ಸಾರಾಂಶ
ಹಾನಗಲ್ಲ: ಸಂತಸದ ಕಲಿಕೆಗೆ ಮುಂದಾದರೆ ಶಾಲಾ ಶಿಕ್ಷಣ ಅತ್ಯಂತ ಸುಖದಾಯಕವಾಗಲು ಸಾಧ್ಯವಿದ್ದು, ಪಾಠದ ಅವಧಿಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಇಂಗ್ಲಿಷ ಭಾಷಾ ಸಂಪನ್ಮೂಲ ಶಿಕ್ಷಕ ಶಂಭುಲಿಂಗ ನೀಲಗುಂದ ತಿಳಿಸಿದರು.ಸೋಮವಾರ ಹಾನಗಲ್ಲಿನ ಹ್ಯೂಮ್ಯಾನಿಟಿ ಫೌಂಡೇಶನ್‌ನ ಪರಿತವರ್ತನಾ ಕಲಿಕಾ ಕೇಂದ್ರದಲ್ಲಿ ೪೦ ದಿನಗಳ ಕಾಲ ಆಯೋಜಿಸಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಲಾ ಪೂರ್ವ ತರಬೇತಿಯಲ್ಲಿ ಆಂಗ್ಲಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದ್ದಕ್ಕೆ ವಿದ್ಯಾರ್ಥಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಜೆಯನ್ನು ಅತ್ಯಂತ ಸದುಪಯೋಗ ಮಾಡಿಕೊಂಡು ಈ ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ನಿಜಕ್ಕೂ ಧನ್ಯರು. ರಜೆ ಅವಧಿಯಲ್ಲಿ ಆಂಗ್ಲ ಭಾಷಾ, ವಿಜ್ಞಾನ, ಗಣಿತ ವಿಷಯಗಳನ್ನು ಶಾಲಾ ಪೂರ್ವದಲ್ಲಿಯೇ ಅಧ್ಯಯನ ಮಾಡುವ ಮೂಲಕವಾಗಿ ಬರುವ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಶಾಲಾ ಅಭ್ಯಾಸಕ್ಕೆ ಅನುಕೂಲವಾಗಿದೆ. ಸಮಯ ಅತ್ಯಂತ ಮುಖ್ಯವಾದುದು. ಈ ರಜೆಯನ್ನು ವಿದ್ಯಾರ್ಥಿಗಳ ಪಾಲಿಗೆ ಅರ್ಥಪೂರ್ಣಗೊಳಿಸಿದ ಪರಿವರ್ತನ ಕಲಿಕಾ ಕೇಂದ್ರದ ಆಡಳಿತ ಮಂಡಳಿ ನಿಜಕ್ಕೂ ಕೃತಜ್ಞತೆಯ ಕೆಲಸ ಮಾಡಿದೆ ಎಂದರು.ಪರಿವರ್ತನ ಕಲಿಕಾ ಕೇಂದ್ರ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಹ್ಯೂಮ್ಯಾನಿಟಿ ಫೌಂಡೇಶನ್ ಹಾನಗಲ್ಲ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುಂದಾಗಿದೆ. ಉದ್ಯೋಗಾವಕಾಶಕ್ಕಾಗಿ ತರಬೇತಿ ನೀಡುವುದರ ಜೊತೆಗೆ ಉತ್ತಮ ಶಿಕ್ಷಣ ನೀಡಲು ಬೇಕಾಗುವ ಎಲ್ಲ ಸೌಲಭ್ಯ ಒದಗಿಸಲು ಮುಂದಾಗಿದೆ. ಸರಕಾರದ ಜೊತೆಗೆ ಸಮಾಜವೂ ಕೈ ಜೋಡಿಸಿದರೆ ಶೈಕ್ಷಣಿಕ ಕಾರ್ಯಗಳಿಗೆ ಹೆಚ್ಚು ಅನುಕೂಲ. ಈ ಕಾರ್ಯದಲ್ಲಿ ಕೈ ಜೋಡಿಸಿದ ನುರಿತ ಸಂಪನ್ಮೂಲ ವ್ಯಕ್ತಿಗಳ ಸೇವೆ ಇಲ್ಲಿ ಅಭಿನಂದನೀಯವಾದುದು ಎಂದರು. ಗಿರೀಶ ಅಂಬಿಗೇರ ಹಾಗೂ ವಿದ್ಯಾರ್ಥಿಗಳು ಈ ಸಂದಭದಲ್ಲಿದ್ದರು.