ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಟ

| Published : Mar 20 2024, 01:16 AM IST

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಮಲೆನಾಡಿನ ಚಿರಾಪುಂಜಿ ಖ್ಯಾತಿಯ ಹೊಸನಗರ ತಾಲೂಕಿನಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ. ಕುಮದ್ವತಿ ಮತ್ತು ಶರ್ಮಿಣಾವತಿ ನದಿಗಳ ಬರಿದಾಗಿವೆ. ನದಿಗಳು ಬತ್ತಿದ ಪರಿಣಾಮ ಕೆರೆ-ಕಟ್ಟೆಗಳು, ಕೊಳವೆಬಾವಿ ಹಾಗೂ ತೆರೆದ ಬಾವಿಗಳು ಸಹ ತಳಕಂಡಿವೆ. ಶುದ್ಧ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ಪರದಾಡುವಂತಾಗಿದೆ. ಇದರಿಂದ ರಿಪ್ಪನ್‌ಪೇಟೆ ವ್ಯಾಪ್ತಿ ಗ್ರಾಮಗಳೂ ಹೊರತಾಗಿಲ್ಲ.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಮಲೆನಾಡಿನ ಚಿರಾಪುಂಜಿ ಖ್ಯಾತಿಯ ಹೊಸನಗರ ತಾಲೂಕಿನಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ. ಕುಮದ್ವತಿ ಮತ್ತು ಶರ್ಮಿಣಾವತಿ ನದಿಗಳ ಬರಿದಾಗಿವೆ. ನದಿಗಳು ಬತ್ತಿದ ಪರಿಣಾಮ ಕೆರೆ-ಕಟ್ಟೆಗಳು, ಕೊಳವೆಬಾವಿ ಹಾಗೂ ತೆರೆದ ಬಾವಿಗಳು ಸಹ ತಳಕಂಡಿವೆ. ಶುದ್ಧ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳು ಪರದಾಡುವಂತಾಗಿದೆ. ಇದರಿಂದ ರಿಪ್ಪನ್‌ಪೇಟೆ ವ್ಯಾಪ್ತಿ ಗ್ರಾಮಗಳೂ ಹೊರತಾಗಿಲ್ಲ.

ಕಳೆದ ಮುಂಗಾರು ಸರಾಸರಿ ಮಳೆ ಪ್ರಮಣ ಕಡಿಮೆಯಾಗಿದ್ದು, ವಾಡಿಕೆಗಿಂತ ಶೇ.32ರಷ್ಟು ಕೊರತೆ ಎದುರಾಗಿದೆ. ಹಿಂಗಾರು ಮಳೆಯೂ ಕೈಕೊಟ್ಟಿರುವುದೇ ಈಗ ಬರದ ಛಾಯೆಗೆ ಪ್ರಮುಖ ಕಾರಣವಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಚಿರಾಪುಂಜಿ ಎಂದೇ ಖ್ಯಾತಿ ಪಡೆದಿರುವ ಹೊಸನಗರ ತಾಲೂಕಿನ ಮಲೆನಾಡು ಕೃಷಿ ಚಟುವಟಿಕೆಗಳ ಮೇಲೂ ತೀವ್ರ ಪರಿಣಾಮ ಉಂಟಾಗಿದೆ. ಜನ, ಜಾನುವಾರುಗಳಿಗೂ ಕುಡಿಯಲು ಶುದ್ಧ ಕುಡಿಯುವ ನೀರು ಮರೀಚೆಕೆಯಾಗಿದೆ.

ಅಂತರ್ಜಲ ಕೊರತೆ ಅಲ್ಪಾವಧಿ ಹಾಗೂ ದೀರ್ಘಾವಧಿ ಬೆಳೆಗಳ ಕುಂಠಿತಗೊಳಿಸಿದೆ. ಈ ಭಾಗದಲ್ಲಿ ಫೆಬ್ರವರಿ 10ರಿಂದ ಪ್ರತಿನಿತ್ಯ ಹಗಲು ನಿರಂತರವಾಗಿ 34 ರಿಂದ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಸಾರ್ವಜನಿಕರು ರೈತ ನಾಗರಿಕರು ಬಿಸಿಲಿನ ಝಳಕ್ಕೆ ತತ್ತರಿಸುತ್ತಿದ್ದಾರೆ. ಮಳೆಗಾಗಿ ಮುಗಿಲು ನೋಡುವಂತಾಗಿದೆ.

ಕುಮದ್ವತಿಯ ನದಿ ತಟದ ವ್ಯಾಪ್ತಿಯ ಅಮೃತ, ಹೆದ್ದಾರಿಪುರ, ಬೆಳ್ಳೂರು, ಅರಸಾಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಹೊಗಳಿಕೆಮ್ಮನ ಕೆರೆ ನೀರು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಕೃಷಿ ಜಮೀನಿಗೆ ಅಧಾರವಾಗಿದೆ. ಇದೇ ನೀರನ್ನು ಕಾನುಗೋಡು ಗ್ರಾಮದ ಹಲವಾರು ಕುಟುಂಬದವರು ನಿತ್ಯ ಮನೆ ಬಳಕೆಗೆ ಉಪಯೋಗಿಸುತ್ತಿದ್ದಾರೆ. ಅರಸಾಳು ಗ್ರಾಮ ಪಂಚಾಯಿತಿ ನಲ್ಲಿಗಳ ಸಂಪರ್ಕ ಕಲ್ಪಿಸಿದ್ದರೂ ಇದುವರೆಗೂ ಹನಿ ನೀರು ಕಂಡಿಲ್ಲ ಎನ್ನುತ್ತಾರೆ ಗ್ರಾಮಸ್ಥ ನಾಗರಾಜ ಕೃಷ್ಣಮೂರ್ತಿ.

ಈ ಹಿಂದಿನಿಂದಲೂ ಆರ್ಧ ಕಿಲೋಮೀಟರ್ ದೂರದ ತಮ್ಮ ಜಮೀನಿನ ಕೃಷಿ ಹೊಂಡದ ನೀರನ್ನು ತಂದು ಸೋಸಿ, ಮನೆಗೆ ಬಳಸುತ್ತಿದ್ದೇವೆ. ಗ್ರಾಮದಲ್ಲಿ 17 ಕೊಳವೆಬಾವಿಗಳಲ್ಲಿ ಕೇವಲ ಕೆಲವು ಕೊಳವೆಬಾವಿಗಳಲ್ಲಿ ಅಲ್ಪಪ್ರಮಾಣದ ನೀರು ದೊರೆಯುತ್ತಿದೆ. ಉಳಿದಂತೆ ಬೋರ್‌ಗಳಲ್ಲಿ ಅಂತರ್ಜಲ ಬತ್ತಿದೆ ಎಂದರು.

ಮಳೆಯು ಮಾರ್ಚ್‌ ಅಂತ್ಯದೊಳಗೆ ಬಾರದಿದ್ದರೆ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿ ಜಲಕ್ಷಾಮ ಎದುರಾಗುವುದು. ಜನ-ಜಾನುವಾರು ಕುಡಿಯುವ ನೀರಿಗಾಗಿ ಸಾಕಷ್ಟು ಘೋರ ಸಮಸ್ಯೆ ಎದುರಿಸುವ ಕಾಲ ದೂರವಿಲ್ಲ ಎಂಬ ಆತಂಕ ಕಾಡುತ್ತಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪ, ಜಿ.ಕೆ.ಅನಂತ ಶಾಸ್ತ್ರಿ, ಜೆ.ಎಸ್.ಚಂದ್ರಪ್ಪ. ಎಲ್ಲದಕ್ಕೂ ಮಳೆಯೊಂದೇ ಪರಿಹಾರ. ಹಾಗಾಗಿ, ಜನತೆ ಮುಗಿಲತ್ತ ನೋಡುತ್ತಿದ್ದಾರೆ.

- - -

ಬಾಕ್ಸ್‌

ಟ್ಯಾಂಕರ್ ನೀರಿಗೆ ತಹಸೀಲ್ದಾರ್‌ಗೆ ಪತ್ರ

ಈಗಾಗಲೇ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ, ಮಜರೆ ಹಳ್ಳಿಗಳಲ್ಲಿ ಮತ್ತು ಹಾರೋಹಿತ್ತಲು ಕಾನುಗೋಡು ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ಎದುರಾಗಿದೆ. ಸಮಸ್ಯೆ ಎದುರಿಸುತ್ತಿರುವ ಈ ಗ್ರಾಮಗಳಿಗೆ ಖಾಸಗಿ ಬಾಡಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಅನುಮತಿಗಾಗಿ ತಹಸೀಲ್ದಾರರಿಗೆ ಪತ್ರ ಬರೆಯಲಾಗಿದೆ ಎಂದು ಅರಸಾಳು ಗ್ರಾಮ ಪಂಚಾಯಿತಿ ಪಿಡಿಒ ತಿಳಿಸಿದ್ದಾರೆ.

- - -

ಕೋಟ್‌ಕೆಲವು ಬೋರ್‌ಗಳಲ್ಲಿ ನೀರು ಇದ್ದರೂ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಅಡಕೆ ತೋಟಗಳು ಬಿಸಿಲ ಝಳಕ್ಕೆ ಒಣಗುತ್ತಿವೆ. ಸರ್ಕಾರ ರೈತರಿಗೆ ನಿರಂತರ ವಿದ್ಯುತ್ ಪೂರೈಸಬೇಕು

- ರಘುಪತಿ, ರೈತ, ಬಸವಾಪುರ

- - -

-19ಆರ್‌ಪಿಟಿ1ಪಿ: ಕಾನುಗೂಡು ರೈತ ಕುಟುಂಬ ಸದಸ್ಯರು ಕಿ.ಮೀ. ದೂರ ಕೃಷಿ ಹೊಂಡದಿಂದ ನೀರು ಸಂಗ್ರಹಿಸಿ ತರುತ್ತಿರುವುದು.