ಸಮಸ್ಯೆಗಳಿಗೆ ಪರಿಹಾರ ಕೇಳಿದ ಶಾಲಾ ಮಕ್ಕಳು

| Published : Mar 11 2024, 01:18 AM IST

ಸಾರಾಂಶ

ಕುದೂರು: ಶಾಲೆಗೆ ಹೋಗುವಾಗ, ಬರುವಾಗ ರಸ್ತೆಯಲ್ಲಿ ವಾಹನಗಳು ಅತ್ಯಂತ ವೇಗವಾಡಿ ಓಡಾಡುತ್ತವೆ, ದಯವಿಟ್ಟು ರಸ್ತೆ ಅಗಲೀಕರಣ ಮಾಡಿಸಿಕೊಡಿ, ನಮ್ಮದು ಉರ್ದು ಶಾಲೆ ನಮ್ಮ ಶಾಲೆಯ ಅಡುಗೆ ಮನೆ ತುಂಬಾ ಚಿಕ್ಕದು ದೊಡ್ಡದು ಮಾಡಿಕೊಡಿ, ಮಹಾತ್ಮನಗರ ಶಾಲೆ ಬಳಿ ಪುಂಡರು ಶಾಲೆ ಬಿಟ್ಟ ನಂತರ ಗುಟ್ಕಾ ಹಾಕಿ ಉಗಿದು, ಮದ್ಯಪಾನದ ಬಾಟೆಲ್ ಒಡೆದು, ಸಿಗರೇಟ್ ಸೇದಿ ಗಲೀಜು ಮಾಡ್ತಾರೆ. ಹಾಗೆ ಮಾಡುವವರನ್ನು ಹಿಡಿದು ಶಿಕ್ಷಿಸಿ... ಇಂತಹ ಹತ್ತಾರು ಸಮಸ್ಯೆಗಳಿಗೆ ಪಂಚಾಯ್ತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಪರಿಹಾರ ಕೇಳಿದವರು ಪ್ರಾಥಮಿಕ ಶಾಲೆಯ ಮಕ್ಕಳು.

ಕುದೂರು ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳ ಮತ್ತು ಮಹಿಳೆಯರ ಗ್ರಾಮಸಭೆ ಮತ್ತು ವಿಕಲಾಂಗ ಮಕ್ಕಳ ಸಭೆಯಲ್ಲಿ ಚರ್ಚಿಸಿದರು.

ಕೆಪಿಎಸ್ ಶಾಲೆಯ ಮಕ್ಕಳು ಸರ್, ನಾವು ಶಾಲೆಯ ಕಸವನ್ನು ಗುಡಿಸಿ ಒಂದೆಡೆ ಗುಡ್ಡೆ ಮಾಡಿರುತ್ತೇವೆ .ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ಪಂಚಾಯ್ತಿಯವರು ಬಂದು ಕಸ ವಿಲೇವಾರಿ ಮಾಡಿಕೊಡಿ ಎಂದು ಮನವಿ ಮಾಡಿದರು. ನಮ್ಮ ಶಾಲೆಯಲ್ಲಿ ಐನೂರಕ್ಕೂ ಹೆಚ್ಚು ಮಕ್ಕಳಿದ್ದೀವಿ. ಹೆಣ್ಣು ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿಲ್ಲ ಅದನ್ನು ಸರಿಮಾಡಿಸಿಕೊಡಿ ಎಂದೆಲ್ಲಾ ಸಮಸ್ಯೆಗಳನ್ನು ಹಂಚಿಕೊಂಡರು.

ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಪಿಡಿಒ ಪುರುಷೋತ್ತಮ್, ಮಕ್ಕಳು ಬೆಳೆಯುವ ಹಂತದಲ್ಲೇ ತಿದ್ದಿ ಬುದ್ದಿ ಹೇಳಿ ಬೆಳೆಸಿದರೆ ದೇಶದ ಕುರಿತು ಒಳಿತನ್ನು ಯೋಚನೆ ಮಾಡುತ್ತಾರೆ ಎನ್ನುವುದಕ್ಕೆ ಇಂದಿನ ಸಭೆ ಸಾಕ್ಷಿಯಾಗಿದೆ. ಮಕ್ಕಳು ಧೈರ್‍ಯವಾಗಿ ತಮ್ಮ ಶಾಲೆಯ ಸಮಸ್ಯೆಗಳನ್ನು ಗ್ರಾಮಸಭೆಯಲ್ಲಿ ಪ್ರಶ್ನಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಶಾಲಾ ಕಾಂಪೋಂಡಿನೊಳಗೆ ಶಾಲೆಯ ಸಮಯದಲ್ಲಾಗಲಿ, ಶಾಲೆ ಬಿಟ್ಟ ನಂತರವಾಗಲಿ ಅನಧಿಕೃತರ ಪ್ರವೇಶವಾಗದಂತೆ ಸ್ಥಳೀಯ ಪೊಲೀಸರ ಸಹಾಯ ಪಡೆದು ಪುಂಡರಿಗೆ ಎಚ್ಚರಿಕೆ ನೀಡಲು ಕಾರ್‍ಯೋನ್ಮುಖರಾಗುತ್ತೇವೆ. ಮಕ್ಕಳ ಎಲ್ಲಾ ಸಮಸ್ಯೆಗಳನ್ನು ಖಂಡಿತ ಪರಿಹರಿಸುತ್ತೇವೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಕುಸುಮಾ ಮಾತನಾಡಿ, ಬಾಲ್ಯವಿವಾಹ ಅಪರಾಧ. ಹೀಗೆ ಮಾಡಿದರೆ ಆ ಮಕ್ಕಳ ತಂದೆ ತಾಯಿಯನ್ನೂ ಶಿಕ್ಷೆಗೆ ಗುರಿಪಡಿಸುವ ಕಾನೂನಿದೆ. ಮಕ್ಕಳು ಶುಚಿತ್ವದ ಕಡೆಗೆ ಗಮನ ಕೊಡಬೇಕು. ಹೆಣ್ಣು ಮಕ್ಕಳಿಗೆ ಕೆಟ್ಟ ಮತ್ತು ಒಳ್ಳೆಯ ಸ್ಪರ್ಶಗಳ ಪರಿಚಯವನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡಬೇಕು ಎಂದು ತಿಳಿಸಿದರು.

ಕುದೂರು ಗ್ರಾಮದಲ್ಲಿ ೧೬೮ ಜನ ಅಂಗವಿಕಲ ಮಕ್ಕಳಲ್ಲಿ ಸಭೆಗೆ ಹಾಜರಿದ್ದವರ ಸಂಖ್ಯೆ ಕೇವಲ ೨೬ ಜನರು ಮಾತ್ರ. ಮಹಿಳಾ ಸಭೆ ಎಂದಷ್ಟೇ ಹೆಸರಿತ್ತು. ಆದರೆ ಗ್ರಾಪಂ ಅಧ್ಯಕ್ಷೆ ಉಪಾಧ್ಯಕ್ಷೆ ಸದಸ್ಯರು ಮತ್ತು ಪಂಚಾಯ್ತಿ ಮಹಿಳಾ ನೌಕರರು ಸೇರಿದಂತೆ ಕೇವಲ ೨೦ ಮಂದಿ ಮಾತ್ರ ಹಾಜರಿದ್ದರು.

ಮಕ್ಕಳ ಗ್ರಾಮಸಭೆ ಅಧ್ಯಕ್ಷತೆಯನ್ನು ಮಕ್ಕಳಾದ ಪೂರ್ವಿಕ ಮತ್ತು ಮಧು ವಹಿಸಿದ್ದರು. ದೈಹಿಕ ಶಿಕ್ಷಕ ಶಿವಕುಮಾರ್, ಆರಕ್ಷಕ ಅಧಿಕಾರಿ ರಾಮಕೃಷ್ಣಯ್ಯ, ಪಂಚಾಯ್ತಿ ಉಪಾಧ್ಯಕ್ಷೆ ರಮ್ಯಜ್ಯೋತಿ, ಸದಸ್ಯ ಕೆ.ಬಿ.ಬಾಲರಾಜ್, ರಮೇಶ್, ಗೋಪಾಲಕೃಷ್ಣ, ಮುಖಂಡ ಹೊನ್ನರಾಜು, ಕಾರ್‍ಯದರ್ಶಿ ವೆಂಕಟೇಶ್, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಹೇಮಲತ, ಬೆಸ್ಕಾಂ ದೇವರಾಜ್ ಮತ್ತಿತರರಿದ್ದರು.10ಕೆಆರ್ ಎಂಎನ್ 2.ಜೆಪಿಜಿ

ಕುದೂರು ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳು ಮತ್ತು ಮಹಿಳೆಯರ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷೆ ಕುಸುಮಾ ಮಕ್ಕಳೊಂದಿಗೆ ಉದ್ಘಾಟಿಸಿದರು.