ಶಾಲೆಗಳು ಬದುಕಿನ ಸಾಕ್ಷಾತ್ಕಾರದ ಪ್ರಯೋಗ ಶಾಲೆಗಳು: ಶಿಗ್ಗಾವಿ

| Published : Jan 21 2024, 01:35 AM IST

ಶಾಲೆಗಳು ಬದುಕಿನ ಸಾಕ್ಷಾತ್ಕಾರದ ಪ್ರಯೋಗ ಶಾಲೆಗಳು: ಶಿಗ್ಗಾವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರಿನ ಗುರುಭವನದಲ್ಲಿ ಶನಿವಾರ ರಾಜ್ಯ ಖಾಸಗಿ ಶಿಕ್ಷಕರ ಬಳಗದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಿಕ್ಷಣ ರತ್ನ ಪುರಸ್ಕಾರ ಸಮಾರಂಭ ನಡೆಯಿತು. ಹಲವು ಶಿಕ್ಷಕರಿಗೆ ಸಂಡೂರು ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಂಡೂರು: ಶಾಲೆಗಳು ಬದುಕಿನ ಸಾಕ್ಷಾತ್ಕಾರದ ಪ್ರಯೋಗ ಶಾಲೆಗಳು. ಶಿಕ್ಷಣ ಕಾಮಧೇನು ಹಾಗೂ ಕಲ್ಪವೃಕ್ಷ. ವಿದ್ಯಾರ್ಥಿಗಳ ಬದುಕು ರೂಪಿಸುವವರೆ ಗುರುಗಳು ಎಂದು ನಿವೃತ್ತ ಉಪನ್ಯಾಸಕ ಸಿ.ಎಂ. ಶಿಗ್ಗಾವಿ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ರಾಜ್ಯ ಖಾಸಗಿ ಶಿಕ್ಷಕರ ಬಳಗದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಿಕ್ಷಣ ರತ್ನ ಪುರಸ್ಕಾರ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.

ಗುರುಗಳು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕಾರ್ಯ ಶಿಕ್ಷಕರ ಮೇಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ೨೦ನೇ ಶತಮಾನದಲ್ಲಿಯೇ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಕೆಎಲ್ಇ, ವಿ.ವಿ. ಸಂಘ, ಬಿ.ಎಲ್.ಡಿ. ಸಂಸ್ಥೆ, ಸಿದ್ಧಗಂಗ, ಸುತ್ತೂರು ಮಠ ಮುಂತಾದವು ಶೈಕ್ಷಣಿಕ ಕ್ರಾಂತಿಯನ್ನು ಉಂಟು ಮಾಡಿದವು. ಸರ್ಕಾರಿ ಶಾಲೆಗಳು ಹೈಟೆಕ್ ಆಗುತ್ತಿರುವುದು ಖಾಸಗಿ ಶಾಲೆಗಳಿಗೆ ಎಚ್ಚರಿಕೆ ಘಂಟೆಯಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೈಟೆಕ್ ಆಗಬೇಕಿದೆ. ಸರ್ಕಾರ ಖಾಸಗಿ ಶಾಲೆಗಳು ಮತ್ತು ಅಲ್ಲಿನ ಶಿಕ್ಷಕರ ಬಗ್ಗೆಯೂ ಗಮನ ಹರಿಸಬೇಕು ಎಂದರು.

ಅನುದಾನ ನೀಡಲು ಮನವಿ: ತಾಲೂಕು ಅನುದಾನ ರಹಿತ ಆಡಳಿತ ಮಂಡಳಿಗಳ ಸಂಘ ಹಾಗೂ ಖಾಸಗಿ ಶಿಕ್ಷಕರ ಬಳಗದ ವತಿಯಿಂದ ಶಾಸಕರ ಆಪ್ತ ಕಾರ್ಯದರ್ಶಿ ಎಸ್.ವಿ. ಹಿರೇಮಠ್ ಅವರ ಮೂಲಕ ಶಾಸಕ ಈ. ತುಕಾರಾಂ ಅವರಿಗೆ ಮನವಿ ಸಲ್ಲಿಸಲಾಯಿತು. ೧೯೯೫ರ ಆನಂತರ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನವನ್ನು ನೀಡಬೇಕು. ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಖಾಸಗಿ ಶಾಲಾ ಶಿಕ್ಷಕರಿಗೂ ನೀಡುವಂತೆ ಶಿಫಾರಸು ಮಾಡಬೇಕು ಹಾಗೂ ತಾಲೂಕಿನಲ್ಲಿಯ ಖಾಸಗಿ ಶಾಲಾ ಶಿಕ್ಷಕರಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಅಥವ ಬೇರೆ ಇನ್ನಾವುದಾದರೂ ನಿಧಿಯಿಂದ ಪ್ರೋತ್ಸಾಹ ಧನವನ್ನು ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ಕೋರಲಾಯಿತು.

ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಷಡಾಕ್ಷರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಬಿಕೆಜಿ ಕಂಪನಿಯ ಮಾಲೀಕ ಬಿ. ನಾಗನಗೌಡ, ಶಾಸಕರ ಆಪ್ತ ಕಾರ್ಯದರ್ಶಿ ಎಸ್.ವಿ. ಹಿರೇಮಠ್ ಅವರು ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು.

ಖಾಸಗಿ ಶಿಕ್ಷಕರ ಬಳಗದ ವತಿಯಿಂದ ಖಾಸಗಿ ಶಾಲೆಗಳ ಹಲವು ಶಿಕ್ಷಕರಿಗೆ ಸಂಡೂರು ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಗಣ್ಯರು ಖಾಸಗಿ ಶಿಕ್ಷಕರ ಬಳಗದ ವತಿಯಿಂದ ಹೊರತರಲಾದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಸಂಘದ ಅಧ್ಯಕ್ಷ ಟಿ.ಎಂ. ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಜಿ.ಎಚ್. ಹನುಮೇಶ್ ಕುಮಾರ್ ಪ್ರಾರ್ಥಿಸಿದರು. ನೀಲಕಂಠಾಚಾರಿ ಕಮ್ಮಾರ್ ಸ್ವಾಗತಿಸಿದರು. ಪರಶುರಾಮ್, ಕೆ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಕೆ. ಹುಲುಗಪ್ಪ ವಂದಿಸಿದರು.

ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಕೆ. ಕುಮಾರಸ್ವಾಮಿ, ಕಾರ್ಯದರ್ಶಿ ಬಿ.ಎಂ. ಮಹಾಂತೇಶ್, ವಿವಿಧ ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕೆ., ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ ಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುದೇವಯ್ಯ, ಖಾಸಗಿ ಶಿಕ್ಷಕರ ಬಳಗದ ನಿಕಟಪೂರ್ವ ಅಧ್ಯಕ್ಷ ಫಿರೋಜ್, ಹಾಲಿ ಪದಾಧಿಕಾರಿಗಳಾದ ಡಿ.ಬಿ. ಶಿವಕುಮಾರ್, ಪಿ. ಈರಣ್ಣ, ದಿವಾಕರ್, ಪ್ರಶಾಂತ್, ಎಚ್. ಮಹೇಶ್, ಕೆ. ತಿಪ್ಪೇಸ್ವಾಮಿ, ರಮೇಶ್, ಎ.ಕೆ. ಹುಲುಗಪ್ಪ, ಅನಿಲ್‌ಕುಮಾರ್, ಎಂ.ಡಿ. ರಮೇಶ್, ಕೆ. ದೀಪಿಕಾ, ಪ್ರೇಮಲತಾ, ಎಂ. ಗಾಯತ್ರಿ, ವಿವಿಧ ಖಾಸಗಿ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.