ವಿದ್ಯಾರ್ಥಿಗಳ ಸ್ವಾಗತಕ್ಕಾಗಿ ಸಿದ್ದಗೊಂಡ ಶಾಲೆಗಳು

| Published : May 30 2024, 12:50 AM IST / Updated: May 30 2024, 12:51 AM IST

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಎಲ್ಲೆಡೆ ಸರ್ಕಾರಿ ಶಾಲೆಗಳು ಮೇ 31ರಿಂದ ಪ್ರಾರಂಭವಾಗಲಿದ್ದು, ಅದಕ್ಕೆ ಪೂರಕವಾಗಿ ಶಾಲೆ ಶಿಕ್ಷಕರು ಮತ್ತು ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನಾಳೆಯಿಂದ ಶಾಲೆಗಳು ಆರಂಭ, ಮೊದಲ ದಿನವೇ ಸಮವಸ್ತ್ರ, ಪುಸ್ತಕಗಳ ವಿತರಣೆಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಎಲ್ಲೆಡೆ ಸರ್ಕಾರಿ ಶಾಲೆಗಳು ಮೇ 31ರಿಂದ ಪ್ರಾರಂಭವಾಗಲಿದ್ದು, ಅದಕ್ಕೆ ಪೂರಕವಾಗಿ ಶಾಲೆ ಶಿಕ್ಷಕರು ಮತ್ತು ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ಆದೇಶದಂತೆ ಮೇ 29ರಿಂದಲೇ ಶಿಕ್ಷಕರು ಮತ್ತು ಸಿಬ್ಬಂದಿ ಸೇವೆಗೆ ಹಾಜರಾಗಿ, ಶಾಲಾ ಸ್ವಚ್ಛತೆಯಿಂದ ಹಿಡಿದು ಶಾಲಾ ಪ್ರಾರಂಭೋತ್ಸವದವರೆಗಿನ ತಯಾರಿ ಮಾಡಿಕೊಳ್ಳಬೇಕಾಗಿದೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮೇ 31ರಿಂದ ಎಲ್ಲ ತರಗತಿಗಳು ಪ್ರಾರಂಭವಾಗಲಿವೆ.

ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಮಾಡುವ ಮೂಲಕ ಹೆಚ್ಚೆಚ್ಚು ಮಕ್ಕಳು ತರಗತಿಗೆ ಹಾಜರಾಗುವಂತೆ ಮುಖ್ಯ ಶಿಕ್ಷಕರು ಹಾಗೂ ಸಿಆರ್‌ಪಿ, ಬಿಆರ್‌ಪಿಗಳಿಗೆ ಆಯಾ ಬಿಇಒಗಳು ಸಭೆ ಮೂಲಕ ಮಾರ್ಗದರ್ಶನ ಮಾಡಿದ್ದಾರೆ. ಅದರಂತೆ ಶಾಲೆ ಪ್ರಾರಂಭದ ಮೊದಲ ದಿನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಬಹುತೇಕ ಎಲ್ಲ ಶಾಲೆಗಳನ್ನು ತಳಿರು-ತೋರಣಗಳಿಂದ ಸಿಂಗಾರ ಮಾಡಲಾಗುತ್ತಿದೆ.

ಮಧ್ಯಾಹ್ನದ ಬಿಸಿ ಊಟದಲ್ಲಿ ಮಕ್ಕಳಿಗೆ ಸಿಹಿ ವಿತರಿಸುವ ವ್ಯವಸ್ಥೆಯನ್ನು ಶಾಲೆ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು (ಮೇ 29-30ರಂದು) ಶಾಲಾ ಆವರಣ ಹಾಗೂ ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕಪ್ಪು (ಬೋರ್ಡ್) ಹಲಗೆಗೆ ಬಣ್ಣ ಬಳಿಯುವುದು, ಶಾಲಾ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಸಂಗ್ರಹ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸಮವಸ್ತ್ರ ವಿತರಣೆ:

ತಾಲೂಕಿನಲ್ಲಿ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸಂಬಂದಪಟ್ಟಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಜೊತೆ ಸಮವಸ್ತ್ರ ಈಗಾಗಲೆ ಶಾಲೆಯ ಮುಖ್ಯಸ್ಥರ ಕೈನಲ್ಲಿ ತಲುಪಿಸಲಾಗಿದ್ದು ಶಾಲಾ ಆರಂಭದ ಮೊದಲ ದಿನವೆ ಮಕ್ಕಳ ಕೈನಲ್ಲಿ ಸೇರಲಿದ್ದು ಆಯಾ ಶಾಲೆಯ ಮುಖ್ಯ ಶಿಕ್ಷಕರು ಎಲ್ಲಾ ಮಕ್ಕಳಿಗೂ ಸಮವಸ್ತ್ರಗಳನ್ನು ತಲುಪಿಸುವ ಕಾರ್ಯವನ್ನು ಮಾಡಲಿದ್ದಾರೆ.

ಪಠ್ಯಪುಸ್ತಕ ಪೂರೈಕೆ:

ಕುಷ್ಟಗಿ ತಾಲೂಕಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಒಟ್ಟು 913890 ಪಠ್ಯಪುಸ್ತಕಗಳ ಬೇಡಿಕೆ ಇದ್ದು, ಈಗ ಅದರಲ್ಲಿ ಶೇ. 55ರಷ್ಟು ಮಾತ್ರ ಬಂದಿದೆ. ಸರ್ಕಾರದಿಂದ ಪೂರೈಕೆಯಾಗಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳ ಹಾಜರಾತಿಯ ಪ್ರಕಾರವಾಗಿ ಹಂಚಿಕೆ ಮಾಡುತ್ತಿದ್ದು, ಇನ್ನು ಶೇ. 45ರಷ್ಟು ಪಠ್ಯಪುಸ್ತಕಗಳು ಬರಬೇಕಾಗಿದೆ. ದಿನಂಪ್ರತಿಯಂತೆ ಪೂರೈಕೆಯಾಗುತ್ತಿದ್ದು ಜೂನ್ ಒಂದನೇ ವಾರದೊಳಗಡೆ ಎಲ್ಲ ವಿದ್ಯಾರ್ಥಿಗಳಿಗೂ ಪಠ್ಯಪುಸ್ತಕಗಳು ಕೈಸೇರಲಿವೆ ಎಂದು ಪಠ್ಯಪುಸ್ತಕದ ನೋಡಲ್ ಅಧಿಕಾರಿ ತಿಮ್ಮಣ್ಣ ಹಿರೇಹೊಳಿ ತಿಳಿಸಿದ್ದಾರೆ.

ವಿಶೇಷ ಆಂದೋಲನ:ಸರ್ಕಾರಿ ಶಾಲೆಗೆ ಹೆಚ್ಚಿನ ಮಕ್ಕಳ ದಾಖಲಾತಿಯ ಸಲುವಾಗಿ ಶಾಲೆ ಆರಂಭದ ಅಂಗವಾಗಿ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಹಾಗೂ ಸ್ಥಳೀಯರನ್ನು ಕರೆದುಕೊಂಡು ಜಾಗೃತಿ ಜಾಥಾವನ್ನು ಮೂಡಿಸುವ ಮೂಲಕವಾಗಿ ದಾಖಲಾತಿ ಆಂದೋಲನವನ್ನು ಮಾಡುವ ಮೂಲಕ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಾತಿ ಮಾಡಿಸಬೇಕಿದೆ.