ಕೊಪ್ಪಳ ಜಿಲ್ಲೆಯಲ್ಲಿ ಶಾಲಾ ಪ್ರಾರಂಭೋತ್ಸವ, ಮಕ್ಕಳ ಸಂಭ್ರಮ

| Published : Jun 01 2024, 12:45 AM IST

ಕೊಪ್ಪಳ ಜಿಲ್ಲೆಯಲ್ಲಿ ಶಾಲಾ ಪ್ರಾರಂಭೋತ್ಸವ, ಮಕ್ಕಳ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ಜಿಲ್ಲೆಯಾದ್ಯಂತ ಶಾಲಾ ಪ್ರಾರಂಭೋತ್ಸವ ನಡೆಯಿತು. ಹಲವೆಡೆ ವಿದ್ಯಾರ್ಥಿಗಳಿಗೆ ಹೂವು ನೀಡಿ ಸ್ವಾಗತಿಸಲಾಯಿತು. ಶಾಲೆಗಳಲ್ಲಿ ರಂಗೋಲಿ ಹಾಕಲಾಗಿತ್ತು. ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.

ಕೊಪ್ಪಳ: ಶಾಲಾ ಪ್ರಾರಂಭೋತ್ಸವ ನಿಮಿತ್ತ ಜಿಲ್ಲಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಮೊದಲ ದಿನವಾಗಿದ್ದರಿಂದ ಮಕ್ಕಳು ಉತ್ಸಾಹದಿಂದಲೇ ಆಗಮಿಸಿದ್ದರು.

ಜಿಲ್ಲಾದ್ಯಂತ ಪ್ರತಿಯೊಂದು ಶಾಲೆಯಲ್ಲಿಯೂ ಪ್ರಾರಂಭೋತ್ಸವ ನಿಮಿತ್ತ ಸಕಲ ಸಿದ್ಧತೆ ಮಾಡಿಕೊಂಡು, ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಕೆಲವೊಂದು ಶಾಲೆಯಲ್ಲಿ ಮಕ್ಕಳಿಗೆ ಹೂ ಕೊಟ್ಟು ಸ್ವಾಗತ ಮಾಡಿದರೆ ಮತ್ತೆ ಕೆಲವು ಶಾಲೆಗಳಲ್ಲಿ ರಂಗೋಲಿ ಹಾಕಿ ಬರಮಾಡಿಕೊಂಡರು. ಇನ್ನು ಕೆಲವು ಶಾಲೆಗಳಲ್ಲಿ ಶಿಕ್ಷಕರು ಸ್ವಾಗತಕಾರರಂತೆ ನಿಂತು ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಳ್ಳುತ್ತಿರುವುದು ಕಂಡು ಬಂದಿತು.

ಶಾಲೆಯ ಮೈದಾನ ಸ್ವಚ್ಛ ಮಾಡಿ, ಕೊಠಡಿಗಳಲ್ಲಿ ತಳಿರು-ತೋರಣ ಕಟ್ಟಿ, ಸಿದ್ಧ ಮಾಡಿಕೊಂಡಿದ್ದರು. ಅನೇಕ ಶಾಲೆಗಳಲ್ಲಿ ರಂಗೋಲಿ ಹಾಕಿರುವುದು ಕಂಡು ಬಂದಿತು.

ಸಮವಸ್ತ್ರ ವಿತರಣೆ: ಮೊದಲ ದಿನವೇ ಬಹುತೇಕ ಶಾಲೆಗಳಲ್ಲಿ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಪ್ರತಿ ಬಾರಿಯೂ ಶಾಲೆ ಪ್ರಾರಂಭವಾಗಿ ತಿಂಗಳಾದರೂ ದೊರೆಯದ ಪುಸ್ತಕ ಮತ್ತು ಸಮವಸ್ತ್ರ ಈ ಬಾರಿ ಶಾಲೆ ಪ್ರಾರಂಭವಾದ ಮೊದಲ ದಿನವೇ ದೊರೆತಿರುವುದು ಮಕ್ಕಳಲ್ಲಿನ ಸಂತಸವನ್ನು ಹೆಚ್ಚಿಸಿತ್ತು.

ಸಮವಸ್ತ್ರ ಮತ್ತು ಪಠ್ಯ ಪುಸ್ತಕ ನೀಡುವ ಕುರಿತು ಮೊದಲೇ ಮಾಹಿತಿ ನೀಡಿದ್ದರಿಂದ ಹಾಜರಾತಿಯೂ ಉತ್ತಮವಾಗಿಯೇ ಇತ್ತು. ಪ್ರತಿ ಶಾಲೆಯಲ್ಲಿಯೂ ಮಕ್ಕಳ ಸಂಖ್ಯೆ ಉತ್ತಮವಾಗಿಯೇ ಕಂಡು ಬಂದಿತು. ಸಾಮಾನ್ಯವಾಗಿ ಶಾಲೆ ಪ್ರಾರಂಭವಾಗಿ ವಾರ ಗತಿಸಿದರೂ ಮಕ್ಕಳು ಶಾಲೆಗೆ ಬರುವುದು ದುಸ್ತರ ಎನ್ನುವಂತೆ ಇತ್ತು. ಆದರೆ, ಈ ವರ್ಷ ಮಾತ್ರ ಹಾಜರಾತಿ ಉತ್ತಮವಾಗಿ ಇರುವುದು ಖುಷಿಯ ಸಂಗತಿ ಎನ್ನುತ್ತಾರೆ ಶಿಕ್ಷಕರು.

ಸಿಹಿ ವಿತರಣೆ: ಶಾಲಾ ಪ್ರಾರಂಭೋತ್ಸವ ನಿಮಿತ್ತ ಪ್ರತಿಯೊಂದು ಶಾಲೆಯಲ್ಲಿ ಬಿಸಿಯೂಟದಲ್ಲಿ ಸಿಹಿ ವಿತರಣೆ ಮಾಡಲಾಯಿತು. ಸಿಹಿತಿನಿಸು ನೀಡಿ, ಮಕ್ಕಳ ಸಂತಸವನ್ನು ಮತ್ತಷ್ಟು ಹೆಚ್ಚಿಸಲಾಯಿತು. ಅದರ ಜತೆಗೆ ಕೆಲವೊಂದು ಶಾಲೆಯಲ್ಲಿ ಶಿಕ್ಷಕರು ತಾವೇ ಸ್ವಂತ ಖರ್ಚಿನಲ್ಲಿ ಚಾಕಲೆಟ್ ಹಂಚಿರುವುದು ಕಂಡು ಬಂದಿತು. ಕೆಲವೊಂದು ಶಿಕ್ಷಕರು ಮಕ್ಕಳಿಗೆ ಪೆನ್ ಸಹ ನೀಡಿದ್ದಾರೆ. ಹೀಗೆ ಮಕ್ಕಳ ಸಂಭ್ರಮ ಹೆಚ್ಚಿಸಲು ಶಿಕ್ಷಕರು ಸಹ ಹಲವಾರು ಕ್ರಮಗಳನ್ನು ಕೈಗೊಂಡಿರುವುದು ಕಂಡು ಬಂದಿತು. ಇನ್ನು ಕೆಲವು ಶಿಕ್ಷಕರು ಮಕ್ಕಳ ಆಗಮನದ ವೇಳೆಯಲ್ಲಿ ಸ್ವಾಗತ ಗೀತೆ ಹಾಡಿದರೆ ಮತ್ತೆ ಕೆಲವು ಶಾಲೆಗಳಲ್ಲಿ ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದರು. ಹಾಡು, ಕುಣಿತ ಮಾಡಿ ಮಕ್ಕಳನ್ನು ಶಾಲೆಯತ್ತ ಸೆಳೆಯುವಂತೆ ಮಾಡಿದರು.ಮೊದಲ ದಿನವೇ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ನಿರೀಕ್ಷೆ ಮೀರಿ ಮಕ್ಕಳ ಹಾಜರಾತಿ ಕಂಡುಬಂದಿದೆ. ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲಾಗಿದೆ ಎಂದು ಕೊಪ್ಪಳ ಡಿಡಿಪಿಐ ಶ್ರೀಶೈಲ ಬಿರಾದರ ಹೇಳಿದರು.