ಸುಡು ಬಿಸಿಲು: ವಿದ್ಯುತ್‌ ಬೇಡಿಕೆಯೂ ಹೆಚ್ಚು!

| Published : Mar 28 2025, 12:30 AM IST

ಸಾರಾಂಶ

ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ, ಗದಗ ಹೀಗೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ದೊಡ್ಡ ನಿಗಮ ಹೆಸ್ಕಾಂ. ಕೈಗಾರಿಕೆ, ರೈತರ ಪಂಪ್‌ ಸೆಟ್‌, ಗೃಹಬಳಕೆ ಹೀಗೆ ಮೂರು ಬಗೆಯಲ್ಲಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ

ಶಿವಾನಂದ ಗೊಂಬಿ ಹುಬ್ಬಳ್ಳಿ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿರು ಬಿಸಿಲು ಜನರ ನೆತ್ತಿ ಸುಡುವ ಜತೆ ಜತೆಗೆ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಸರಿಸುಮಾರು 10-15 ಮಿಲಿಯನ್‌ ಯುನಿಟ್‌ನಷ್ಟು ಪ್ರತಿನಿತ್ಯ ಬೇಡಿಕೆ ಹೆಚ್ಚಾಗಿದೆ. ಲೋಡ್‌ ಶೆಡ್ಡಿಂಗ್‌ ಮಾಡುವುದಿಲ್ಲ ಎಂದು ಹೇಳುವ ಹೆಸ್ಕಾಂ, ಅನಧಿಕೃತವಾಗಿ ವಿದ್ಯುತ್‌ ಕಡಿತ ಮಾಡುತ್ತಿದೆ ಎಂಬುದು ಸಾಮಾನ್ಯ ಆರೋಪ. ಬೇಡಿಕೆ ತಕ್ಕಂತೆ ಪೂರೈಕೆ ಮಾಡಲು ಹೆಸ್ಕಾಂಗೆ ದೊಡ್ಡ ಸವಾಲಿನ ಕೆಲಸವಾಗಿದೆ.

ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ, ಗದಗ ಹೀಗೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ದೊಡ್ಡ ನಿಗಮ ಹೆಸ್ಕಾಂ. ಕೈಗಾರಿಕೆ, ರೈತರ ಪಂಪ್‌ ಸೆಟ್‌, ಗೃಹಬಳಕೆ ಹೀಗೆ ಮೂರು ಬಗೆಯಲ್ಲಿ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ವಿಭಾಗದಲ್ಲೂ ವಿದ್ಯುತ್‌ ಬೇಡಿಕೆ ಇದೀಗ ಹೆಚ್ಚಾಗಿದೆ.

ಎಷ್ಟು ಹೆಚ್ಚಾಗಿದೆ?: ಏಳು ಜಿಲ್ಲೆಗಳಲ್ಲಿ ಸೇರಿ ಮೊದಲು ಚಳಿಗಾಲದಲ್ಲಿ (ಡಿಸೆಂಬರ್‌- ಜನವರಿ ಅರ್ಧ ಭಾಗ) ಪ್ರತಿನಿತ್ಯದ ಬೇಡಿಕೆ 53- 54 ಮಿಲಿಯನ್‌ ಯುನಿಟ್‌ ಇತ್ತು. ಆದರೆ ಜನವರಿ 3ನೆಯ ವಾರದಿಂದ ಸಣ್ಣದಾಗಿ ಬೇಡಿಕೆ ಹೆಚ್ಚಾಗುತ್ತಾ ಸಾಗಿದೆ. ಫೆಬ್ರವರಿ ಅಂತ್ಯದಲ್ಲಿ 64-65 ಮಿಲಿಯನ್‌ ಯುನಿಟ್‌ ಬೇಡಿಕೆ ಹೆಚ್ಚಾಗಿದೆ. ಮಾರ್ಚ್‌ ಮಾಹೆಯಲ್ಲಂತೂ ಇದು ಇನ್ನೂ ಹೆಚ್ಚಾಗಿದೆ. 70ರ ಆಸುಪಾಸು ಕೂಡ ಸಾಗಿದೆ. ಆದರೆ ಇದರ ನಿಖರ ಲೆಕ್ಕ ಮಾರ್ಚ್‌ ತಿಂಗಳು ಮುಗಿದ ಮೇಲೆ ಸಿಗುತ್ತದೆ ಎಂದು ಹೆಸ್ಕಾಂ ಮೂಲಗಳು ತಿಳಿಸುತ್ತವೆ.

ಏಕೆ ಹೆಚ್ಚಳ: ಒಂದೆಡೆ ಬಿರು ಬಿಸಿಲಿ ತಾಪದಿಂದ ಮೈಮೇಲೆ ನೀರು ಇಳಿಯುತ್ತಲೇ ಇರುತ್ತವೆ. ಈ ವೇಳೆ ಹವಾನಿಯಂತ್ರಿತ ಯಂತ್ರ, ಏರ್‌ ಕೂಲರ್‌, ಫ್ಯಾನ್‌ ಬಳಕೆ ನಿರಂತರವಾಗಿರುತ್ತದೆ. ಹೀಗಾಗಿ ಗೃಹ ಬಳಕೆಯ ವಿದ್ಯುತ್‌ ಬೇಡಿಕೆ ಹೆಚ್ಚಾಗುತ್ತದೆ. ಇನ್ನು ಹೊಲದಲ್ಲಿ ನೀರು ಹಾಯಿಸಿದ ಕೆಲ ಗಂಟೆಗಳಲ್ಲೇ ಭೂಮಿ ಒಣಗಿರುತ್ತದೆ. ಹೀಗಾಗಿ ಪದೇ ಪದೇ ಪಂಪ್‌ಸೆಟ್‌ ಹಚ್ಚಿ ನೀರು ಹಾಯಿಸಬೇಕಾಗುತ್ತದೆ. ಈ ಕಾರಣದಿಂದ ಪಂಪ್‌ಸೆಟ್‌ ಬಳಕೆಗೂ ವಿದ್ಯುತ್‌ ಬೇಡಿಕೆ ಹೆಚ್ಚಾಗುತ್ತದೆ. ಕೈಗಾರಿಕೆಗಳಲ್ಲೂ ಇದೀಗ ವಿದ್ಯುತ್‌ ಬೇಡಿಕೆ ಹೆಚ್ಚಾಗುತ್ತದೆ. ಅಲ್ಲೂ ಯಂತ್ರಗಳನ್ನು ಕೂಲಾಗಿ ಇರಿಸಿಕೊಳ್ಳಲು ಎಸಿ, ಕೂಲರ್‌ಗಳ ಬಳಕೆಯೂ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಅನಧಿಕೃತ ಲೋಡ್‌ ಶೆಡ್ಡಿಂಗ್‌?: ರೈತರಿಗೆ ಪಂಪ್‌ಸೆಟ್‌ಗಾಗಿ ಏಳು ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡಲಾಗುತ್ತದೆ. ಒಂದೊಂದು ಜಿಲ್ಲೆ, ಒಂದೊಂದು ಸೆಕ್ಷನ್‌ ಕಚೇರಿಗಳಲ್ಲಿ ಅದರ ಸಮಯ ಬೇರೆ ಬೇರೆಯಾಗಿರುತ್ತದೆ. ಏಳು ಗಂಟೆಗಳ ಕಾಲವಂತೂ ನಿರಂತರವಾಗಿ ತ್ರೀಫೆಸ್‌ ವಿದ್ಯುತ್‌ ಪೂರೈಕೆ ಮಾಡಲಾಗುತ್ತದೆ ಎಂದು ಹೆಸ್ಕಾಂ ತಿಳಿಸುತ್ತದೆ. ಆದರೆ ಹೆಸ್ಕಾಂ ಹೇಳುವಂತೆ ಏಳು ಗಂಟೆಗಳ ಕಾಲ ತ್ರೀಫೆಸ್‌ ಪೂರೈಕೆಯಾಗಲ್ಲ. ಕೆಲ ಕಡೆಗಳಲ್ಲಿ ನಾಲ್ಕೈದು ಗಂಟೆ ಮಾತ್ರ ವಿದ್ಯುತ್‌ ಪೂರೈಕೆ ಮಾಡಲಾಗುತ್ತದೆ ಎಂಬುದು ರೈತರ ಗೋಳು.

ಇನ್ನು ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ನ್ನಂತೂ ಹೆಸ್ಕಾಂ ಮಾಡುತ್ತಿಲ್ಲ. ಆದರೆ ಬೇಡಿಕೆ ಹೆಚ್ಚಾಗುವುದರಿಂದ ಒತ್ತಡ ಹೆಚ್ಚಾಗಿ ಕೆಲವೆಡೆ ಆಗಾಗ ಅರ್ಧಗಂಟೆಯೋ, ಒಂದು ಗಂಟೆಯೋ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ಲೋಡ್‌ ಶೆಡ್ಡಿಂಗ್ ನಾವು ಮಾಡುತ್ತಿಲ್ಲ. ಹೆಸ್ಕಾಂ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್‌ ಪೂರೈಕೆ ಮಾಡುತ್ತಿದೆ ಎಂಬುದು ಅಧಿಕಾರಿಗಳ ಅಂಬೋಣ.

ಒಟ್ಟಿನಲ್ಲಿ ಬಿರುಬಿಸಿಲಿನಿಂದಾಗಿ ಹೆಸ್ಕಾಂಗೆ ವಿದ್ಯುತ್‌ ಬೇಡಿಕೆಯೂ ಹೆಚ್ಚಾಗಿರುವುದಂತೂ ಸತ್ಯ. ಸದ್ಯ ಏನೋ ಹೇಗೋ ಮ್ಯಾನೇಜ್‌ ಮಾಡಲಾಗುತ್ತದೆ. ಆದರೆ ಏಪ್ರಿಲ್‌ ಮೇನಲ್ಲಿ ಬೇಡಿಕೆ ಪ್ರಮಾಣ ಹೆಚ್ಚಾಗುವುದು ಗ್ಯಾರಂಟಿ. ಆಗ ನಿಭಾಯಿಸುವುದು ಇನ್ನಷ್ಟು ಕಷ್ಟವಾಗುವುದಂತೂ ಸತ್ಯ.

ಎಷ್ಟೆಷ್ಟು ಬೇಡಿಕೆ (ಮಿಲಿಯನ್‌ ಯೂನಿಟ್‌ನಲ್ಲಿ)

ಪ್ರವರ್ಗ ಡಿಸೆಂಬರ್‌ ಜನವರಿ ಫೆಬ್ರವರಿ (28 ದಿನ)

ಕೈಗಾರಿಕೆ- 130.06 130.57 129.67

ಗೃಹ ಬಳಕೆ 184.11 177.17180.95

ಪಂಪ್‌ ಸೆಟ್‌636.80 678.06 776.06