ಶಿಲ್ಪಕಲೆ ದೇಶದ ಸಂಸ್ಕೃತಿಯ ಪ್ರತೀಕ

| Published : Jan 05 2024, 01:45 AM IST

ಸಾರಾಂಶ

ಶಿಲ್ಪಿಗಳು ದೇಶ ಹಾಗೂ ಈ ನಾಡಿನ ಸಂಸ್ಕೃತಿ, ರಾಜಕೀಯ, ಶೈಕ್ಷಣಿಕ ಮೂಲ ಪರಂಪರೆಗಳನ್ನು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಸೆರೆಹಿಡಿದಿಟ್ಟಿದ್ದಾರೆ. ಅಂತಹ ಶಿಲ್ಪಿಗಳಲ್ಲಿ ಅಮರಶಿಲ್ಪಿ ಜಕಣಾಚಾರಿಯವರು ಪ್ರಮುಖರಾಗಿದ್ದಾರೆ.

ಹೊಸಪೇಟೆ: ಶಿಲ್ಪಕಲೆಯು ದೇಶದ ಸಂಸ್ಕೃತಿ ಹಾಗೂ ಹೆಮ್ಮೆಯಾಗಿದ್ದು, ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ ಎಂದು ನಿವೃತ್ತ ಉಪನ್ಯಾಸಕ ನಾಗರಾಜ ಪತ್ತಾರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೊಸಪೇಟೆ ನಗರಸಭೆ ಸಹಯೋಗದಲ್ಲಿ ಸೋಮವಾರ ನಗರದ ಬಳ್ಳಾರಿ ರಸ್ತೆಯ ಕಾಳಿಕಮ್ಮ ದೇವಸ್ಥಾನದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಶಿಲ್ಪಿಗಳು ದೇಶ ಹಾಗೂ ಈ ನಾಡಿನ ಸಂಸ್ಕೃತಿ, ರಾಜಕೀಯ, ಶೈಕ್ಷಣಿಕ ಮೂಲ ಪರಂಪರೆಗಳನ್ನು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಸೆರೆಹಿಡಿದಿಟ್ಟಿದ್ದಾರೆ. ಅಂತಹ ಶಿಲ್ಪಿಗಳಲ್ಲಿ ಅಮರಶಿಲ್ಪಿ ಜಕಣಾಚಾರಿಯವರು ಪ್ರಮುಖರಾಗಿದ್ದಾರೆ. ಜಕಣಾಚಾರಿ ಅವರು ಒಬ್ಬ ಐತಿಹಾಸಿಕ ವ್ಯಕ್ತಿಯಾಗಿದ್ದಾರೆ. ಹಲವಾರು ರಾಜಮನೆತನಗಳು ಆಳ್ವಿಕೆಯ ಪ್ರತಿಫಲವಾಗಿ ಶಿಲ್ಪ ಪರಂಪರೆಯಲ್ಲಿ ಕರ್ನಾಟಕವು ವಿಶ್ವವಿಖ್ಯಾತಿಯಾಗಿದೆ. ಹಳೇಬೀಡಿನಲ್ಲಿರುವ ಹೊಯ್ಸಳೇಶ್ವರ ಹಾಗೂ ಬೇಲೂರಿನ ಚನ್ನಕೇಶ್ವರ ದೇವಾಲಯಗಳು, ವಿಜಯನಗರ ಸಾಮ್ರಾಜ್ಯದ ಹಂಪಿ ಹಾಗೂ ರಾಜ್ಯದ ಇತರ ಐತಿಹಾಸಿಕ ಸ್ಥಳಗಳು ಜಗತ್ ಪ್ರಸಿದ್ಧವಾಗಿದ್ದು, ಕರುನಾಡಿನ ಶಿಲ್ಪಗಳ ವೈಭವವನ್ನು ನೋಡಲು ವಿಶ್ವಾದ್ಯಂತ ಎಲ್ಲ ಪ್ರವಾಸಿಗರು ಭೇಟಿ ನೀಡಿ, ನಮ್ಮ ಸಂಸ್ಕೃತಿಯನ್ನು ಕೊಂಡಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿಶ್ವಜಿತ್ ಮೆಹ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ತಹಸೀಲ್ದಾರ್ ಷಣ್ಮುಖ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.