ಹುಕ್ಕೇರಿಯಲ್ಲಿ ವೈಜ್ಞಾನಿಕ ತ್ಯಾಜ್ಯ ನೀರು ನಿರ್ವಹಣೆ..!

| Published : Nov 25 2024, 01:03 AM IST

ಹುಕ್ಕೇರಿಯಲ್ಲಿ ವೈಜ್ಞಾನಿಕ ತ್ಯಾಜ್ಯ ನೀರು ನಿರ್ವಹಣೆ..!
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಚ್ಛತೆ ಮತ್ತು ಶುಚಿತ್ವದಲ್ಲಿ ನೇರ ಪರಿಣಾಮ ಉಂಟು ಮಾಡುವ ಕೊಳಚೆ ಮತ್ತು ಚರಂಡಿಗಳ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಹುಕ್ಕೇರಿ ಪುರಸಭೆ ಮುಂದಾಗಿದೆ. ಇದರೊಂದಿಗೆ ಜಲಮೂಲಗಳ ಶುದ್ಧೀಕರಣಕ್ಕೆ ಮಹತ್ವದ ಹೆಜ್ಜೆ ಇಟ್ಟಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸ್ವಚ್ಛತೆ ಮತ್ತು ಶುಚಿತ್ವದಲ್ಲಿ ನೇರ ಪರಿಣಾಮ ಉಂಟು ಮಾಡುವ ಕೊಳಚೆ ಮತ್ತು ಚರಂಡಿಗಳ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಹುಕ್ಕೇರಿ ಪುರಸಭೆ ಮುಂದಾಗಿದೆ. ಇದರೊಂದಿಗೆ ಜಲಮೂಲಗಳ ಶುದ್ಧೀಕರಣಕ್ಕೆ ಮಹತ್ವದ ಹೆಜ್ಜೆ ಇಟ್ಟಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಸ್ಥಳೀಯ ಪುರಸಭೆ ಸಹಯೋಗದಲ್ಲಿ ತ್ಯಾಜ್ಯ ನೀರು ನಿರ್ವಹಣೆಗಾಗಿಯೇ ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ. ತನ್ಮೂಲಕ ಭವಿಷ್ಯದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅಂತರ್ಜಲ ಸಂಪೂರ್ಣ ಕಲುಷಿತಗೊಂಡು ನೀರಿನ ಸಮಸ್ಯೆ ತಲೆದೋರುವುದನ್ನು ತಡೆಯುವ ಮಹತ್ವಾಕಾಂಕ್ಷೆ ಹೊಂದಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯ ಅಮೃತ 2.0 ಯೋಜನೆಯಡಿ 2022ರಲ್ಲಿಯೇ ಮಂಜೂರಾದ ಒಳಚರಂಡಿ (ಯುಜಿಡಿ) ಕಾಮಗಾರಿ ಅನುಷ್ಠಾನಕ್ಕೆ ಇದೀಗ ಕಾಲ ಕೂಡಿ ಬಂದಿದೆ. ತ್ಯಾಜ್ಯ ಸಂಸ್ಕರಣಾ ಘಟಕ ಮತ್ತು ಪಂಪ್‌ವೆಲ್ ಘಟಕಗಳ ನಿರ್ಮಾಣಕ್ಕೆ ಬೇಕಾದ ನಿವೇಶನದ ಸಮಸ್ಯೆ ಇದೀಗ ನಿವಾರಣೆಯ ಅಂತಿಮ ಹಂತದಲ್ಲಿದೆ. ಹಾಗಾಗಿ ಈ ನಿಯೋಜಿತ ಒಳಚರಂಡಿ ಯೋಜನೆ ಶೀಘ್ರವೇ ಕಾರ್ಯಾರಂಭ ಆಗುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಹುಕ್ಕೇರಿ ಜನರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

ಅಂದಾಜು ₹69.26 ಕೋಟಿ ವೆಚ್ಚದ ಈ ಒಳಚರಂಡಿ ಯೋಜನೆ ಅಗತ್ಯ ನೀಲನಕ್ಷೆ ಸಿದ್ಧಪಡಿಸಲಾಗಿದೆ. ₹3.87 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನಿರ್ವಹಣೆ ಘಟಕ ಸೇರಿದಂತೆ ಒಳಚರಂಡಿ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೈದರಾಬಾದ್‌ನ ಸ್ಟ್ಯಾಂಡರ್ಡ್ ಇನ್ಪ್ರಾ ಸ್ಟ್ರಕ್ಚರ್ ಪ್ರೈ.ಲಿ.ಗೆ ಗುತ್ತಿಗೆ ನೀಡಲಾಗಿದೆ. ಹಲವು ಷರತ್ತುಗಳೊಂದಿಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿರುವುದರಿಂದ ಯೋಜನೆ ಅನುಷ್ಠಾನಕ್ಕೆ ಭರದ ಸಿದ್ಧತೆ ನಡೆದಿದೆ. ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿರ್ಮೂಲನಾ ಮಂಡಳಿ ಅದರ ಮೇಲ್ವಿಚಾರಣೆ ಹೊಣೆ ಹೊತ್ತಿದೆ.

ಪುರಸಭೆ ವ್ಯಾಪ್ತಿಯ ತ್ಯಾಜ್ಯ ನೀರನ್ನು ಒಂದೆಡೆ ಸಂಗ್ರಹಿಸಿ ಬಳಿಕ ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಲಾಗುವುದು. ಬಳಿಕ ಕಲುಷಿತ ನೀರು ಸಂಸ್ಕರಿಸಿ ಕೃಷಿ ಚಟುವಟಿಕೆಗಳಿಗೆ ಮರುಬಳಸಿಕೊಳ್ಳಲು ಮತ್ತು ಗೊಬ್ಬರ ತಯಾರಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ. ಇದರಿಂದ ಪುರಸಭೆಗೆ ಹೊಸ ರೂಪದ ಆದಾಯ ಬರುವ ಆಶಾಭಾವ ಮೂಡಿಸಿದೆ. ಜೊತೆಗೆ ನಗರ ಸೌಂದರ್ಯಕ್ಕೆ ಮತ್ತಷ್ಟು ಕಳೆ ಬರುವ ನಿರೀಕ್ಷೆಯಿದ್ದು, ಹೊಸ ಸಮಸ್ಯೆ ಸೃಷ್ಟಿಯಾಗುವುದನ್ನು ತಪ್ಪಿಸಲು ಪುರಸಭೆ ಮುಂದಡಿ ಇಟ್ಟಿದೆ.

ಸಾರ್ವಜನಿಕರು ದಿನಬಳಕೆಯ ನಿರುಪಯುಕ್ತ ವಸುಗಳನ್ನು ಚರಂಡಿಗಳಿಗೆ ಎಸೆಯುವುದು. ಕಲುಷಿತ ನೀರು ಸುಗಮವಾಗಿ ಹರಿದು ಹೋಗದೇ ಅಲ್ಲಲ್ಲಿ ನಿಂತು ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆಗೆ ಕಾರಣವಾಗುತ್ತಿದೆ. ಇದಕ್ಕೆಲ್ಲ ಪರಿಹಾರವಾಗಿ ವೈಜ್ಞಾನಿಕವಾಗಿ ತ್ಯಾಜ್ಯ ನೀರು ನಿರ್ವಹಿಸಲು ಒಳಚರಂಡಿ(ಯುಜಿಡಿ) ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ. ತ್ಯಾಜ್ಯ ನೀರು ಶುದ್ಧೀಕರಣದಿಂದ ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆ ತಡೆಗಟ್ಟುವಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ.

ಈಗಾಗಲೇ ಇರುವ ಚರಂಡಿಗಳ ನೂನ್ಯತೆ ಸರಿಪಡಿಸುವುದು, ಅವೈಜ್ಞಾನಿಕ ಚರಂಡಿಗಳ ಮರುನಿರ್ಮಾಣ, ಜನವಸತಿ ಪ್ರದೇಶದಲ್ಲಿ ಹೊಸದಾಗಿ ಪೈಪಲೈನ್ ಅಳವಡಿಸುವುದು ಒಂದು ಹಂತದ ಕಾಮಗಾರಿಯಾಗಿದ್ದರೆ, ಸರಾಗವಾಗಿ ತ್ಯಾಜ್ಯ ನೀರು ಹರಿದು ಹೋಗಲು ಸಮತಟ್ಟಾಗಿ ಪೈಪ್‌ಲೈನ್ ಅಳವಡಿಸುವುದು, ತ್ಯಾಜ್ಯ ಸಂಸ್ಕರಣ ಘಟಕ, ಕಲುಷಿತ ನೀರು ಶುದ್ಧೀಕರಣ ಘಟಕ, ಎಸ್‌ಟಿಪಿ, ಪಂಪಹೌಸ್ ಮತ್ತು ವೆಟ್‌ವೆಲ್ ನಿರ್ಮಾಣ ಕಾಮಗಾರಿಯೂ ಇದರ ಜತೆಗಿದೆ.

ತ್ಯಾಜ್ಯ ನೀರು ಶುದ್ಧೀಕರಣಕ್ಕೆ ಎಪಿಎಂಸಿ-ಕೃಷಿ ಇಲಾಖೆ ಬಳಿಯಲ್ಲಿ 3 ಗುಂಟೆ ನಿವೇಶನ ಮತ್ತು ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಮದಮಕ್ಕನಾಳ ರಸ್ತೆ ಬಳಿ 3 ಎಕರೆ ಜಾಗ ಗುರುತಿಸಲಾಗಿದೆ. ಕಲುಷಿತ ನೀರನ್ನು ಸಂಸ್ಕರಿಸುವ ಭಾಗವಾಗಿರುವುದರಿಂದ ಈ ಯೋಜನೆಗೆ ಮಹತ್ವ ಬಂದಿದೆ. ಬಹುನಿರೀಕ್ಷಿತ ಒಳಚರಂಡಿ ಯೋಜನೆ ಕಾರ್ಯರೂಪಕ್ಕೆ ಕ್ಷೇತ್ರದ ಶಾಸಕ ನಿಖಿಲ ಕತ್ತಿ, ಪುರಸಭೆ ಆಡಳಿತ ಮಂಡಳಿ, ಅಧಿಕಾರಿ-ಸಿಬ್ಬಂದಿ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಾಧಿಕಾರಿ ಐ.ಸಿ. ಸಿದ್ನಾಳ, ಕಿರಿಯ ಅಭಿಯಂತರ ರಾಜಶೇಖರ ಪಟ್ಟಣಶೆಟ್ಟಿ ತಿಳಿಸಿದ್ದಾರೆ.ಜಲಮೂಲಗಳ ಶುದ್ಧಿಕರಿಸುವಲ್ಲಿ ಒಳಚರಂಡಿ-ಯುಜಿಡಿ ಯೋಜನೆ ಮಹತ್ವದ್ದಾಗಿದೆ. ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ಶೀಘ್ರವೇ ಈ ಯೋಜನೆಯ ಕಾಮಗಾರಿಗಳನ್ನು ಆರಂಭಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು.

- ನಿಖಿಲ ಕತ್ತಿ ಶಾಸಕರುಕಲುಷಿತ ನೀರಿನ ಶುದ್ಧೀಕರಣ ಮತ್ತು ಸಂಸ್ಕರಣೆ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಹೊಸದಾಗಿ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಇದರಿಂದ ನಗರದಲ್ಲಿ ಶುಚಿತ್ವ ಮತ್ತು ಸ್ವಚ್ಛತೆ ಕಾಣಲಿದೆ.

-ಇಮ್ರಾನ್ ಮೋಮಿನ್, ಪುರಸಭೆ ಅಧ್ಯಕ್ಷರು