ತಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಚಾಲಕರು ದಿನಂಪ್ರತಿ ಬಸ್ ನಿಲ್ಲಿಸದೆ ಹಾಗೆ ಹೋಗುತ್ತಿದ್ದರು. ಇದಕ್ಕೆ ರೋಸಿ ಹೋದ ವಿದ್ಯಾರ್ಥಿಗಳು ಮತ್ತು ಉಮಚಗಿ ಗ್ರಾಮಸ್ಥರು ಬುಧವಾರ ಸಂಜೆ ಉಮಚಗಿ ಗ್ರಾಮದ ಮೇಲೆ ಹಾದು ಹೋಗುತ್ತಿದ್ದ ಕೊಡ್ಲಿವಾಡ್, ಲಕ್ಷ್ಮೇಶ್ವರ ಬಸ್ಸುಗಳು ತಡೆದು ಪ್ರತಿಭಟನೆ ನಡೆಸಿದರು.ವಿಷಯ ತಿಳಿದು ಗ್ರಾಮಕ್ಕೆ ಬಂದ ಅಧಿಕಾರಿಗಳು ಈ ರೀತಿಯ ಸಮಸ್ಯೆಯಾಗದಂತೆ ಸಮರ್ಪಕ ಬಸ್ ಬಿಡುವ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಮತ್ತೆ ಏನಾದರೂ ಬಸ್ಸುಗಳನ್ನು ನಿಲ್ಲಿಸದೆ ಹೋದರೆ ಇದೇ ರೀತಿ ಬಸ್ಸುಗಳನ್ನು ತಡೆಯುವುದಾಗಿ ಎಚ್ಚರಿಕೆ ನೀಡಿದರು.