ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ

| Published : May 05 2024, 02:05 AM IST

ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಡಿಎ ಅಭ್ಯರ್ಥಿ ಜೆಡಿಎಸ್ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಎನ್‌ಡಿಎ ಅಭ್ಯರ್ಥಿ ಜೆಡಿಎಸ್ ಪಕ್ಷದ ಸಂಸದ ಪ್ರಜ್ವಲ್ ರೇವಣ್ಣರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ನಗರದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಭುವನೇಶ್ಚರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

ಸೆಕ್ಸ್‌ ಸ್ಯಾಂಡಲ್‌ ಅನ್ನುವುದರಲ್ಲಿ ಅನುಮಾನವಿಲ್ಲ: ಈ ವೇಳೆ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್ ಮಾತನಾಡಿ, ನರೇಂದ್ರ ಮೋದಿಯ ಪರಮಾಪ್ತ ಪಕ್ಷವಾದ ಜೆಡಿಎಸ್‌ ಸಂಸದ, ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿ ಆ ನೀಚ ಕೃತ್ಯಗಳನ್ನು ಚಿತ್ರೀಕರಣ ಮಾಡಿ ಕೊಂಡಿರುವ ಸಂತ್ರಸ್ತ ಮಹಿಳೆಯರೇ ದೂರು ಕೊಟ್ಟಿದ್ದಾರೆ. ಇದು ದೇಶದ ಅತಿ ದೊಡ್ಡ ಸೆಕ್ಸ್ ಸ್ಯಾಂಡಲ್ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಈ ನೀಚ ಕೃತ್ಯದಲ್ಲಿ ಜೆಡಿಎಸ್ ಪಕ್ಷದ ಹಿರಿಯ ನಾಯಕ ರೇವಣ್ಣ ಕೂಡ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಕೋಮು ದ್ವೇಷವನ್ನು ಹರಡುವ ಏಕೈಕ ಉದ್ದೇಶದಿಂದ ಹುಬ್ಬಳ್ಳಿಯ ನೇಹಾ ಪ್ರೇಮ ವೈಫಲ್ಯ ಕೊಲೆ ಪ್ರಕರಣವನ್ನು ಹಿಂದೂ ಮುಸ್ಲಿಂ ಮಾಡಿ ರಾದ್ಧಾಂತ ಮಾಡಿದ ಮೋದಿ ತಂಡ ಪ್ರಜ್ವಲ್ ಕುರಿತು ಒಂದೇ ಒಂದು ಹೋರಾಟ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಈ ಪ್ರಕರಣದಲ್ಲಿ ನೊಂದಿರುವ ಸಾವಿರಾರು ಮಹಿಳೆಯರು ಹಿಂದೂಗಳಲ್ಲವೇ. ಆರೋಪಿ ಮುಸ್ಲಿಂ ಆಗಿದ್ದರೆ ಮಾತ್ರ ಆಕ್ರೋಶವೆ. ಪಶ್ಚಿಮ ಬಂಗಾಳದ ಸಂದೇಶನಲ್ಲಿ ಇಂತಹದ್ದೇ ಘಟನೆಯಲ್ಲಿ ಪ್ರಧಾನಿ ಮೋದಿ ಸಂತ್ರಸ್ತ ಮಹಿಳೆಯರನ್ನು ಖದ್ದು ಭೇಟಿ ಮಾಡಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ಈ ಪ್ರಕರಣದಲ್ಲಿ ತುರ್ತಾಗಿ ಕ್ರಮ ಕೈಗೊಂಡಿತ್ತು ಎಂದರು, ಪ್ರಜ್ವಲ್ ಪ್ರಕರಣದಲ್ಲಿ ಇದ್ಯಾವುದೂ ಇಲ್ಲ. ರಾಷ್ಟ್ರೀಯ ಮಹಿಳಾ ಆಯೋಗದಿಂದ ಕನಿಷ್ಟ ನೋಟಿಸ್ ಸಹ ಜಾರಿಯಾಗಿಲ್ಲ. ಇದು ಎಂತಹ ಭೇದಭಾವ ಮನಸ್ಥಿತಿ. ಈ ನೀಚ ಕೃತ್ಯ ಮತ್ತು ಕೇಂದ್ರ ಸರ್ಕಾರದ ನಡೆಯನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ. ಎಂದರು,ಇದೊಂದು ಅಮಾನವೀಯ, ವಿಕೃತಕಾಮಿಯ ಮನಸ್ಥಿತಿಯನ್ನು ಪ್ರದರ್ಶಿಸುವ ಕೃತ್ಯವಾಗಿದ್ದು, ತನ್ನ ತಾಯಿಯ ವಯಸ್ಸಿನ ಮಹಿಳೆ, ಅವರು ಕೈಮುಗಿದು ಬೇಡುತ್ತಿದ್ದರೂ ಸಹ ಆ ತಾಯಿಯನ್ನು ಬಿಡದೆ ತನ್ನ ಲೈಂಗಿಕ ತೃಷೆಗೆ ಅವರನ್ನು ಬಳಸಿಕೊಂಡಿರುವುದರ ಕುರಿತು ಸುದ್ದಿ ಬಂದಿದೆ. ಇಂಥಹ ನೀಚ ಮನಸ್ಥಿತಿಯ ವ್ಯಕ್ತಿ ರಾಜಕಾರಣದಲ್ಲಿ ಮಾತ್ರವಲ್ಲ, ಸಮಾಜದಲ್ಲಿರಲೂ ಸಹ ನಾಲಾಯಕ್ಕಾಗಿರುತ್ತಾನೆ. ಇಂತಹ ಕ್ರಿಮಿ ದೇಶ ತೊರೆಯಲು ಸಹಕರಿಸಿದವರು ಯಾರು ಎಂಬ ಬಗ್ಗೆಯೂ ತನಿಖೆಯಾಗಬೇಕು. ಪ್ರಜ್ವಲ್ ಹಾಗೂ ರೇವಣ್ಣ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ತಕ್ಷಣ ಅವರನ್ನು ಬಂಧಿಸಿ ಜೈಲಿಗೆ ಹಾಕ ಬೇಕು. ತದನಂತರ ತನಿಖೆ ಪ್ರಾರಂಭಿಸಬೇಕು ಎಂದರು ಆಗ್ರಹಿಸಿದರು.ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಈ ಪ್ರಕರಣದಲ್ಲಿ ನೊಂದ, ಶೋಷಣೆಗೆ ಒಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿಕೊಡಲು ಮುಂದಾಗಿರುವುದೂ ಕೂಡ ಸ್ವಾಗತಾರ್ಹ. ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವವರ ಹಾಗೂ ಈ ಕೃತ್ಯಕ್ಕೆ ಪರೋಕ್ಷವಾಗಿ ಸಹಕಾರ ನೀಡಿರುವವರ ವಿರುದ್ಧ ಸಹ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಸೈಯದ್ ಅರೀಫ್, ಪ್ರಧಾನಕಾರ್ಯದರ್ಶಿ ಎಂ. ಮಹೇಶ್, ಕಾರ್ಯದರ್ಶಿ ಜಬೀನೂರ್, ಖಜಾಂಚಿ ನಯಾಜ್‌ವುಲ್ಲಾ, ನಗರಸಭಾ ಸದಸ್ಯಕಲೀಲ್‌ವುಲ್ಲಾ, ಮಹಮ್ಮದ್ ಅಮಿಕ್, ಮುಖಂಡ ಅಜೀಮ್ ಷರೀಪ್, ಇಸ್ರಾರ್ ಪಾಷ, ಸುಶೀಲ, ಸಂಘಸೇನಾ, ಬಂಗಾರಸ್ವಾಮಿ ಇತರರು ಭಾಗವಹಿಸಿದ್ದರು.