ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ದ.ಕ.ಜಿಲ್ಲೆ ಈ ಬಾರಿ ಶೇ.97.37 ಫಲಿತಾಂಶ ದಾಖಲಿಸುವುದರೊಂದಿಗೆ ನಿರಂತರ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಉಡುಪಿ ಶೇ.96.80 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ಕಳೆದ ಸಾಲಿನಲ್ಲಿ ದ.ಕ. ಶೇ.95.33, ಉಡುಪಿ ಶೇ.95.24 ಫಲಿತಾಂಶ ಪಡೆದಿತ್ತು. ಈ ಬಾರಿ ದ.ಕ. ಜಿಲ್ಲೆ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ, ಕಲಾ ವಿಭಾಗದಲ್ಲಿ ಐದನೇ ಸ್ಥಾನ ಪಡೆದಿದೆ. ಒಟ್ಟು 11 ಸ್ಥಾನಗಳನ್ನು ಪಡೆದುಕೊಂಡಿದೆ.2021-22ನೇ ಸಾಲಿನಿಂದ ದ.ಕ.ಜಿಲ್ಲೆ ರಾಜ್ಯದಲ್ಲಿ ನಿರಂತರ ಪ್ರಥಮ ಸ್ಥಾನದಲ್ಲಿದೆ. ಕೊರೋನಾ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಂಡಿತ್ತು. 2021-22ನೇ ಸಾಲಿನಲ್ಲಿ ಶೇ.88.02 ಹಾಗೂ 2022-23ನೇ ಸಾಲಿನಲ್ಲಿ ಶೇ.95.33 ಫಲಿತಾಂಶ ದಾಖಲಿಸಿತ್ತು.
ಒಟ್ಟು 11 ಸ್ಥಾನ:ದ.ಕ.ಜಿಲ್ಲೆಗೆ ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಒಟ್ಟು 11 ಸ್ಥಾನ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಪಿಯು ಕಾಲೇಜಿನ ತುಳಸಿ ಪೈ 596 ಅಂಕಗಳೊಂದಿಗೆ ಟಾಪರ್‌ನಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ಗುಣಸಾಗರ್ 597 ಅಂಕಗಳೊಂದಿಗೆ ಟಾಪರ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಉಳಿದಂತೆ ವಾಣಿಜ್ಯ ವಿಭಾಗದಲ್ಲಿ ಮಂಗಳೂರು ಕೆನರಾ ಪಿಯು ಕಾಲೇಜಿನ ಸಮೃದ್ಧಿ 594 ಅಂಕ ಗಳಿಸಿ ನಾಲ್ಕನೇ ಸ್ಥಾನ, ಮೂಡುಬಿದಿರೆ ಆಳ್ವಾಸ್‌ನ ಸುಧೀಂದ್ರ ಕಾಮತ್ ಐದನೇ ಸ್ಥಾನ, ವಿಜ್ಞಾನ ವಿಭಾಗದಲ್ಲಿ 595 ಅಂಕ ಪಡೆದ ಮೂಡುಬಿದಿರೆ ಆಳ್ವಾಸ್‌ನ ನೂತನ ಆರ್.ಗೌಡ, ಮೂಡುಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ಭಾರ್ಗವಿ, ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಿಖಿತಾ ನಾಲ್ಕನೇ ಹಾಗೂ 594 ಅಂಕ ಪಡೆದ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಶಾಶ್ವತಿ, ಪಲ್ಲವಿ ಹಾಗೂ ಅಕ್ಷತಾ ಕಾಮತ್ ಐದನೇ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ಪುರೋಹಿತ್ ಕುಳಿ ಬಿನ್ ರಾಜೇಂದ್ರ ಕುಮಾರ್ ಐದನೇ ಸ್ಥಾನ ಪಡೆದಿದ್ದಾರೆ. -----------ಟ್ಯೂಷನ್ ಇಲ್ಲದೆ ತುಳಸಿ ಪೈ ಟಾಪರ್!
ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ತುಳಸಿ ಪೈ ಅವರು ಟ್ಯೂಷನ್ ಇಲ್ಲದೆ ಈ ಸಾಧನೆ ಮಾಡಿದ್ದಾರೆ. ದ್ವಿತೀಯ ಸ್ಥಾನ ಪಡೆಯುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ ಎನ್ನುತ್ತಾರೆ. ಮುಂದೆ ಸಿಎ ಆಗುವ ಕನಸು ಇರಿಸಿದ್ದು, ಈಗಾಗಲೇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.ಎಸ್‌ಎಸ್‌ಎಲ್‌ಸಿಯಲ್ಲಿ 624 ಅಂಕ ಪಡೆದ ತುಳಸಿ ಪೈ ಟಾಪರ್ ಆಗಿದ್ದರು. ತುಂಬ ಶ್ರಮಪಟ್ಟು ಓದಿದ್ದೇನೆ. ಹೆತ್ತವರ, ಶಾಲಾ ಅಧ್ಯಾಪಕರ ಪ್ರೋತ್ಸಾಹ ನಿರಂತರ ಇತ್ತು. ಅಂದಂದಿನ ಪಾಠಗಳನ್ನು ಅಂದೇ ಮನದಟ್ಟು ಮಾಡಿಕೊಳ್ಳುತ್ತಿದ್ದೆ. ನನ್ನ ಸಹಪಾಠಿ ಸಮೃದ್ಧಿಗೂ ಟಾಪರ್ ಸ್ಥಾನ ಬರುವ ನಿರೀಕ್ಷೆ ಇತ್ತು ಎನ್ನುತ್ತಾರೆ.
ತುಳಸಿ ಪೈ ಅವರು ಭರತನಾಟ್ಯದಲ್ಲಿ ಜೂನಿಯರ್ ಪಾಸ್ ಆಗಿದ್ದಾರೆ. ಈಕೆಯ ತಂದೆ ವಿವೇಕ್ ಪೈ ಉದ್ಯಮಿಯಾಗಿದ್ದು, ತಾಯಿ ಉಷಾ ಪೈ ಮನೆ ವಾರ್ತೆ. ಸಹೋದರಿ ಎಸ್‌ಎಸ್‌ಎಲ್‌ಸಿ ಕಲಿಯುತ್ತಿದ್ದಾರೆ.ಚಿಕ್ಕಂದಿನಲ್ಲೇ ಸಮೃದ್ಧಿಗೆ ಸಿಎ ಕನಸು
ವಾಣಿಜ್ಯ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದ ಸಮೃದ್ಧಿಗೆ ಚಿಕ್ಕಂದಿನಲ್ಲೇ ಸಿಎ ಆಗಬೇಕು ಎಂಬ ಕನಸು ಹೊಂದಿದ್ದಳು. ಹಾಗಾಗಿಯೇ ಎಸ್‌ಎಸ್‌ಎಲ್‌ಸಿಯಲ್ಲಿ 624 ಅಂಕಗಳೊಂದಿಗೆ ಟಾಪರ್ ಆದರೂ ವಾಣಿಜ್ಯ ವಿಷಯವನ್ನೇ ಆಯ್ಕೆ ಮಾಡಿಕೊಂಡಿದ್ದಳು. ಈಕೆ ಹಾಗೂ ತುಳಸಿ ಪೈ ಒಟ್ಟಿಗೆ ಓದುತ್ತಿದ್ದಾರೆ, ಸಿಎ ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದಾರೆ. ಬಾಲ್ಯದಲ್ಲಿ ಕರಾಟೆ ಕಲಿತಿದ್ದಾಳೆ. ರಾಷ್ಟ್ರ ಮಟ್ಟದ ಡ್ರಾಯಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಳೆ. ಎಲ್ಲರ ಪ್ರೋತ್ಸಾಹದಿಂದ ಈ ಸ್ಥಾನ ಲಭಿಸಿದೆ ಎನ್ನುತ್ತಾಳೆ. ಈಕೆಯೂ ಟ್ಯೂಷನ್‌ಗೆ ಹೋಗಿಲ್ಲ. ದೇವರ ಆಶೀರ್ವಾದ ನನ್ನ ಈ ಎಲ್ಲ ಸಾಧನೆಗೆ ಕಾರಣ ಎನ್ನುತ್ತಾಳೆ. ಮೂಲತಃ ಬಂಟ್ವಾಳ ನಿವಾಸಿಯಾದ ಈಕೆ, ಸದ್ಯ ಮಂಗಳೂರಲ್ಲಿ ಓದುತ್ತಿದ್ದಾಳೆ. ಈಕೆಯ ತಂದೆ ಶರತ್ ನಾಯಕ್ ಉದ್ಯಮಿ, ತಾಯಿ ಲಲಿತ ಗೃಹಿಣಿ.